ನಸುಕಿನಲ್ಲಿಯೇ ಯೋಧರಿಂದ ಬೇಟೆ: ಕಾಶ್ಮೀರದಲ್ಲಿ ಮೂವರು ಉಗ್ರರು ಮಟಾಶ್

17-09-20 11:20 am       Headline Karnataka News Network   ದೇಶ - ವಿದೇಶ

ಜಮ್ಮು-ಕಾಶ್ಮೀರದ ಬಟಮಾಲೂನಲ್ಲಿ ಇಂದು ನಡೆದಿರುವ ಎನ್‍ಕೌಂಟರ್ ಅಲ್ಲಿ ಮೂವರು ಭಯೋತ್ಪಾದಕರನ್ನು ಭಾರತೀಯ ಸೇನೆ ಹೊಡೆದು ಹಾಕಿದೆ.

ಶ್ರೀನಗರ, ಸೆಪ್ಟಂಬರ್ 17: ಇಂದು ನಸುಕಿನಲ್ಲಿಯೇ ಭಾರತೀಯ ಯೋಧರು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಿದ್ದಾರೆ.

ಶ್ರೀನಗರದ ಬಟಾಮಲು ಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಭಯೋತ್ಪಾದಕರು ಅವಿತಿರುವ ಮಾಹಿತಿ ಪಡೆದ ಪೊಲೀಸರು ಮತ್ತು ಸಿಆರ್​ಎಫ್​ ಯೋಧರು ಉಗ್ರರ ಬೇಟೆ ಮಾಡಿದ್ದಾರೆ.

ಇಂದು ಮುಂಜಾನೆ 2.30ರ ಸುಮಾರಿಗೆ ಬಟಮಾಲೂ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ಪ್ರದೇಶದಲ್ಲಿ ಭಯೋತ್ಪಾದಕರು ಅಡಗಿರುವ ಬಗ್ಗೆ ಖಚಿತ ಮಾಹಿತಿಯ ಆಧಾರದ ಮೇಲೆ ಭದ್ರತಾ ಪಡೆಗಳು ಬಟಮಾಲೂನ ಫಿರ್ದೌಸಾಬಾದ್ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು. ಈ ಕಾರ್ಯಚರಣೆ ಇನ್ನೂ ನಡೆಯುತ್ತಿದೆ.

ಈ ವೇಳೆ ಭಾರತೀಯ ಸೈನಿಕರು ಭಯೋತ್ಪಾದಕರ ಅಡಗು ತಾಣದ ಬಳಿ ಹೋಗುತ್ತಿದಂತೆ ಉಗ್ರರು ಯೋಧರ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಈ ವೇಳೆ ಉಗ್ರರು ಮತ್ತು ಸೈನಿಕರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಈ ಎನ್‍ಕೌಂಟರ್ ಅಲ್ಲಿ ಮೂವರು ಉಗ್ರರು ಸಾವನ್ನಪ್ಪಿದ್ದಾರೆ. ಜೊತೆಗೆ ಕಾರ್ಯಚರಣೆ ವೇಳೆ ಓರ್ವ ಮಹಿಳೆ ಕೂಡ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಇಬ್ಬರು ಯೋಧರಿಗೆ ಗಾಯಗೊಂಡಿದ್ದು, ಅವರನ್ನು ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿನ್ನೆ ಕೂಡ ಪುಲ್ವಾಮದಲ್ಲಿ ಉಗ್ರರು ಮತ್ತು ಸೈನಿಕರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಸೆಪ್ಟೆಂಬರ್ 4ರಂದು ಬಾರಾಮುಲ್ಲಾ ಜಿಲ್ಲೆಯ ಯೆಡಿಪೋರಾ ಗ್ರಾಮದಲ್ಲಿ ಇಬ್ಬರು ಭಯೋತ್ಪಾದಕರನ್ನು ಭಾರತೀಯ ಭದ್ರತಾ ಪಡೆಗಳು ಕೊಂದು ಹಾಕಿದ್ದವು. ಜೊತೆಗೆ ಭಯೋತ್ಪಾದಕರಿಂದ ಎರಡು ಎಕೆ-47 ರೈಫಲ್‍ಗಳು, ಎರಡು ಬುಲೆಟ್ ಜ್ಯಾಕೆಟ್ ಮತ್ತು ಒಂದು ಪಿಸ್ತೂಲ್ ವಶಪಡಿಸಿಕೊಳ್ಳಲಾಗಿತ್ತು.

ಜಮ್ಮು-ಕಾಸ್ಮೀರದ ಪೂಂಚ್ ಜಿಲ್ಲೆಯ ನಿಯಂತ್ರಣ ರೇಖೆಯಲ್ಲಿ (ಎಲ್‍ಒಸಿ) ಬಳಿ ಪಾಕಿಸ್ತಾನ ಇಂದು ಅಪ್ರಚೋದಿತ ಗುಂಡಿನ ದಾಳಿ ಮತ್ತು ಶೆಲ್ ದಾಳಿ ನಡೆಸಿದೆ. ಈ ರೀತಿ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡಿ ಉಗ್ರರು ಭಾರತದ ಒಳಗೆ ನುಸುಳಲು ಪಾಕಿಸ್ತಾನ ಸೇನೆ ಸಹಾಯ ಮಾಡುತ್ತಿದೆ. 2014ರಿಂದ ಪಾಕಿಸ್ತಾನ ಮಾಡಿದ ದಾಳಿಗೆ ಭಾರತೀಯ ಸೇನೆಯ 75 ಯೋಧರು ಹುತಾತ್ಮರಾಗಿದ್ದಾರೆ ಎಂದು ರಕ್ಷಣಾ ರಾಜ್ಯ ಸಚಿವ ಶ್ರೀಪಾದ್ ನಾಯಕ್ ತಿಳಿಸಿದ್ದಾರೆ.