ತೆರಿಗೆ ವಂಚನೆ ; ಎ.ಆರ್​. ರೆಹಮಾನ್​ ವಿರುದ್ಧ ಐಟಿ  ಇಲಾಖೆ ಪ್ರಕರಣ ದಾಖಲು 

11-09-20 09:11 pm       Headline Karnataka News Network   ದೇಶ - ವಿದೇಶ

ಎ.ಆರ್. ರೆಹಮಾನ್​ಗೆ ತೆರಿಗೆ ವಂಚನೆ ವಿಚಾರದಲ್ಲಿ ಮದ್ರಾಸ್​ ಹೈಕೋರ್ಟ್ ನೋಟಿಸ್​ ನೀಡಿದೆ.

ಚೆನ್ನೈ, ಸೆಪ್ಟೆಂಬರ್ 11: ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್​ಗೆ ತೆರಿಗೆ ವಂಚನೆ ವಿಚಾರದಲ್ಲಿ ಮದ್ರಾಸ್​ ಹೈಕೋರ್ಟ್ ನೋಟಿಸ್​ ನೀಡಿದೆ. 2011ರಲ್ಲಿ ತೆರಿಗೆ ತಪ್ಪಿಸುವ ಯತ್ನದಲ್ಲಿ ವಿದೇಶಿ ಸಂಸ್ಥೆ ನೀಡಿದ್ದ ಸಂಭಾವನೆ ಮೊತ್ತವನ್ನು ತನ್ನದೇ ಚಾರಿಟಿಗೆ ನೀಡಿದ್ದು ಐಟಿ ಇಲಾಖೆಗೆ ಗೊತ್ತಾಗಿದ್ದು ಮದ್ರಾಸ್​ ಹೈಕೋರ್ಟ್ನಲ್ಲಿ ದೂರು ದಾಖಲಾಗಿತ್ತು. 

2011- 2012ರಲ್ಲಿ ಇಂಗ್ಲೆಂಡ್ ಮೂಲದ ಲಿಬ್ರಾ ಎನ್ನುವ ಮೊಬೈಲ್​ ಕಂಪನಿಗೆ ರೆಹಮಾನ್​ ರಿಂಗ್​ ಟೋನ್ ಸಂಯೋಜಿಸಿ ಕೊಟ್ಟಿದ್ದರು. ಅದಕ್ಕಾಗಿ ಲಿಬ್ರಾ ಸಂಸ್ಥೆ ರೆಹಮಾನ್​ಗೆ 3.47 ಕೋಟಿ ರೂ. ಸಂಭಾವನೆ ನೀಡಿತ್ತು. ಭಾರೀ ಮೊತ್ತದ ಸಂಭಾವನೆಯನ್ನು ಹಾಗೇ ಪಡೆದರೆ ತೆರಿಗೆಯೂ ತೆರಬೇಕಾಗುತ್ತದೆ ಎಂದು ಆ ಮೊತ್ತವನ್ನು ತನ್ನದೇ ಆದ ರೆಹಮಾನ್​ ಫೌಂಡೇಷನ್​ ಟ್ರಸ್ಟ್ ಖಾತೆಗೆ ಬರುವಂತೆ ನೋಡಿಕೊಂಡಿದ್ದರು.

ಆದರೆ, 2011-12ರ ಸಾಲಿನ ಐಟಿ ರಿಟರ್ನ್ ಸಲ್ಲಿಕೆ ಮಾಡುವ ವೇಳೆ ರೆಹಮಾನ್​ ಟ್ರಸ್ಟ್ ಮತ್ತು ವೈಯಕ್ತಿಕ ಖಾತೆಗೆ ಬಂದ ದುಡ್ಡಿನ ವಿವರ ನೀಡಿದ್ದರು.‌ ವಿದೇಶಿ ಸಂಸ್ಥೆ ನೀಡಿದ್ದ ದುಬಾರಿ ಮೊತ್ತದ ಉಲ್ಲೇಖವೂ ಇತ್ತು. ಈ ಮೊತ್ತ ಸಂಭಾವನೆ ರೂಪದ್ದು ಎಂಬುದನ್ನು ತಿಳಿದ ತೆರಿಗೆ ಇಲಾಖೆ ಅಧಿಕಾರಿಗಳು, ಹೈಕೋರ್ಟಿನಲ್ಲಿ ಪ್ರಕರಣ ದಾಖಲು ಮಾಡಿತ್ತು‌. ತೆರಿಗೆ ವಂಚನೆ ದೂರು ಆಧರಿಸಿ ಮದ್ರಾಸ್​ ಹೈಕೋರ್ಟ್​ನ ದ್ವಿಸದಸ್ಯ ಪೀಠ ರೆಹಮಾನ್​ಗೆ ನೋಟಿಸ್​ ರವಾನಿಸಿದೆ.