ಮಕ್ಕಳ ಚಿಕಿತ್ಸೆಗಾಗಿ ಅಂಗಾಂಗ ಮಾರಲು ಹೊರಟಳಾ ತಾಯಿ !

22-09-20 05:56 pm       Headline Karnataka News Network   ದೇಶ - ವಿದೇಶ

'ಮಕ್ಕಳ ಚಿಕಿತ್ಸೆಗಾಗಿ ತನ್ನೆಲ್ಲ ಅಂಗಗಳನ್ನೂ ಮಾರಾಟ ಮಾಡುತ್ತೇನೆ' ಹೀಗೆ ಬಡ ತಾಯಿಯೊಬ್ಬಳು ತನ್ನ ಮಕ್ಕಳ ಚಿಕಿತ್ಸೆಗಾಗಿ ಬೋರ್ಡ್ ಹಿಡಿದು ನಿಂತ ಹೃದಯ ಕಲಕುವ ಘಟನೆ ಕೇರಳದಲ್ಲಿ ಬೆಳಕಿಗೆ ಬಂದಿದೆ.

ಕೊಚ್ಚಿ, ಸೆಪ್ಟಂಬರ್ 22: ‘ತಾಯಿಯ ಅಂಗಾಂಗಗಳು ಮಾರಾಟಕ್ಕಿವೆ. ಮಕ್ಕಳ ಚಿಕಿತ್ಸೆಗಾಗಿ ತನ್ನೆಲ್ಲ ಅಂಗಗಳನ್ನೂ ಮಾರಾಟ ಮಾಡುತ್ತೇನೆ’ ಹೀಗೆ ಬಡ ತಾಯಿಯೊಬ್ಬಳು ತನ್ನ ಮಕ್ಕಳ ಚಿಕಿತ್ಸೆಗಾಗಿ ಬೋರ್ಡ್ ಹಿಡಿದು ನಿಂತ ಹೃದಯ ಕಲಕುವ ಘಟನೆ ಕೇರಳದ ಕೊಚ್ಚಿಯಲ್ಲಿ ಬೆಳಕಿಗೆ ಬಂದಿದೆ.

ಶಾಂತಿ ಎಂಬ ಮಧ್ಯವಯಸ್ಕ ಮಹಿಳೆಯೊಬ್ಬರು ತನ್ನ ಬೆಳೆದು ನಿಂತ ಮಕ್ಕಳ ಜೊತೆ ರಸ್ತೆ ಬದಿಯಲ್ಲಿ ಭಿತ್ತಿಪತ್ರ ಹಿಡಿದು ನಿಂತಿದ್ದರು. ಮಲಪ್ಪುರಂ ಜಿಲ್ಲೆಯ ನಿವಾಸಿಯಾಗಿರುವ ಈ ಮಹಿಳೆ ತನ್ನ ಐವರು ಮಕ್ಕಳೊಂದಿಗೆ ಕೊಚ್ಚಿಯಲ್ಲಿ ನೆಲೆಸಿದ್ದಾರೆ. ಮಕ್ಕಳಿಗೆ ಹುಷಾರಿಲ್ಲ. ಅವರ ಚಿಕಿತ್ಸೆಗಾಗಿ ತನ್ನೆಲ್ಲ ಅಂಗಗಳನ್ನು ಮಾರಲು ನಿರ್ಧರಿಸಿದ್ದಾಗಿ ಎಂದು ಬರೆದಿದ್ದಾರೆ.

ತಂದೆಯಿಲ್ಲದ ಈ ಕುಟುಂಬದ ಹೊಣೆ ಹೊತ್ತಿದ್ದ ಹಿರಿಯ ಮಗ 25 ವರ್ಷದ ರಾಜೇಶ್, ಇತ್ತೀಚೆಗೆ ಅಪಘಾತಕ್ಕೀಡಾಗಿದ್ದು ಮೆದುಳಿನ ಸರ್ಜರಿಗೆ ಒಳಗಾಗಿದ್ದಾನೆ. ಇನ್ನು 2ನೇ ಮಗ ರಂಜಿತ್ ಹೊಟ್ಟೆಯಲ್ಲಿ ಟ್ಯೂಮರ್ ಆಗಿದ್ದು, ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದಾನೆ. ಇನ್ನು ಮೂರನೇ ಮಗ 21 ವರ್ಷದ ಸಜಿತ್, ಥಿಯೇಟರಲ್ಲಿ ಕೆಲಸ ಮಾಡುತ್ತಿದ್ದು ಕೊರೊನಾದಿಂದಾಗಿ ಕೆಲಸ ಕಳಕೊಂಡಿದ್ದಾನೆ. ಇನ್ನು 11 ವರ್ಷದ ಮಗಳಿದ್ದು ರಸ್ತೆ ಅಪಘಾತದಿಂದಾಗಿ ನರದ ಸರ್ಜರಿಗೆ ಒಳಗಾಗಬೇಕೆಂದು ವೈದ್ಯರು ತಿಳಿಸಿದ್ದಾರೆ. ಇನ್ನೊಂದು ಸಣ್ಣ ಮಗುವಿದ್ದು, ಶಾಲೆಗೆ ಹೋಗುತ್ತಿದೆ. ಹೀಗಾಗಿ ಬದುಕು ಸಾಗಿಸಲು ಸಾಧ್ಯವಾಗದೆ ಈ ಕೆಲಸಕ್ಕೆ ಮುಂದಾಗಿದ್ದಾಗಿ ಶಾಂತಿ ಹೇಳುತ್ತಾರೆ.

ಮಹಿಳೆ ಭಿತ್ತಿಪತ್ರ ಹಿಡಿದು ರಸ್ತೆಯಲ್ಲಿ ನಿಲ್ಲುತ್ತಿದ್ದಂತೆ ಎಚ್ಚತ್ತುಕೊಂಡಿರುವ ಅಲ್ಲಿನ ಜಿಲ್ಲಾಡಳಿತ ಮಹಿಳೆಗೆ ಸಹಾಯ ಮಾಡಲು ಮುಂದೆ ಬಂದಿದೆ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಶಾಂತಿ, ನಾವು ಹಲವು ದಿನಗಳಿಂದ ಇಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇವೆ. ಮೋಟರ್ ಡ್ರೈವಿಂಗ್ ಕಲಿಸಲು ಹೋಗುತ್ತಿದೆ. ಕೊರೊನಾದಿಂದಾಗಿ ಕೆಲಸವನ್ನೂ ಕಳಕೊಂಡಿದ್ದೇನೆ. ಸದ್ಯ ಮನೆ ಬಾಡಿಗೆ ಕಟ್ಟಲು ಸಾಧ್ಯವಾಗದ ಸ್ಥಿತಿ ಇದೆ. ನನ್ನ ಮೂವರು ಮಕ್ಕಳಿಗೆ ಆರೋಗ್ಯ ತೊಂದರೆಗಳಿದ್ದು, ಕೆಲಸ ಮಾಡಲು ಆಗುತ್ತಿಲ್ಲ. ಈಗಾಗಲೇ 20 ಲಕ್ಷ ರೂ. ನಷ್ಟು ಸಾಲ ಮಾಡಿದ್ದೇನೆ. ನಮಗೆ ಹಣದ ಮೂಲ ಯಾವುದೂ ಇಲ್ಲ. ಹೀಗಾಗಿ ಜೀವನ ಕಷ್ಟವಾಗಿದೆ ಎಂದು ಕಣ್ಣೀರು ಹಾಕಿದ್ದಾರೆ.ತನ್ನ ಕಿರಿಯ ಮಗುವನ್ನು ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಪತಿ ಬಿಟ್ಟು ಹೋಗಿದ್ದಾರೆ. 

ಮಹಿಳೆ ಬೀದಿಗೆ ಬಂದಿರುವ ವಿಚಾರ ಮಾಧ್ಯಮಗಳಲ್ಲಿ ಬರುತ್ತಿದ್ದಂತೆ ಜಿಲ್ಲಾಡಳಿತ ಕುಟುಂಬವನ್ನು ಆಶ್ರಯ ಮನೆಯೊಂದಕ್ಕೆ ಸ್ಥಳಾಂತರಿಸಿದೆ. ಅಲ್ಲದೆ ಮಕ್ಕಳ ಚಿಕಿತ್ಸಾ ವೆಚ್ಚ ಭರಿಸುವುದಾಗಿ ರಾಜ್ಯ ಸರ್ಕಾರದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ತಿಳಿಸಿದ್ದಾರೆ.

Join our WhatsApp group for latest news updates