ಶಿವಸೇನೆಗೆ ಮಗ್ಗುಲ ಮುಳ್ಳಾದ ಕಂಗನಾ, ಕೊನೆಗೂ ಮುಂಬೈ ಬಿಟ್ಟು ನಿರ್ಗಮನ !

14-09-20 03:46 pm       Headline Karnataka News Network   ದೇಶ - ವಿದೇಶ

ಶಿವಸೈನಿಕರ ಬೆದರಿಕೆ ಲೆಕ್ಕಿಸದೆ ಮುಂಬೈಗೆ ಬಂದು ಶಿವಸೇನೆ ಮತ್ತು ಮಹಾರಾಷ್ಟ್ರ ಸರಕಾರದ ಜೊತೆ ಜಟಾಪಟಿಗಿಳಿದಿದ್ದ ನಟಿ ಕಂಗನಾ ರಣೌತ್ ಮುಂಬೈ ಬಿಟ್ಟು ತೆರಳಿದ್ದಾರೆ.

ಮುಂಬೈ, ಸೆಪ್ಟಂಬರ್ 14: ಶಿವಸೈನಿಕರ ಬೆದರಿಕೆ ಲೆಕ್ಕಿಸದೆ ಮುಂಬೈಗೆ ಬಂದು ಶಿವಸೇನೆ ಮತ್ತು ಮಹಾರಾಷ್ಟ್ರ ಸರಕಾರದ ಜೊತೆ ಜಟಾಪಟಿಗಿಳಿದಿದ್ದ ನಟಿ ಕಂಗನಾ ರಣೌತ್ ಮುಂಬೈ ಬಿಟ್ಟು ತೆರಳಿದ್ದಾರೆ. ತನ್ನ ಸ್ವಂತ ಊರು ಹಿಮಾಚಲ ಪ್ರದೇಶದ ಮನಾಲಿಗೆ ನಿರ್ಗಮಿಸುವ ಮಧ್ಯೆ ಕಂಗನಾ ಮತ್ತೆ ಟ್ವೀಟ್ ಮಾಡಿದ್ದು, ತನ್ನ ಮಾತುಗಳಿಗೆ ಬದ್ಧಳಿರುವುದಾಗಿ ಪುನರುಚ್ಚರಿಸಿದ್ದಾರೆ.

ಮುಂಬೈಯಿಂದ ಒಡೆದ ಹೃದಯದೊಂದಿಗೆ ಹಿಂತಿರುಗುತ್ತಿದ್ದೇನೆ. ಶಿವಸೈನಿಕರು ನಿರಂತರ ದಾಳಿಯಿಂದ ನನ್ನನ್ನು ಭೀತಿಗೊಳಿಸಿದ್ದರು. ಮುಂಬೈಯನ್ನು ನಾನು ಪಿಓಕೆಗೆ ಹೋಲಿಸಿದ್ದಕ್ಕೇ ಇಷ್ಟೆಲ್ಲಾ ಮಾಡಿದ್ದಾರೆ. ಆದರೆ ನನ್ನ ಮಾತುಗಳಿಗೆ ಬದ್ಧಳಿದ್ದೇನೆ ಎಂದಿದ್ದಾರೆ. ಇಂದು ಬೆಳಗ್ಗೆ ಮುಂಬೈನಿಂದ ತನ್ನೂರಿಗೆ ಹೊರಟ ಕಂಗನಾ ಚಂಡೀಗಢ ತಲುಪಿದಾಗ ಹಿಂದಿಯಲ್ಲಿ ಟ್ಟೀಟ್ ವಾರ್ ಮುಂದುವರಿಸಿದ್ದಾರೆ. ಒಂದು ವಾರದಲ್ಲಿ ಮುಂಬೈನಲ್ಲಿದ್ದು ನಾನು ಬದುಕಿ ಬಂದಿದ್ದೇ ಹೆಚ್ಚು. ತುಂಬ ಆತಂಕದಿಂದಲೇ ಒಂದು ವಾರವನ್ನು ಕಳೆದಿದ್ದೇನೆ. ನನ್ನ ಕಚೇರಿಯನ್ನು ಪುಡಿಗಟ್ಟಿದರು. ಒಂದು ಕಾಲದಲ್ಲಿ ಮುಂಬೈ ನನ್ನನ್ನು ತಾಯಿಯಂತೆ ಸಲಹಿತ್ತು. ತಾಯಿ ಪ್ರೀತಿ ಸಿಕ್ಕಿತ್ತು. ಆದರೆ, ಈಗಿನ ಸನ್ನಿವೇಶದಲ್ಲಿ ನಾನು ಅಲ್ಲಿಂದ ಬದುಕಿ ಬರುತ್ತಿರುವುದೇ ಅದೃಷ್ಟ ಅನ್ನುವಂತಾಗಿದೆ. ಶಿವಸೇನೆ ಈಗ ಸೋನಿಯಾ ಸೇನೆ ಆಗಿದೆ. ಅಲ್ಲಿನ ಆಡಳಿತದಲ್ಲಿ ಭಯೋತ್ಪಾದಕರು ತುಂಬಿಕೊಂಡಿದ್ದಾರೆ ಎಂದು ಬರೆದಿದ್ದಾರೆ. ಅಲ್ಲದೆ, ಚಂಡೀಗಢದಿಂದ ದೂರ ಹೋಗುತ್ತಿದ್ದಂತೆ ನನ್ನ ಭದ್ರತೆಯೂ ಕಡಿಮೆಯಾಗಲಿದೆ. ಅಭಿಮಾನಿಗಳ ಹಾರೈಕೆಯಿಂದ ಸಹಜ ಬದುಕಿಗೆ ತೆರೆದುಕೊಳ್ಳಲಿದ್ದೇನೆ ಎಂದಿದ್ದಾರೆ.  

ಸುಶಾಂತ್ ಸಿಂಗ್ ಸಾವಿನ ವಿಚಾರದಲ್ಲಿ ಟ್ವೀಟ್ ವಾರ್ ನಡೆಸಿದ್ದ ಕಂಗನಾ ರನೌತ್ ಗೆ ಶಿವಸೇನೆ ಬೆದರಿಕೆ ಹಾಕಿತ್ತು. ನೀನು ಮುಂಬೈಗೆ ಬಂದರೆ ನೋಡಿಕೊಳ್ತೀವಿ ಎಂದಿದ್ದ ಸವಾಲನ್ನು ಸ್ವೀಕರಿಸಿದ್ದ ನಟಿ ಕಂಗನಾ, ವೈ ಪ್ಲಸ್ ಭದ್ರತೆಯೊಂದಿಗೆ ಕಳೆದ ವಾರ ಮುಂಬೈಗೆ ಬಂದಿದ್ದರು. ಆದರೆ ಮುಂಬೈಗೆ ಬಂದು ತನ್ನ ಕಚೇರಿ ತಲುಪುವಷ್ಟರಲ್ಲಿ ಶಿವಸೇನೆ ಸರಕಾರ ಆಕೆಯ ಕಚೇರಿ ಇದ್ದ ಕಟ್ಟಡವನ್ನು ಅಕ್ರಮ ಎಂಬ ಕಾರಣಕ್ಕೆ ಕೆಡವಲು ಶುರು ಮಾಡಿತ್ತು. ಆಬಳಿಕ ಬಾಂಬೈ ಹೈಕೋರ್ಟ್ ಕಟ್ಟಡ ಕೆಡಹುವುದಕ್ಕೆ ತಡೆ ಹಾಕಿತ್ತು. ಆದರೆ ಅಷ್ಟರಲ್ಲಿ ಕಚೇರಿಯ ಆಸುಪಾಸು ಕೆಡವಿ ಆಗಿತ್ತು. ಇದೇ ವಿಚಾರ ಕಂಗನಾ ಆಕ್ರೋಶಕ್ಕೆ ಕಾರಣವಾಗಿದ್ದಲ್ಲದೆ, ಶಿವಸೇನೆ ವಿರುದ್ಧ ನಿರಂತರ ಟ್ವೀಟ್ ವಾರ್ ನಡೆಸಿದ್ದು ದೇಶದ ಗಮನ ಸೆಳೆದಿತ್ತು. ಮಹಾರಾಷ್ಟ್ರ ಸರಕಾರವನ್ನೇ ಎದುರು ಹಾಕ್ಕೊಂಡ ದಿಟ್ಟ ಮಹಿಳೆ ಎಂಬ ಹೆಗ್ಗಳಿಕೆಯನ್ನೂ ಕಂಗನಾ ಪಡೆದಿದ್ದರು. ಐದು ದಿನ ಮುಂಬೈನಲ್ಲಿದ್ದ ಕಂಗನಾ, ಮಹಾರಾಷ್ಟ್ರ ಸರಕಾರದ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ರಾಜ್ಯಪಾಲರನ್ನು ಭೇಟಿಯಾಗಿದ್ದರು.