ಪಿಪಿಇ ಕಿಟ್ ಎಸೆದ ಕೊರೊನಾ ಸೋಂಕಿತ - ಬಿತ್ತು ಕೇಸ್

02-08-20 04:47 pm       Headline Karnataka News Network   ದೇಶ - ವಿದೇಶ

ಬೇಕಾಬಿಟ್ಟಿಯಾಗಿ ಪಿಪಿಇ ಕಿಟ್ ಎಸೆದಿದ್ದ ಕೊರೊನಾ ಸೋಂಕಿತನ ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ಪಾಠ ಕಲಿಸಲಾಗಿದೆ.

ನವದೆಹಲಿ: ಬೇಕಾಬಿಟ್ಟಿಯಾಗಿ ಪಿಪಿಇ ಕಿಟ್ ಎಸೆದಿದ್ದ ಕೊರೊನಾ ಸೋಂಕಿತನ ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ಪಾಠ ಕಲಿಸಲಾಗಿದೆ.

ದಕ್ಷಿಣ ದೆಹಲಿಯ ಸಿ.ಆರ್.ಪಾರ್ಕ್ ಬಳಿ ಘಟನೆ ನಡೆದಿದ್ದು, ಸೋಂಕಿತನ ವಿರುದ್ಧ ಸಾಂಕ್ರಾಮಿಕ ರೋಗ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಕೊರೊನಾ ಸೋಂಕಿತ ಗುಣಮುಖವಾದ ತಕ್ಷಣ ಆತನನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಿವುಡ್ ಸಂಗೀತ ಸಂಯೋಜಕ ಶಾಂತನು ಮೊಯಿತ್ರಾ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ವಿಡಿಯೋ ಆಧರಿಸಿ ಪೊಲೀಸರು ಎಚ್ಚೆತ್ತುಕೊಂಡು ಪ್ರಕರಣ ದಾಖಲಿಸಿದ್ದಾರೆ.

ಸೋಂಕಿತನ ಮನೆಯ ಸುತ್ತ ಹಲವು ವೃದ್ಧರಿದ್ದಾರೆ. ಕೊರೊನಾ ಸೋಂಕಿತರು ಈ ರೀತಿ ಪಿಪಿಇ ಕಿಟ್ ರಸ್ತೆಗೆ ಎಸೆದರೆ ಏನು ಗತಿ ಎಂದು ಜಾಲತಾಣಗಳಲ್ಲಿ ಪ್ರಶ್ನಿಸಲಾಗಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

 

ಕಲ್ಕಾಜಿ ಎಎಪಿ ಶಾಸಕ ಅತಿಶಿ ಮರ್ಲೆನಾ ಅವರಿಗೆ ಟ್ಯಾಗ್ ಮಾಡಿ ಮೊಯಿತ್ರಾ ಟ್ವೀಟ್ ಮಾಡಿದ್ದರು. ಈ ಗಲ್ಲಿಯಲ್ಲಿ ಯಾರೋ ಪಿಪಿಇ ಕಿಟ್ ಎಸೆದಿದ್ದಾರೆ. ಇದು ಬಹುಶಃ ಕೊರೊನಾ ಸೋಂಕಿತರ ಪಿಪಿಇ ಕಿಟ್ ಇರಬಹುದು. ಇದು ತುಂಬಾ ಅಪಾಯಕಾರಿ. ಈ ಭಾಗದಲ್ಲಿ ತುಂಬಾ ಜನ ಹಿರಿಯ ನಾಗರಿಕರಿದ್ದಾರೆ. ಅಧಿಕಾರಿಗಳು ತುರ್ತಾಗಿ ಇದನ್ನು ಗಮನಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ದೆಹಲಿ ಪೊಲೀಸರು ಈ ಕುರಿತು ತನಿಖೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಸೋಂಕಿತ ಗುಣಮುಖವಾಗುತ್ತಿದ್ದಂತೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.