ಡ್ರಗ್ಸ್ ನಂಟು ; ನಟಿ ದೀಪಿಕಾ ಪಡುಕೋಣೆ ವ್ಯವಸ್ಥಾಪಕಿಗೆ ಎನ್‌ಸಿಬಿ ಸಮನ್ಸ್!

28-10-20 09:38 am       Headline Karnataka News Network   ಸಿನಿಮಾ

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ವ್ಯವಸ್ಥಾಪಕಿ ಕರಿಷ್ಮಾ ಪ್ರಕಾಶ್ ಅವರಿಗೆ ಎನ್‌ಸಿಬಿ ಸಮನ್ಸ್ ಜಾರಿ ಮಾಡಿದೆ

ಮುಂಬೈ,ಅಕ್ಟೋಬರ್.28 : ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೀಪಿಕಾ ಪಡುಕೋಣೆ ವ್ಯವಸ್ಥಾಪಕಿ ಕರಿಶ್ಮಾ ಪ್ರಕಾಶ್‌ಗೆ ಎನ್‌ಸಿಬಿ ಸಮನ್ಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.

ಅಕ್ಟೋಬರ್ 27 ರಂದು ಎನ್‌ಸಿಬಿ ಅಧಿಕಾರಿಗಳು ಕರಿಶ್ಮಾ ಪ್ರಕಾಶ್ ಮನೆಯ ಮೇಲೆ ರೇಡ್ ಮಾಡಿದ್ದು, ಕರೀಶ್ಮಾ ನಿವಾಸದಲ್ಲಿ ಡ್ರಗ್ಸ್ ಪತ್ತೆಯಾಗಿದೆ. ಆದರೆ ಪತ್ತೆಯಾಗಿರುವ ಡ್ರಗ್ಸ್ 'ವಾಣಿಜ್ಯ ಪ್ರಮಾಣ'ದಲ್ಲಿಲ್ಲ ಎನ್ನಲಾಗುತ್ತಿದ್ದು, ಸದ್ಯ  ಕರಿಷ್ಮಾ ನಾಪತ್ತೆಯಾಗಿರುವ ಕಾರಣ ಅವರ ಮುಂಬೈನ ಮನೆ ಬಾಗಿಲಿಗೆ ಸಮನ್ಸ್ ಅನ್ನು ಅಂಟಿಸಲಾಗಿದೆ. ಕರಿಶ್ಮಾ ಅವರು ಸಮನ್ಸ್‌ಗೆ ಪ್ರತಿಕ್ರಿಯಿಸಲಿಲ್ಲವಾದರೆ ಆಕೆಯ ಬಂಧನಕ್ಕೆ ಎನ್‌ಸಿಬಿ ಮನವಿ ಮಾಡಲಿದೆ.

ಕಳೆದ ತಿಂಗಳೂ ಸಹ ಕರಿಷ್ಮಾ ಪ್ರಕಾಶ್ ಅವರನ್ನು ಬಾಲಿವುಡ್‌ನಲ್ಲಿ ನಿಷೇಧಿತ ವಸ್ತುಗಳ ಮಾರಾಟ ಮತ್ತು ಬಳಕೆಯ ಬಗ್ಗೆ ತನಿಖೆ ನಡೆಸುತ್ತಿರುವ ಎನ್.ಸಿ.ಬಿ. ಪ್ರಶ್ನಿಸಿತ್ತು.  ಈಗ ಕರಿಶ್ಮಾ ನಿವಾಸದಲ್ಲಿ ಮಾದಕ ವಸ್ತು ಸಿಕ್ಕಿರುವ ಕಾರಣ ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.