ಅಸಮಾಧಾನಿತರಿಗೆ ಹೈಕಮಾಂಡ್ ಶಿಕ್ಷೆ ; ವೀರಪ್ಪ ಮೊಯ್ಲಿ , ಗುಲಾಂ ನಬಿ, ಖರ್ಗೆ ಕಿಕ್ ಔಟ್ ! ಎಐಸಿಸಿಗೆ ಹೊಸ ಉಸ್ತುವಾರಿಗಳ ನೇಮಕ 

11-09-20 11:36 pm       Headline Karnataka News Network   ದೇಶ - ವಿದೇಶ

ಕಾಂಗ್ರೆಸ್ ಪಕ್ಷಕ್ಕೆ ಪೂರ್ಣಾವಧಿ ಅಧ್ಯಕ್ಷರ ನೇಮಕ ವಿಚಾರದಲ್ಲಿ ಹಿರಿಯ ನಾಯಕರ ಅಸಮಾಧಾನ ಭುಗಿಲೆದ್ದಿರುವ ಹೊತ್ತಲ್ಲೇ ದಿಢೀರ್ ಆಗಿ ಎಐಸಿಸಿ ಉಸ್ತುವಾರಿಗಳ ಪುನಾರಚನೆ ಮಾಡಲಾಗಿದೆ.

ನವದೆಹಲಿ, ಸೆಪ್ಟೆಂಬರ್ 11: ಕಾಂಗ್ರೆಸ್ ಪಕ್ಷಕ್ಕೆ ಪೂರ್ಣಾವಧಿ ಅಧ್ಯಕ್ಷರ ನೇಮಕ ವಿಚಾರದಲ್ಲಿ ಹಿರಿಯ ನಾಯಕರ ಅಸಮಾಧಾನ ಭುಗಿಲೆದ್ದಿರುವ ಹೊತ್ತಲ್ಲೇ ದಿಢೀರ್ ಆಗಿ ಎಐಸಿಸಿ ಉಸ್ತುವಾರಿಗಳ ಪುನಾರಚನೆ ಮಾಡಲಾಗಿದೆ. ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಚುನಾವಣಾ ಸಮಿತಿ ಸ್ಥಾನದಿಂದ ಹಿರಿಯ ಮುಖಂಡ ವೀರಪ್ಪ ಮೊಯ್ಲಿಯನ್ನು ಕಿತ್ತು ಹಾಕಲಾಗಿದೆ. ಮೊಯ್ಲಿ ಜಾಗಕ್ಕೆ ಕರ್ನಾಟಕದವರೇ ಆದ ಮಾಜಿ ಸಚಿವ ಕೃಷ್ಣಭೈರೇ ಗೌಡರನ್ನು ನೇಮಕ ಮಾಡಲಾಗಿದೆ. ಅಲ್ಲದೆ, ಕರ್ನಾಟಕದ ದಿನೇಶ್ ಗುಂಡೂರಾವ್, ಎಚ್.ಕೆ ಪಾಟೀಲ್ ಅವರಿಗೆ ಇತರೇ ರಾಜ್ಯಗಳ ಉಸ್ತುವಾರಿ ಹೊಣೆ ನೀಡಲಾಗಿದೆ. ‌ದಿನೇಶ್ ಗುಂಡೂರಾವ್ ಗೆ ತಮಿಳುನಾಡು ಜೊತೆಗೆ ಪಾಂಡಿಚೇರಿ, ಗೋವಾ ರಾಜ್ಯಗಳ ಹೆಚ್ಚುವರಿ ಹೊಣೆ ವಹಿಸಲಾಗಿದೆ. ಉತ್ತರ ಕರ್ನಾಟಕದ ಹಿರಿಯ ಮುಖಂಡ ಎಚ್.ಕೆ ಪಾಟೀಲ್ ಗೆ ಮಹಾರಾಷ್ಟ್ರ ಕಾಂಗ್ರೆಸ್ ಉಸ್ತುವಾರಿ ನೀಡಲಾಗಿದೆ. 

ಹಾಗೆಯೇ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಆಗಿದ್ದ ಕೆ.ಸಿ. ವೇಣುಗೋಪಾಲ್ ಸ್ಥಾನಕ್ಕೆ ರಣದೀಪ್ ಸಿಂಗ್ ಸುರ್ಜೇವಾಲಾರನ್ನು ತರಲಾಗಿದೆ. ಅಲ್ಲದೆ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಮಲ್ಲಿಕಾರ್ಜುನ ಖರ್ಗೆ ಮತ್ತು ಗುಲಾಂ ನಬಿ ಆಜಾದ್ ಅವರನ್ನೂ ತೆಗೆದು ಹಾಕಲಾಗಿದೆ. ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷ ಎ.ವಿ. ಶ್ರೀನಿವಾಸ್ ಅವರನ್ನು ಎಐಸಿಸಿ ವಿಶೇಷ ಆಹ್ವಾನಿತರಾಗಿ ನೇಮಕ ಮಾಡಲಾಗಿದೆ.  

ಇತ್ತೀಚೆಗೆ ವೀರಪ್ಪ ಮೊಯ್ಲಿ , ಗುಲಾಂ ನಬಿ ಆಜಾದ್, ಕಪಿಲ್ ಸಿಬಲ್, ಶಶಿ ತರೂರ್ ಸೇರಿದಂತೆ 23 ಮಂದಿ ಹಿರಿಯ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಪೂರ್ಣಾವಧಿ ಅಧ್ಯಕ್ಷರ ಅಗತ್ಯದ ಬಗ್ಗೆ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದರು. ಪತ್ರ ಮಾಧ್ಯಮಕ್ಕೆ ಬಹಿರಂಗ ಆಗಿದ್ದು ಗಾಂಧಿ ಕುಟುಂಬ ಮತ್ತು ಎಐಸಿಸಿ ಪ್ರಮುಖರ ಅಸಮಾಧಾನಕ್ಕೆ ಕಾರಣವಾಗಿತ್ತು. ಆನಂತರ ಗುಲಾಂ ನಬಿ ಆಜಾದ್ ಮತ್ತು ವೀರಪ್ಪ ಮೊಯ್ಲಿ ತಾವು ಪತ್ರಕ್ಕೆ ಸಹಿ ಹಾಕಿದ್ದನ್ನು ಒಪ್ಪಿಕೊಂಡಿದ್ದರಲ್ಲದೆ, ಪಕ್ಷದ ಒಳಿತಿಗಾಗಿ ಪತ್ರ ಬರೆದಿದ್ದು ಸತ್ಯ ಎಂದಿದ್ದರು. ಇದೀಗ ವೀರಪ್ಪ ಮೊಯ್ಲಿಯನ್ನು ಕೇಂದ್ರ ಚುನಾವಣಾ ಸಮಿತಿಯಿಂದ ಹೊರಗಿಡಲಾಗಿದೆ. ಗುಲಾಂ ನಬಿ ಆಜಾದನ್ನು ರಾಷ್ಟ್ರೀಯ ಕಾರ್ಯದರ್ಶಿ ಹುದ್ದೆಯಿಂದ ತೆಗೆದು ಹಾಕಲಾಗಿದೆ.