ಉ.ಕೊರಿಯಾ: 90 ನಿಮಿಷಗಳ ಕಾಲ ಕಿಮ್ ಜೊಂಗ್ ಉನ್ನನ್ನು ಶ್ಲಾಘಿಸುವುದು ಕಡ್ಡಾಯ!!

17-09-20 02:45 pm       Dhruthi Anchan - Correspondent   ದೇಶ - ವಿದೇಶ

ಇನ್ನು ಮುಂದೆ ಪ್ರೀ ನರ್ಸರಿ ಮಕ್ಕಳು ಕಡ್ಡಾಯವಾಗಿ 90 ನಿಮಿಷಗಳ ಕಾಲ ಕಿಮ್ ಜೊಂಗ್ ಉನ್ ಗುಣಗಾನ ಮಾಡಬೇಕು

ಉತ್ತರ ಕೊರಿಯಾ, ಸೆಪ್ಟೆಂಬರ್.17 : ಉತ್ತರ ಕೊರಿಯಾದ ಅಧ್ಯಕ್ಷ ಕಿಮ್​ ಜೊಂಗ್​ ಉನ್​ ಸಹೋದರಿ ಕಿಮ್ ಯೋ ಜಾಂಗ್ ಇದೀಗ ವಿಚಿತ್ರ ಆದೇಶವೊಂದನ್ನು ಹೊರಡಿಸಿದ್ದಾರೆ.

ಕಿಮ್ ಯೋ ಜಾಂಗ್ ಹೊರಡಿಸಿರುವ  ಆದೇಶದಲ್ಲಿ ಇನ್ನು ಮುಂದೆ ಪ್ರೀ ನರ್ಸರಿ ಮಕ್ಕಳು ಕಡ್ಡಾಯವಾಗಿ 90 ನಿಮಿಷಗಳ ಕಾಲ ಸಹೋದರನ ಗುಣಗಾನ ಮಾಡಬೇಕು. ಅಂದರೆ ತನ್ನ ಸಹೋದರ ಇಲ್ಲಿಯವರೆಗೆ ಮಾಡಿರುವ 'ಮಹಾನ್​' ಕಾರ್ಯಗಳ ಬಗ್ಗೆ ಕಡ್ಡಾಯವಾಗಿ ಕಲಿಯಬೇಕು. ಕಲಿಕೆಯ ಸಂದರ್ಭದಲ್ಲಿ ಕಿಮ್​ ಜೊಂಗ್ ಉನ್​ ಮಾಡಿರುವ ಸಾಧನೆಗಳ ಬಗ್ಗೆ ಶ್ಲಾಘನೆ ಮಾಡಬೇಕು ಎಂದು ಆದೇಶ ಹೊರಡಿಸಿದ್ದಾರೆ.

ಕಿಮ್​ ಜೊಂಗ್​ ಉನ್​ನ ಸಾಧನೆಗಳ ಪಟ್ಟಿಯನ್ನು ಪ್ರೀ ನರ್ಸರಿ ಮಕ್ಕಳ ಪಠ್ಯಕ್ರಮದಲ್ಲಿ ಅಳವಡಿಸಲಾಗಿದ್ದು, ಪ್ರತಿದಿನ ಕನಿಷ್ಠ 90 ನಿಮಿಷ ಮಕ್ಕಳು ಅದರ ಬಗ್ಗೆ ಕಲಿಯಬೇಕಿದೆ. ಉತ್ತರ ಕೊರಿಯಾದ ಬಗ್ಗೆ ನಿಷ್ಠೆ ಮತ್ತು ನಂಬಿಕೆಯನ್ನು ಉಳಿಸಿ ಬೆಳೆಸಿಕೊಳ್ಳಲು ಅಧ್ಯಕ್ಷ ಕಿಮ್​ನ ಗುಣಗಾನ, ಅವರ ಶ್ರೇಷ್ಠತೆ ಬಗ್ಗೆ ಮಕ್ಕಳು ಕಲಿಯಬೇಕು ಎನ್ನುವುದು ಸಹೋದರಿ ಕಿಮ್ ಯೋ ಜಾಂಗ್ ಅನಿಸಿಕೆ.

ಇದಕ್ಕಾಗಿಯೇ ಹೊಸ ಪಠ್ಯವನ್ನು ಅಳವಡಿಸಲಾಗಿದೆ. ಈ ಮೊದಲು ಇದ್ದ ಪಠ್ಯಕ್ರಮದಲ್ಲಿ 30 ನಿಮಿಷ ಕಿಮ್​ನ ಗುಣಗಾನ ಮಾಡುವುದು ಕಡ್ಡಾಯವಾಗಿತ್ತು. ಅದನ್ನೀಗ 90 ನಿಮಿಷಕ್ಕೆ ಏರಿಕೆ ಮಾಡಲಾಗಿದೆ.

ಈ ಪಠ್ಯದ ತರಬೇತಿಗಾಗಿ ವಿಶೇಷ ಅಧ್ಯಾಪಕರನ್ನೂ ನೇಮಕ ಮಾಡಿದ್ದು, ಅದಕ್ಕಾಗಿಯೇ ಪ್ರತ್ಯೇಕ ತರಗತಿಯನ್ನೂ ಮೀಸಲು ಇರಿಸಲಾಗಿದೆ. ಇದರ ಅವಧಿ 90 ನಿಮಿಷಗಳಾಗಿದ್ದು, ಅದರಲ್ಲಿ ಮಕ್ಕಳು ಕಿಮ್​ ಬಗ್ಗೆ ತಿಳಿದುಕೊಳ್ಳುವುದು ಇನ್ನುಮುಂದೆ ಕಡ್ಡಾಯವಾಗಿದೆ.