ದೇಶದ ಭದ್ರತೆಗೇ ಕನ್ನ ; ದೆಹಲಿಯ ಎನ್ಐಸಿ ಕೇಂದ್ರಕ್ಕೆ ಸೈಬರ್ ಅಟ್ಯಾಕ್ !

18-09-20 05:34 pm       Headline Karnataka News Network   ದೇಶ - ವಿದೇಶ

ದೇಶದ ಮಹತ್ವದ ವಿಚಾರಗಳನ್ನು ಕಾಯ್ದಿಟ್ಟುಕೊಳ್ಳುವ ನ್ಯಾಶನಲ್ ಇನ್ಫಾರ್ಮೆಟಿಕ್ ಸೆಂಟರ್ (ಎನ್ಐಸಿ) ಮೇಲೆ ಸೈಬರ್ ಅಟ್ಯಾಕ್ ಆಗಿದೆ.

ನವದೆಹಲಿ, ಸೆಪ್ಟಂಬರ್ 18: ಚೀನಾ ಗೂಢಚರರು ಪ್ರಧಾನಿ ಮೋದಿ, ರಾಜನಾಥ್ ಸೇರಿದಂತೆ ದೇಶದ ವಿವಿಐಪಿಗಳ ಚಲನವಲನಗಳ ಬಗ್ಗೆ ಕಣ್ಣಿಟ್ಟಿದ್ದಾರೆ ಎಂಬ ಮಾಹಿತಿಗಳ ನಡುವೆಯೇ ಈಗ ದೇಶದ ಮಹತ್ವದ ವಿಚಾರಗಳನ್ನು ಕಾಯ್ದಿಟ್ಟುಕೊಳ್ಳುವ ನ್ಯಾಶನಲ್ ಇನ್ಫಾರ್ಮೆಟಿಕ್ ಸೆಂಟರ್ (ಎನ್ಐಸಿ) ಮೇಲೆ ಸೈಬರ್ ಅಟ್ಯಾಕ್ ಆಗಿದೆ. ಸೆಂಟರಿನ ಹಲವು ಕಂಪ್ಯೂಟರ್ ಗಳು ಹ್ಯಾಕ್ ಆಗಿದ್ದು, ಮಹತ್ವದ ವಿಚಾರಗಳನ್ನು ಕದಿಯಲಾಗಿದೆ ಎನ್ನುವ ಆತಂಕಕಾರಿ ಸುದ್ದಿ ಹೊರಬಿದ್ದಿದೆ. ಈ ಬಗ್ಗೆ ದೆಹಲಿ ಪೊಲೀಸರು ಸೈಬರ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಪ್ರಧಾನ ಮಂತ್ರಿ ಮತ್ತು ರಾಷ್ಟ್ರೀಯ ಭದ್ರತಾ ಕಾರ್ಯಾಲಯ ಸೇರಿದಂತೆ ಭದ್ರತೆಗೆ ಸಂಬಂಧಿಸಿದ ವಿಐಪಿಗಳ ಮಾಹಿತಿಗಳು ನ್ಯಾಶನಲ್ ಇನ್ಫಾರ್ಮೆಟಿಕ್ ಸೆಂಟರ್ ನಲ್ಲಿ ಇರುತ್ತವೆ. ಇಂಥ ಕೇಂದ್ರಕ್ಕೆ ಸೈಬರ್ ಅಟ್ಯಾಕ್ ಆಗಿರುವುದು ದೇಶದ ಭದ್ರತೆ ವಿಚಾರದಲ್ಲಿ ತುಂಬ ಅಪಾಯಕಾರಿ ಎಂದು ರಾಷ್ಟ್ರೀಯ ಮಾಧ್ಯಮ ಡಿಎನ್ಎ ವರದಿ ಮಾಡಿದೆ. ಮಾಹಿತಿಗಳ ಪ್ರಕಾರ, ಈ ಸೈಬರ್ ಅಟ್ಯಾಕ್ ಇ-ಮೇಲ್ ಬೆಂಗಳೂರಿನಲ್ಲಿರುವ ಅಮೆರಿಕ ಮೂಲದ ಕಂಪನಿಯಿಂದ ಬಂದಿತ್ತು ಎನ್ನಲಾಗುತ್ತಿದೆ.

ಹ್ಯಾಕರ್ಸ್ ಎನ್ಐಸಿಗೆ ಕಳಿಸಿದ್ದ ಇ-ಮೇಲ್ ನಲ್ಲಿ ವೈರಸ್ ಇತ್ತು ಎನ್ನಲಾಗಿದೆ. ಇ-ಮೇಲ್ ಕ್ಲಿಕ್ ಮಾಡುತ್ತಿದ್ದಂತೆ ಕಂಪ್ಯೂಟರ್ ಗಳಲ್ಲಿದ್ದ ಡಾಟಾಗಳು ಸೋರಿಕೆಯಾಗಿವೆ. ಕೂಡಲೇ ವೈರಸ್ ಅಟ್ಯಾಕ್ ಆಗಿರುವುದನ್ನು ತಿಳಿದ ಎನ್ಐಸಿ ಅಧಿಕಾರಿಗಳು ದೆಹಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೆಹಲಿಯ ಸ್ಪೆಷಲ್ ಸೆಲ್ ಪೊಲೀಸ್ ಪಡೆ ತನಿಖೆ ಆರಂಭಿಸಿದ್ದಾರೆ. ಎನ್ಐಸಿ ಸಿಬಂದಿ ನೀಡಿರುವ ಮಾಹಿತಿ ಆಧರಿಸಿ ತನಿಖೆ ನಡೆಸಿದ ಪೊಲೀಸರಿಗೆ ಬೆಂಗಳೂರಿನಲ್ಲಿರುವ ಅಮೆರಿಕನ್ ಮೂಲದ ಕಂಪನಿಯಿಂದ ಇ-ಮೇಲ್ ಬಂದಿರುವುದನ್ನು ಪತ್ತೆ ಮಾಡಿದ್ದಾರೆ. ಕಂಪನಿಯ ಐಪಿ ವಿಳಾಸ ಪತ್ತೆ ಮಾಡುತ್ತಿದ್ದಾರೆ. ಆದರೆ, ಇ-ಮೇಲ್ ಬೆಂಗಳೂರಿನಿಂದಲೇ ಹೋಗಿತ್ತೇ ಅಥವಾ ವಿದೇಶದಿಂದ ಬಂದಿತ್ತೇ ಅನ್ನುವುದು ದೃಢಪಟ್ಟಿಲ್ಲ.

ಇತ್ತೀಚೆಗಷ್ಟೇ ಕೇಂದ್ರ ಗುಪ್ತಚರ ಪಡೆ ಅಧಿಕಾರಿಗಳು ಸೈಬರ್ ಅಟ್ಯಾಕ್ ಆಗುವ ಬಗ್ಗೆ ಸೂಚನೆ ನೀಡಿದ್ದರು. ಈ ಬಗ್ಗೆ ಸರಕಾರಿ ಮತ್ತು ಖಾಸಗಿ ಕಂಪನಿಗಳು ಮುಂಜಾಗ್ರತೆ ವಹಿಸಬೇಕೆಂದು ಎಚ್ಚರಿಕೆ ನೀಡಿತ್ತು.