ಆನ್ಲೈನ್ ರಮ್ಮಿಯಿಂದ ಹೆಚ್ಚುತ್ತಿರುವ ಅಪರಾಧ ಚಟುವಟಿಕೆ ; ರಾಜ್ಯಸಭೆಯಲ್ಲಿ ಪ್ರತಿಧ್ವನಿ 

15-09-20 08:02 pm       Headline Karnataka News Network   ದೇಶ - ವಿದೇಶ

ದೇಶದಲ್ಲಿ ಆನ್‌ಲೈನ್ ರಮ್ಮಿಯನ್ನು ಪೂರ್ತಿಯಾಗಿ ನಿಷೇಧಿಸುವಂತೆ ರಾಜ್ಯಸಭೆ ಸಂಸದ ಕೆ.ಸಿ. ರಾಮಮೂರ್ತಿ ಆಗ್ರಹಿಸಿದ್ದಾರೆ. 

ನವದೆಹಲಿ, ಸೆಪ್ಟೆಂಬರ್ 15: ಯುವಕರ ನೆಚ್ಚಿನ ತಾಣ ಆನ್‌ಲೈನ್ ರಮ್ಮಿ ಗೇಮ್‍ ಈಗ ಸಂಸತ್ತಿನಲ್ಲಿಯೂ ಸದ್ದು ಮಾಡಿದೆ. ರಮ್ಮಿಯಿಂದಾಗಿ ಯುವಕರು ದಾರಿ ತಪ್ಪುತ್ತಿದ್ದು, ಅಪರಾಧ ಲೋಕಕ್ಕೆ ಕಾಲಿಡುತ್ತಿದ್ದಾರೆ. ದೇಶದಲ್ಲಿ ಆನ್‌ಲೈನ್ ರಮ್ಮಿಯನ್ನು ಪೂರ್ತಿಯಾಗಿ ನಿಷೇಧಿಸುವಂತೆ ರಾಜ್ಯಸಭೆ ಸಂಸದ ಕೆ.ಸಿ. ರಾಮಮೂರ್ತಿ ಆಗ್ರಹಿಸಿದ್ದಾರೆ. 

ಸಂಸತ್ತಿನ ಮುಂಗಾರು ಅಧಿವೇಶನ ಹಿನ್ನೆಲೆ ರಾಜ್ಯಸಭೆಯಲ್ಲಿ ಈ ಬಗ್ಗೆ ವಿಶೇಷ ಗಮನ ಸೆಳೆದ ಕೆ.ಸಿ ರಾಮಮೂರ್ತಿ, ಕ್ರಿಕೆಟಿಗ ಎಂ.ಎಸ್ ಧೋನಿ ಮತ್ತು ಅನೇಕ ನಟ- ನಟಿಯರು ಈ ಗೇಮ್ ಗಳಿಗೆ ಜಾಹೀರಾತು ನೀಡುತ್ತಿದ್ದಾರೆ. ಸೆಲೆಬ್ರಿಟಿಗಳ ಕಾರಣದಿಂದ ಪ್ರಮುಖವಾಗಿ ಯುವಕರು ಪ್ರೇರಣೆಗೊಳ್ಳುತ್ತಿದ್ದಾರೆ. ಹಣದ ದುರಾಸೆಯಲ್ಲಿ ಹೆಚ್ಚಿನ ಹಣವನ್ನು ಜೂಜಿನಲ್ಲಿಟ್ಟು ಕುಟುಂಬದ ನೆಮ್ಮದಿಯನ್ನು ಹಾಳು ಮಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಬೆಟ್ಟಿಂಗ್ ದಂಧೆಗೆ ಬೀಳುವ ಯುವಕರು ಆನ್‌ಲೈನ್ ಗೇಮ್ ವ್ಯಸನಿಗಳಾಗಿ ಬದಲಾಗುತ್ತಿದ್ದಾರೆ. ವಿಶೇಷ ಜಾಹೀರಾತು ಬಳಸಿ ಇದು ಲಾಭದಾಯಕ ಎಂದು ಬಿಂಬಿಸುತ್ತಿರುವುದು ದುರದೃಷ್ಟಕರ. ಇದನ್ನು ನಂಬಿ ಯುವಕರು ದಾರಿ ತಪ್ಪುತ್ತಿದ್ದಾರೆ. ಕೆಪಿಎಂಜಿ ವರದಿಯನ್ನು ಉಲ್ಲೇಖಿಸಿದ ಅವರು, ಆನ್‍ಲೈನ್ ರಿಯಲ್ ಮನೀ ಗೇಮಿಂಗ್ ಉದ್ಯಮ 2,200 ಕೋಟಿ ರೂ. ಎಂದು ಅಂದಾಜಿಸಲಾಗಿದೆ. 2023 ರ ವೇಳೆಗೆ ಇದು 12,000 ಕೋಟಿ ರೂ ಆಗಲಿದೆ. ಪ್ರಪಂಚದಲ್ಲಿ ಈ ವೇಗದಲ್ಲಿ ಬೆಳೆಯಬಲ್ಲ ಯಾವುದೇ ಉದ್ಯಮವನ್ನು ನಾನು ನೋಡಿಲ್ಲ ಎಂದು ಹೇಳಿದರು.

Join our WhatsApp group for latest news updates