ವಾಣಿಜ್ಯ ನಗರಿ ಮುಂಬೈನಲ್ಲಿ ವರುಣನ ರೌದ್ರನರ್ತನ ; 26 ವರ್ಷಗಳ ದಾಖಲೆಯನ್ನೇ ಮುರಿದ ಮಳೆ !

23-09-20 01:13 pm       Headline Karnataka News Network   ದೇಶ - ವಿದೇಶ

ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಒಂದೇ ದಿನ ಸುರಿದ ಮಳೆಯು 26 ವರ್ಷಗಳ ದಾಖಲೆಯನ್ನೇ ಮುರಿದಿದೆ. ಕಳೆದ 24 ಗಂಟೆಗಳಲ್ಲಿ 273.6 ಮಿಮಿ ನಷ್ಟು ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮುಂಬೈ, ಸೆಪ್ಚಂಬರ್ 23: ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಒಂದೇ ದಿನ ಸುರಿದ ಮಳೆಯು 26 ವರ್ಷಗಳ ದಾಖಲೆಯನ್ನೇ ಮುರಿದಿದೆ. ಕಳೆದ 24 ಗಂಟೆಗಳಲ್ಲಿ 273.6 ಮಿಮಿ ನಷ್ಟು ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಂಗಳವಾರ ಸಂಜೆ ಶುರುವಾದ ವರುಣನ ರೌದ್ರನರ್ತನ ಬುಧವಾರ ಬೆಳಗ್ಗೆವರೆಗೂ ಮುಂದುವರಿದಿದ್ದು, ವರುಣನ ಅಬ್ಬರಕ್ಕೆ ವಾಣಿಜ್ಯನಗರಿ ಈಗಾಗಲೇ ತತ್ತರಿಸಿ ಹೋಗಿದೆ. 1994 ರಿಂದ 2020ರ ಸಪ್ಟೆಂಬರ್ ಅವಧಿಯಲ್ಲಿ ಸುರಿದ 2ನೇ ಅತಿದೊಡ್ಡ ಮಳೆಯಾಗಿದೆ. ಇನ್ನು, 1974 ರಿಂದ 2020 ಸಪ್ಟೆಂಬರ್ ಅವಧಿಯಲ್ಲಿ ಸುರಿದ 4ನೇ ಅತಿದೊಡ್ಡ ಮಳೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಮಳೆಯ ಹೊಡೆತಕ್ಕೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಮುಂಬೈ ನಗರದ ಚಿತ್ರಣವೇ ಬದಲಾಗಿದೆ. ಮಳೆ ನೀರಿನ ನಡುವೆ ಸಿಲುಕಿದ ವಾಹನ ಸವಾರರ ಪರದಾಟ, ಮನೆಗಳಿಂದ ಹೊರ ಬರುವುದಕ್ಕೂ ಆಗದಂತೆ ದಿಗ್ಬಂಧನಕ್ಕೆ ಒಳಗಾಗಿರುವ ಜನರು, ಬೆಳ್ಳಂಬೆಳಗ್ಗೆ ಮಳೆಯಿಂದಾಗಿ ಜನಜೀವನ ಸ್ತಬ್ಧಗೊಂಡಿದೆ.

ಕಳೆದ ಮಂಗಳವಾರ ಸಂಜೆಯಿಂದ ಶುರುವಾದ ಮಳೆಯು ರಾತ್ರಿಯಿಡೀ ಸುರಿದಿದೆ. ಕೊಲಂಬಾದಿಂದ ಭಾಯಂದರ್ ‌ವರೆಗಿನ ಮುಂಬೈನ ಸಂಪೂರ್ಣ ಪಶ್ಚಿಮ ಭಾಗದಲ್ಲಿ ದಟ್ಟವಾದ ಮೋಡ ಮುಸುಕಿದ ವಾತಾವರಣವಿದ್ದು, ಮಂಗಳವಾರ ಸಂಜೆಯಿಂದ ಭಾರೀ ಮಳೆಯಾಗಿದೆ. ರಾತ್ರಿ 3.30 ರಿಂದ 5.30ರ ನಡುವೆ ಗುಡುಗು ಸಹಿತ ಭಾರಿ ಮಳೆಯಾಗಿರುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಪಶ್ಚಿಮ ವಿಭಾಗದ ಡೆಪ್ಯುಟಿ ಡೈರೆಕ್ಟರ್ ಜನರಲ್ ಕೆ.ಎಸ್.ಹೊಸಲಿಕರ್ ತಿಳಿಸಿದ್ದಾರೆ.

ಮುಂಬೈನಲ್ಲಿ ಸುರಿದ ಮಳೆಯಿಂದ ಸಬ್ ಅರ್ಬನ್ ರೈಲ್ವೆ ಸಂಚಾರವನ್ನು ರದ್ದುಗೊಳಿಸಲಾಗಿದೆ. ಠಾಣೆಯ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್ ಮತ್ತು ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್ ವಶಿ ನಡುವಿನ ರೈಲ್ವೆ ಸಂಚಾರವು ಬಂದ್ ಆಗಿದೆ. ರೈಲ್ವೆ ಹಳಿಗಳ ಮೇಲೆ ನೀರು ನಿಂತಿದ್ದು ಸಿಯಾನ್-ಕುರ್ಲಾ, ಚುನಭಟ್ಟಿ ಕುರ್ಲಾ ಮತ್ತು ಮಸೀದ್ ಸಬ್ ಅರ್ಬನ್ ರೈಲ್ವೆ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ದೂರದ ರೈಲುಗಳ ಸಂಚಾರ ಬಂದ್ ಅಥವಾ ಸಮಯ ಬದಲಾವಣೆ ಮಾಡಲಾಗುತ್ತದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

Join our WhatsApp group for latest news updates (2)