ದೆಹಲಿ ಗಲಭೆ ; ಚಾರ್ಜ್ ಶೀಟ್ ನಲ್ಲಿ ಸೀತಾರಾಂ ಯೆಚೂರಿ, ಯೋಗೇಂದ್ರ ಯಾದವ್ ಹೆಸರು !

13-09-20 01:27 pm       Headline Karnataka News Network   ದೇಶ - ವಿದೇಶ

ಕಳೆದ ಫೆಬ್ರವರಿಯಲ್ಲಿ ಸಿಎಎ ಕಾಯ್ದೆ ವಿರೋಧಿಸಿ ನಡೆದ ಗಲಭೆಯಲ್ಲಿ ಸೀತಾರಾಂ ಯೆಚೂರಿ, ಯೋಗೇಂದ್ರ ಯಾದವ್ ಹಾಗೂ ಜಯತಿ ಘೋಷ್ಹೆ ಹೆಸರು ಸದ್ಯಕ್ಕೆ ಆರೋಪಿ ಪಟ್ಟಿಯಲ್ಲಿ ಕೇಳಿಬಂದಿದೆ

ನವದೆಹಲಿ, ಸೆಪ್ಟಂಬರ್.13: ದೆಹಲಿ ಗಲಭೆಗೆ ಸಂಬಂಧಿಸಿ ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ಮಾಜಿ ಆಪ್ ಮುಖಂಡ ಯೋಗೇಂದ್ರ ಯಾದವ್, ಆರ್ಥಿಕ ತಜ್ಞೆ ಜಯತಿ ಘೋಷ್, ದೆಹಲಿ ಯುನಿವರ್ಸಿಟಿ ಪ್ರೊಫೆಸರ್ ಅಪೂರ್ವಾನಂದ ಅವರ ಹೆಸರನ್ನು ಪೊಲೀಸರು ಆರೋಪಪಟ್ಟಿಯಲ್ಲಿ ಸೇರಿಸಿದ್ದಾರೆ.

ಕಳೆದ ಫೆಬ್ರವರಿಯಲ್ಲಿ ಸಿಎಎ ಕಾಯ್ದೆ ವಿರೋಧಿಸಿ ನಡೆದ ಗಲಭೆಯಲ್ಲಿ ಬಂಧಿತರಾದ ಜೆಎನ್ ಯು ಮತ್ತು ಜಾಮಿಯಾ ವಿವಿಯ ವಿದ್ಯಾರ್ಥಿಗಳು ನೀಡಿರುವ ಮಾಹಿತಿ ಆಧರಿಸಿ ಪೊಲೀಸರು ಹೆಚ್ಚುವರಿ ಆರೋಪಪಟ್ಟಿ ದಾಖಲಿಸಿದ್ದು, ಅದರಲ್ಲಿ ಯೆಚೂರಿ ಸೇರಿದಂತೆ ಹಲವರ ಹೆಸರು ಸೇರ್ಪಡೆಯಾಗಿದೆ. ಗಲಭೆಗೆ ಪ್ರಚೋದನೆ ಮತ್ತು ಸಂಚು ರೂಪಿಸಿದ ಆರೋಪವನ್ನು ಇವರ ಮೇಲೆ ಹೊರಿಸಲಾಗಿದೆ.

ಫೆಬ್ರವರಿ 23ರಿಂದ 26ರ ವರೆಗೆ ನಡೆದಿದ್ದ ಗಲಭೆಯನ್ನು ಹತ್ತಿಕ್ಕಲು ಪೊಲೀಸರು ಗೋಲಿಬಾರ್ ನಡೆಸಿದ್ದರು. ಗಲಭೆಯಲ್ಲಿ 53 ಮಂದಿ ಸಾವಿಗೀಡಾಗಿದ್ದರೆ, 581 ಮಂದಿ ಗಾಯಗೊಂಡಿದ್ದರು. ಜಯತಿ ಘೋಷ್, ಅಪೂರ್ವಾನಂದ ಮತ್ತು ರಾಹುಲ್ ರಾಯ್ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಜಾಮಿಯಾ ಕೋರ್ಡಿನೇಶನ್ ಕಮಿಟಿಗಳ ಪ್ರತಿಭಟನೆಗೆ ಬೆಂಬಲವಾಗಿ ನಿಂತಿದ್ದರು. ಸಿಎಎ ಪ್ರತಿಭಟನೆ ಇನ್ನಷ್ಟು ಮುಂದುವರಿಯುವಂತೆ ಹಿಂಭಾಗದಿಂದ ಸಂಚು ರೂಪಿಸುತ್ತಿದ್ದರು. ಪ್ರತಿಭಟನೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬೇಡಿ ಎಂದು ಪ್ರಚೋದನೆ ನೀಡುತ್ತಿದ್ದುದಾಗಿ ಬಂಧಿತ ಜೆಎನ್ ಯು ವಿದ್ಯಾರ್ಥಿನಿಯರಾದ ದೇವಾಂಗನ ಕಲಿತಾ ಮತ್ತು ನಟಾಶಾ ನರ್ವಾಲ್ ಪೊಲೀಸರಿಗೆ ಹೇಳಿಕೆ ನೀಡಿದ್ದರು.

ಸೀತಾರಾಂ ಯೆಚೂರಿ, ಯೋಗೇಂದ್ರ ಯಾದವ್, ಭೀಮ್ ಆರ್ಮಿ ಚೀಫ್ ಚಂದ್ರಶೇಖರ್ ರಾವಣ್, ಉಮರ್ ಖಾಲಿದ್, ಲಾಯರ್ ಮಹಮೂದ್ ಪ್ರಾಚಾ ಹೀಗೆ ಪ್ರಮುಖ ನಾಯಕರು ಸೇರಿ ನಮ್ಮನ್ನು ಪ್ರಚೋದಿಸಿದ್ದರು. ವಿದ್ಯಾರ್ಥಿಗಳೆಲ್ಲ ಸೇರಿ ಭಾರತ ಸರಕಾರದ ಪ್ರತಿಷ್ಠೆ, ಗೌರವಕ್ಕೆ ಧಕ್ಕೆ ಬರುವಂತೆ ಜನರನ್ನು ಸೇರಿಸಿ ಘೋಷಣೆ ಕೂಗುವಂತೆ ಪ್ರೇರಣೆ ನೀಡಿದ್ದರು ಎಂದು ಜಾಮಿಯಾ ವಿವಿಯ ವಿದ್ಯಾರ್ಥಿನಿ ಫಾತಿಮಾ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾಳೆ.

Join our WhatsApp group for latest news updates