ಧರ್ಮ ಸಾಮರಸ್ಯಕ್ಕಾಗಿ ಬಾಬರಿ ಪ್ರಕರಣ ಸೌಹಾರ್ದ ಬಗೆಹರಿಸಿ ; ಸುಪ್ರೀಂಗೆ ಮನವಿ

18-09-20 11:19 am       Headline Karnataka News Network   ದೇಶ - ವಿದೇಶ

ದೇಶದಲ್ಲಿ ಹಿಂದೂ - ಮುಸ್ಲಿಂ ಏಕತೆ ಕಾಪಾಡುವ ಸಲುವಾಗಿ ಬಾಬರಿ ಮಸೀದಿ ಧ್ವಂಸ ಪ್ರಕರಣದ ಎಲ್ಲ 32 ಆರೋಪಿಗಳನ್ನು ಸಿಬಿಐ ವಿಶೇಷ ನ್ಯಾಯಾಲಯ ದೋಷಮುಕ್ತಗೊಳಿಸಬೇಕೆಂದು ಇಕ್ಬಾಲ್ ಅನ್ಸಾರಿ ಸುಪ್ರೀಂ ಕೋರ್ಟಿಗೆ ಮನವಿ ಮಾಡಿದ್ದಾರೆ.‌ 

ಲಕ್ನೋ, ಸೆಪ್ಟಂಬರ್ 18: ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪಿನ ಬಗ್ಗೆ ಕುತೂಹಲ ಎದ್ದಿರುವಾಗಲೇ ಅಯೋಧ್ಯೆ ಮಂದಿರ ಪ್ರಕರಣದಲ್ಲಿ ಮುಖ್ಯ ಅರ್ಜಿದಾರರಾಗಿದ್ದ ಇಕ್ಬಾಲ್ ಅನ್ಸಾರಿ ದೇಶದ ಗಮನ ಸೆಳೆಯುವ ರೀತಿ ಸುಪ್ರೀಂ ಕೋರ್ಟಿಗೆ ಮನವಿ ಮಾಡಿದ್ದಾರೆ.‌ 

ದೇಶದಲ್ಲಿ ಹಿಂದೂ - ಮುಸ್ಲಿಂ ಏಕತೆ ಕಾಪಾಡುವ ಸಲುವಾಗಿ ಬಾಬರಿ ಮಸೀದಿ ಧ್ವಂಸ ಪ್ರಕರಣದ ಎಲ್ಲ 32 ಆರೋಪಿಗಳನ್ನು ಸಿಬಿಐ ವಿಶೇಷ ನ್ಯಾಯಾಲಯ ದೋಷಮುಕ್ತಗೊಳಿಸಬೇಕೆಂದು ಇಕ್ಬಾಲ್ ಅನ್ಸಾರಿ ಕೋರಿದ್ದಾರೆ.

ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿ, ಮುರಳಿ ಮನೋಹರ ಜೋಶಿ, ಕಲ್ಯಾಣ್ ಸಿಂಗ್, ಉಮಾಭಾರತಿ ಸೇರಿದಂತೆ ಹಲವರು ಆರೋಪಿಗಳಾಗಿರುವ ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಲಕ್ನೋದ ವಿಶೇಷ ಸಿಬಿಐ ನ್ಯಾಯಾಲಯ ಸೆಪ್ಟಂಬರ್ 30ರಂದು ತೀರ್ಪು ನೀಡಲಿದೆ.

"ಸುಪ್ರೀಂಕೋರ್ಟ್ ಅಯೋಧ್ಯೆ ಪ್ರಕರಣವನ್ನು ಬಗೆಹರಿಸಿದೆ. ಇದೀಗ ರಾಮಮಂದಿರ ಹಾಗೂ ಮಸೀದಿಯನ್ನು ಅಯೋಧ್ಯೆಯಲ್ಲೇ ಪ್ರತ್ಯೇಕ ಸ್ಥಳಗಳಲ್ಲಿ ನಿರ್ಮಿಸಲಾಗುತ್ತಿದೆ. ಬಾಬರಿ ಮಸೀದಿ ಧ್ವಂಸ ಪ್ರಕರಣದ ಹಲವು ಮಂದಿ ಆರೋಪಿಗಳು ಮೃತಪಟ್ಟಿದ್ದಾರೆ. ದೇಶದಲ್ಲಿ ಹಿಂದೂ - ಮುಸ್ಲಿಂ ಏಕತೆಗೆ ದಾರಿ ಮಾಡಿಕೊಡುವ ನಿಟ್ಟಿನಲ್ಲಿ ವ್ಯಾಜ್ಯ ಕೊನೆಗೊಳಿಸಿ ಎಲ್ಲ 32 ಮಂದಿ ಆರೋಪಿಗಳನ್ನು ವಿಶೇಷ ಸಿಬಿಐ ನ್ಯಾಯಾಲಯ ದೋಷಮುಕ್ತಗೊಳಿಸಬೇಕು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ" ಎಂದು ಅವರು ಹೇಳಿದ್ದಾರೆ.

ಸುಪ್ರೀಂಕೋರ್ಟ್ ಅಯೋಧ್ಯೆ ವಿವಾದವನ್ನು ಬಗೆಹರಿಸಿದಂತೆ ದೇಶದ ಹಿತಾಸಕ್ತಿ ದೃಷ್ಟಿಯಿಂದ ಸಿಬಿಐ ನ್ಯಾಯಾಲಯ ಕೂಡ ವ್ಯಾಜ್ಯ ಕೊನೆಗೊಳಿಸಿ ಎಲ್ಲ ಆರೋಪಿಗಳನ್ನು ದೋಷಮುಕ್ತಗೊಳಿಸುವಂತೆ ಅನ್ಸಾರಿ ಮನವಿ ಮಾಡಿದ್ದಾರೆ.

Join our WhatsApp group for latest news updates