ಪುಲ್ವಾಮಾದಲ್ಲಿ ಮತ್ತೆ ಗುಂಡಿನ ಚಕಮಕಿ - ಇಬ್ಬರು ಯೋಧರಿಗೆ ಗಾಯ

15-09-20 10:53 am       Headline Karnataka News Network   ದೇಶ - ವಿದೇಶ

ಪುಲ್ವಾಮಾದಲ್ಲಿ ಮತ್ತೆ ಉಗ್ರರು ಹಾಗೂ ಭದ್ರತಾ ಸಿಬ್ಬಂದಿ ಮಧ್ಯೆ ಗುಂಡಿನ ಚಕಮಕಿ ಏರ್ಪಟ್ಟಿದ್ದು, ಈ ವೇಳೆ ಇಬ್ಬರು ಯೋಧರಿಗೆ ತೀವ್ರ ಗಾಯಗಳಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಶ್ರೀನಗರ, ಸೆಪ್ಟೆಂಬರ್ 15: ಪುಲ್ವಾಮಾದಲ್ಲಿ ಮತ್ತೆ ಉಗ್ರರು ಹಾಗೂ ಭದ್ರತಾ ಸಿಬ್ಬಂದಿ ಮಧ್ಯೆ ಗುಂಡಿನ ಚಕಮಕಿ ಏರ್ಪಟ್ಟಿದ್ದು, ಕಾರ್ಯಾಚಾರಣೆ ಇನ್ನೂ ಪ್ರಗತಿಯಲ್ಲಿದೆ. ಈ ವೇಳೆ ಇಬ್ಬರು ಯೋಧರಿಗೆ ತೀವ್ರ ಗಾಯಗಳಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.

ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಕಾಕಪುರ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆಯುತ್ತಿದ್ದು, ಈ ವೇಳೆ ಇಬ್ಬರು ಯೋಧರಿಗೆ ಗಾಯಗಳಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಲ್ಲದೆ ಈ ಪ್ರದೇಶದಲ್ಲಿ ಮೂವರು ಉಗ್ರರು ಸಿಲುಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾಕಪುರ ಪ್ರದೇಶದ ಮರ್ವಾಲ್ ಗ್ರಾಮದಲ್ಲಿ ಉಗ್ರರು ಅಡಗಿರುವ ಕುರಿತು ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆ ಸೇನೆಯ ಸಿಆರ್ ಪಿಎಫ್, 50 ಆರ್ ಆರ್ ಹಾಗೂ ಪೊಲೀಸರು ಜಂಟಿಯಾಗಿ ಪ್ರದೇಶವನ್ನು ಸುತ್ತುವರಿದು ಹುಡುಕುವ ಕಾರ್ಯಾಚರಣೆಯನ್ನು ನಡೆಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಂಟಿ ತಂಡಗಳು ಪ್ರದೇಶವನ್ನು ಸುತ್ತುವರಿಯುತ್ತಿದ್ದಂತೆ ಉಗ್ರರು ಭದ್ರತಾ ಸಿಬ್ಬಂದಿ ಮೇಲೆ ಗುಂಡು ಹಾರಿಸಲು ಆರಂಭಿಸಿದರು. ಈ ಮೂಲಕ ಎನ್‍ಕೌಂಟರ್‍ ಗೆ  ಪ್ರಚೋದನೆ ನೀಡಿದರು. ಇನ್ನೂ ಕಾರ್ಯಾಚರಣೆ ನಡೆಯುತ್ತಿದೆ. ಈ ವೇಳೆ ಉಗ್ರರು ಹಾಗೂ ಭದ್ರತಾ ಸಿಬ್ಬಂದಿ ಮಧ್ಯೆ ಗುಂಡಿನ ಚಕಮಕಿ ನಡೆದಿರುವ ಕುರಿತು ಪೊಲೀಸ್ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಮೂಲಗಳ ಪ್ರಕಾರ ಇಬ್ಬರು, ಮೂವರು ಉಗ್ರರು ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

Join our WhatsApp group for latest news updates