ಆರ್ ಜೆಡಿ ತೊರೆಯಲು ನಿರ್ಧರಿಸಿದ ಎರಡೇ ದಿನದಲ್ಲಿ ರಘುವಂಶ ಪ್ರಸಾದ್ ನಿಧನ !

13-09-20 02:24 pm       Headline Karnataka News Network   ದೇಶ - ವಿದೇಶ

ಆರು ಬಾರಿ ಸಂಸದರಾಗಿ ಮೂರು ಬಾರಿ ಕೇಂದ್ರ ಸಚಿವರಾಗಿದ್ದ, ಹಾಗೂ ಮೊನ್ನೆಯವರೆಗೂ ಲಾಲೂ ನಿಷ್ಠರಾಗಿ ಆರ್​ಜೆಡಿ ಜೊತೆಗಿದ್ದ ರಘುವಂಶ್ ಪ್ರಸಾದ್ ಸಿಂಗ್ ಅವರು ಕೋವಿಡ್ ರೋಗಕ್ಕೆ ಬಲಿಯಾಗಿದ್ದಾರೆ.

ನವದೆಹಲಿ, ಸೆಪ್ಟಂಬರ್ 13: ಬಿಹಾರದಲ್ಲಿ ಆರ್ ಜೆಡಿ ಪಕ್ಷ ತ್ಯಜಿಸುವುದಾಗಿ ಹೇಳಿದ್ದ ಲಾಲೂ ಪ್ರಸಾದ್ ಯಾದವ್ ಅವರ ಒಂದು ಕಾಲದ ಪರಮಾಪ್ತ ರಘುವಂಶ ಪ್ರಸಾದ್ ಸಿಂಗ್ ಎರಡೇ ದಿನಗಳ ಅಂತರದಲ್ಲಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ಕೊರೊನಾ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ಸೇರಿಸಲಾಗಿತ್ತು. 74 ವರ್ಷವಾಗಿದ್ದ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ವಾರದ ಹಿಂದಷ್ಟೆ ರಘುವಂಶ ಪ್ರಸಾದ್, ತಮ್ಮ ಸುದೀರ್ಘ ಕಾಲದ ಒಡನಾಡಿ ಲಾಲೂ ಯಾದವರ ಆರ್ ಜೆಡಿ ಪಕ್ಷ ತೊರೆಯುವ ಬಗ್ಗೆ ಪ್ರಕಟಿಸಿದ್ದರು. ಈ ಬಗ್ಗೆ ಪಕ್ಷದ ವರಿಷ್ಠರಿಗೆ ಪತ್ರ ಬರೆದು ಆಘಾತ ಮೂಡಿಸಿದ್ದರು. ಆದರೆ, ಈಗ ಪಕ್ಷ ರಾಜಕಾರಣದ ಜೊತೆಗೆ ದಿಢೀರ್ ಆಗಿ ಲೋಕವನ್ನೇ ತೊರೆದು ಹೋಗಿದ್ದಾರೆ. ಕಳೆದ 32 ವರ್ಷಗಳಿಂದ ಲಾಲೂ ಪ್ರಸಾದ್ ಯಾದವರ ಆಪ್ತ ಬಳಗದಲ್ಲಿ ಗುರುತಿಸಿದ್ದ ರಘುವಂಶ ಪ್ರಸಾದ್, ಪಕ್ಷ ತೊರೆದಿದ್ದು ಬಿಹಾರ ರಾಜಕೀಯದಲ್ಲಿ ಸಂಚಲನ ಮೂಡಿಸಿತ್ತು. ರಘುವಂಶ್ ನಿಧನದಿಂದಾಗಿ ಬಿಹಾರ ರಾಜಕೀಯದಲ್ಲಿ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ.

ಆರ್ ಜೆಡಿ ಪಕ್ಷದಲ್ಲಿ ಲಾಲೂ ಪುತ್ರ ತೇಜಸ್ವಿ ಯಾದವ್ ಹಿಡಿತ ಸಾಧಿಸಿದ್ದನ್ನು ಸಹಿಸದ ರಘುವಂಶ ಪ್ರಸಾದ್, ಪಕ್ಷ ತೊರೆಯಲು ನಿರ್ಧರಿಸಿದ್ದಲ್ಲದೆ, ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಜೆಡಿಯು ಸೇರಲು ಬಯಸಿದ್ದರು. ವಾರದ ಹಿಂದಷ್ಟೇ ಲಾಲೂಗೆ ಬರೆದ ಪತ್ರದಲ್ಲಿ ಪಕ್ಷದ ಬಗೆಗಿನ ಅತೃಪ್ತಿಯನ್ನು ಹೊರಹಾಕಿದ್ದರು. 

Join our WhatsApp group for latest news updates