ಕಾಶ್ಮೀರ ಕಣಿವೆಯಲ್ಲಿ ನಿಂತಿಲ್ಲ ಉಗ್ರರ ಆತಂಕ, ಭೂಗತ ಬಂಕರ್ ಗಳಲ್ಲಿ ಅಡಗಿರುವ ಕಿರಾತಕರು !

21-09-20 12:35 pm       Headline Karnataka News Network   ದೇಶ - ವಿದೇಶ

ಕಾಶ್ಮೀರದ ಶೋಪಿಯಾನ್ ಪ್ರದೇಶದಲ್ಲಿ ಉಗ್ರರು ಕಣಿವೆ ಪ್ರದೇಶಗಳಲ್ಲಿ ಭೂಗತ ಬಂಕರ್ ನಿರ್ಮಿಸಿ, ಅದರ ಒಳಗೆ ಅಡಗಿಕೊಳ್ಳುವ ತಂತ್ರ ಹೂಡುತ್ತಿದ್ದಾರೆ.

ಶ್ರೀನಗರ, ಸೆಪ್ಟಂಬರ್ 21: ಜಮ್ಮು ಕಾಶ್ಮೀರವನ್ನು ಭಾರತೀಯ ಸೇನೆ ಸಂಪೂರ್ಣ ಹಿಡಿತಕ್ಕೆ ತೆಗೆದುಕೊಂಡ ಬಳಿಕ ಅಲ್ಲಿನ ಚಿತ್ರಣವೇ ಬದಲಾಗುತ್ತಿದೆ. ಪಾಕಿಸ್ಥಾನದಿಂದ ನುಸುಳಿ ಬಂದು ಅಡಗಿಕೊಂಡವ ಉಗ್ರರನ್ನು ಸೇನೆ ನಿರಂತರ ಬೇಟೆಯಾಡುತ್ತಿದ್ದು, ಅಲ್ಲೀಗ ಉಗ್ರರಿಗೆ ನೆಲೆ ಇಲ್ಲದಾಗಿದೆ. ಹೀಗಾಗಿ ಸೇನೆಯ ಕಣ್ಣು ತಪ್ಪಿಸಿಕೊಳ್ಳಲು ನುಸುಳುಕೋರರು ಭೂಗತ ಬಂಕರ್ ಗಳನ್ನು ನಿರ್ಮಿಸಿಕೊಂಡು ಅಡಗಿಕೊಳ್ಳುತ್ತಿರುವ ವಿದ್ಯಮಾನ ಬೆಳಕಿಗೆ ಬಂದಿದೆ.

ಕಾಶ್ಮೀರದ ಶೋಪಿಯಾನ್ ಪ್ರದೇಶದಲ್ಲಿ ಉಗ್ರರು ರಹಸ್ಯವಾಗಿ ಭೂಗತ ಬಂಕರ್‌ಗಳನ್ನು ನಿರ್ಮಿಸಿರುವುದು ಕಂಡುಬಂದಿದೆ. ಈ ಹಿಂದೆ ಅಲ್ಲಿನ ಸ್ಥಳೀಯ ನಿವಾಸಿಗಳ ಮನೆಗಳಲ್ಲಿ ಅಡಗಿಕೊಳ್ಳುತ್ತಿದ್ದ ಉಗ್ರರು ಈಗ ಸೇನೆಯ ನಿರಂತರ ದಾಳಿಯಿಂದ ಕಂಗಾಲಾಗಿದ್ದಾರೆ. ಮನೆಗಳಲ್ಲಿ ಉಳಿದುಕೊಳ್ಳಲು ಅಲ್ಲಿನ ನಿವಾಸಿಗಳು ನಿರಾಕರಿಸುತ್ತಿರುವುದರಿಂದ ಕಣಿವೆ ಪ್ರದೇಶಗಳಲ್ಲಿ ಭೂಗತ ಬಂಕರ್ ನಿರ್ಮಿಸಿ, ಅದರ ಒಳಗೆ ಅಡಗಿಕೊಳ್ಳುವ ತಂತ್ರ ಹೂಡುತ್ತಿದ್ದಾರೆ.

ಪಾಕ್ ಗಡಿಭಾಗದ ಕಣಿವೆ ಪ್ರದೇಶಗಳಾದ ಪುಲ್ವಾಮಾ ಮತ್ತು ಶೋಪಿಯಾನ್ ಜಿಲ್ಲೆಗಳಲ್ಲಿ ಸಾಕಷ್ಟು ಭೂಗತ ಬಂಕರ್ ಗಳು ಕಂಡುಬಂದಿದ್ದು, ಅದರ ಮೂಲಕ ಉಗ್ರರು ಭಾರತದ ಭೂಪ್ರದೇಶಕ್ಕೆ ಸುಲಭದಲ್ಲಿ ಬರುತ್ತಿದ್ದರು ಅನ್ನೋ ವಿಚಾರ ಬಯಲಾಗಿದೆ. ಭದ್ರತಾ ಅಧಿಕಾರಿಗಳು ಪರ್ವತದ ಮೇಲ್ಭಾಗದಲ್ಲಿದ್ದರೆ ಕಣಿವೆಯ ಆಳದಲ್ಲಿ ಇಂಥ ಬಂಕರ್ ಗಳನ್ನು ಸ್ಥಾಪಿಸಿದ್ದು, ಗಡಿಯಿಂದ ನುಸುಳಿ ಬಂದ ಉಗ್ರರು ಅದರಲ್ಲಿ ಅಡಗಿಕೊಳ್ಳುತ್ತಿದ್ದರು. ಭದ್ರತಾ ಪಡೆಯ ಕಣ್ಣು ತಪ್ಪಿಸಿ ಭಾರತದ ಭಾಗದ ನಿವಾಸಿಗಳ ಮನೆ ಸೇರುತ್ತಿದ್ದರು ಎನ್ನುವ ವಿಚಾರವನ್ನು ಸೇನೆ ಪತ್ತೆ ಮಾಡಿದೆ.

ವಿಶೇಷ ಅಂದ್ರೆ, ಕಾಶ್ಮೀರದ ನಿವಾಸಿಗಳು ಬೆಳೆಯುವ ಸೇಬಿನ ತೋಟಗಳು, ನದಿಗಳ ಅಡಿ ಭಾಗಲ್ಲೂ ಇಂಥ ಬಂಕರ್‌ಗಳನ್ನು ನಿರ್ಮಿಸಲಾಗಿದೆ. ಶೋಪಿಯಾನ್‌ ಮತ್ತು ಪುಲ್ವಾಮಾ ಜಿಲ್ಲೆಯ ಹಲವೆಡೆ ಸೇಬಿನ ತೋಟಗಳು, ದಟ್ಟಕಾಡುಗಳಲ್ಲಿ ಇಂಥ ಬಂಕರ್‌ಗಳನ್ನು ಮಾಡಿಕೊಂಡಿದ್ದು, ಸೇನೆ ಕಾರ್ಯಾಚರಣೆ ನಡೆಸುವ ಸುಳಿವು ಅರಿತು ಅದರಲ್ಲಿ ಅಡಗಿಕೊಳ್ಳುತ್ತಿದ್ದಾರೆ ಎಂದು ಸೇನಾಧಿಕಾರಿಗಳು ಹೇಳುತ್ತಿದ್ದಾರೆ.

ಮಳೆ ಮತ್ತು ಹಿಮದ ನಡುವೆ ಕಣಿವೆ ಭಾಗದ ರಹಸ್ಯ ಬಂಕರ್‌ಗಳಲ್ಲಿ ಅಡಗಿರುವ ಉಗ್ರರನ್ನು ಪತ್ತೆ ಮಾಡುವುದು ಸುಲಭವಲ್ಲ. ಇಂಥ ಅಡಗು ತಾಣಗಳಲ್ಲಿ ಉಗ್ರರು ಸೇನೆಯ ಕಣ್ಣು ತಪ್ಪಿಸಿಕೊಂಡು ಬಹಳ ದಿನಗಳವರೆಗೆ ಸುರಕ್ಷಿತವಾಗಿ ಇರುತ್ತಾರೆ ಎನ್ನುತ್ತಾರೆ, ಸೇನಾಧಿಕಾರಿಗಳು.

Join our WhatsApp group for latest news updates