ಸಂಧಿವಾತ ಸಮಸ್ಯೆ ಮಹಿಳೆಯರಲ್ಲೇ ಹೆಚ್ಚು, ಕಾರಣವೇನು ಗೊತ್ತಾ? ವೈದ್ಯರ ಮಾಹಿತಿ ಇಲ್ಲಿದೆ

30-05-22 07:28 pm       Source: Vijayakarnataka   ಡಾಕ್ಟರ್ಸ್ ನೋಟ್

ಹಿಂಸೆ ನೀಡುವ ಸಂಧಿವಾತಕ್ಕೆ ಕಾರಣಗಳೇನು, ನೋವನ್ನು ಹೋಗಲಾಡಿಸಲು ಯಾವೆಲ್ಲ ರೀತಿಯ ಪರಿಹಾರವಿದೆ ಎನ್ನುವ ಬಗ್ಗೆ ಆಯುರ್ವೇದ ವೈದ್ಯೆ ಡಾ. ಅರುಣಾ ಮಂಗಳಗಿ ನೀಡಿದ ಮಾಹಿತಿ...

ಸಾಮಾನ್ಯವಾಗಿ ಮನೆಯಲ್ಲಿ ಹಿರಿಯರಿದ್ದರೆ ಅಯ್ಯೋ ಈ ಕಾಲುನೋವಿನ ಕಾಟದಿಂದ ಪ್ರತಿದಿನ ಹಿಂಸೆಯಾಗಿದೆ ಎನ್ನುವ ಮಾತು ಸಹಜವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಸಂಧಿವಾತದ ಸಮಸ್ಯೆ ಹೆಚ್ಚು ಜನರಲ್ಲಿ ಕಂಡು ಬರುತ್ತಿದೆ. ದೇಹದ ವಿವಿಧ ಸಂಧಿಗಳಲ್ಲಿ ಹಿಂಸೆ ನೀಡುವಷ್ಟು ನೋವನ್ನು ಕೊಡುವ ಸಂಧಿವಾತ ಆರಂಭವಾದರೆ ಕುಳಿತರೆ ಏಳಲಾಗದು, ಎದ್ದರೆ ಕುಳಿತುಕೊಳ್ಳಲಾಗದು ಎನ್ನುವ ಸ್ಥಿತಿಯನ್ನು ತರುತ್ತದೆ.

ಸಾಮಾನ್ಯವಾಗಿ 40 ವರ್ಷದ ನಂತರ ಕಾಣಿಸಿಕೊಳ್ಳುವ ಸಂಧಿವಾತ ದೇಹದ ಯಾವ ಕೀಲುಗಳು ಸೇರುವ ಜಾಗದಲ್ಲಿ ಬೇಕಾದರೂ ಆರಂಭವಾಗಬಹುದು. ಹೆಚ್ಚಾಗಿ ಕಾಲಿನ ಮಂಡಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ಈ ಸಂಧಿವಾತಕ್ಕೆ ಕಾರಣಗಳೇನು, ಯಾರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ ಏನು ಚಿಕಿತ್ಸೆ ಮಾಡಬಹುದು ಎನ್ನುವ ಬಗ್ಗೆ ಆಯುರ್ವೇದ ವೈದ್ಯೆ ಡಾ. ಅರುಣಾ ಮಂಗಳಗಿ ಮಾಹಿತಿ ನೀಡಿದ್ದಾರೆ ಇಲ್ಲಿದೆ ನೋಡಿ.

ಸಂಧಿವಾತದ ಲಕ್ಷಣ ಮತ್ತು ಕಾರಣಗಳು

  • ಸಾಮಾನ್ಯವಾಗಿ ಸಂಧಿವಾತ 40 ವರ್ಷದ ಬಳಿಕ ಕಾಣಿಸಿಕೊಳ್ಳುತ್ತದೆ.
  • ಸಂಧಿಗಳಲ್ಲಿ ಅಂದರೆ ಭಾರವನ್ನು ಹೊರುವ ಭಾಗಗಳಲ್ಲಿ ವಿಪರೀತ ನೋವು ಉಂಟಾಗುತ್ತದೆ. ಮುಖ್ಯವಾಗಿ ಮಂಡಿ ನೋವು ಕಾಣಿಸಿಕೊಳ್ಳುತ್ತದೆ.
  • ಸಂಧಿವಾತ ಕಾಣಿಸಿಕೊಳ್ಳಲು ವಯಸ್ಸು ಕೂಡ ಕಾರಣವಾಗಿದೆ.
  • ದೇಹದ ತೂಕ ಹೆಚ್ಚಿದ್ದರೆ ಈ ಸಂಧಿವಾತ ಕಾಣಿಸಿಕೊಳ್ಳುತ್ತದೆ.
  • ನೋವಿನ ಜಾಗದಲ್ಲಿ ಊತ ಕಾಣಿಸಿಕೊಳ್ಳುತ್ತದೆ.
  • ಇನ್ನು ಸಂಧಿವಾತದಿಂದ ದೇಹ ಬಳಲುತ್ತಿರುವ ಸಂದರ್ಭದಲ್ಲಿ 2 ಮೂಳೆಗಳ ಮಧ್ಯದಲ್ಲಿ ಕಾರ್ಟಿಲೇಜ್‌ಗಳಿರುತ್ತವೆ. ಇವು ಕುಶನ್‌ ರೀತಿಯಲ್ಲಿ ಮೃದುವಾಗಿರುತ್ತವೆ. ಸಂಧಿವಾತದಲ್ಲಿ ಈ ಕಾರ್ಟಿಲೇಜ್‌ಗಳು ಸವೆಯಲು ಆರಂಭವಾಗುತ್ತವೆ. ಮೂಳೆಗಳಲ್ಲಿ ಕ್ಯಾಲ್ಸಿಯಂ ಮಟ್ಟ ಕಡಿಮೆಯಾಗುತ್ತದೆ. ಇದರಿಂದಾಗಿ ದೇಹದ ಸಂಧುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

​ಮಹಿಳೆಯರಲ್ಲೇ ಸಂಧಿವಾತದ ಸಮಸ್ಯೆ ಹೆಚ್ಚು

ಸಂಧಿವಾತದ ಸಮಸ್ಯೆ ಪುರುಷರಿಗಿಂತ ಮಹಿಳೆಯರಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತದೆ ಎನ್ನುತ್ತಾರೆ ಡಾ. ಅರುಣಾ. ಏಕೆಂದರೆ,

  • ಮಹಿಳೆಯರಲ್ಲಿ ಬದಲಾಗುವ ಹಾರ್ಮೋನುಗಳಿಂದ ಸಂಧಿವಾತ ಕಾಣಿಸಿಕೊಳ್ಳುತ್ತದೆ.
  • ಇನ್ನು ಗರ್ಭಾವಸ್ಥೆಯ ಹಂತದಲ್ಲಿ ದೇಹದ ತೂಕ ಹೆಚ್ಚಾಗಿ, ಕಡಿಮೆಯಾಗುತ್ತದೆ. ಆಗ ಶರೀರದಲ್ಲಿನ ಬದಲಾವಣೆಗಳಿಂದ ಸಂಧಿವಾತದ ಸಮಸ್ಯೆ ಕಾಡುತ್ತದೆ.

ಸಂಧಿವಾತದ ಸಮಸ್ಯೆ ಪರಿಹಾರವೇನು?

  • ಸಂಧಿವಾತ ತಡೆಗೆ ಕ್ಯಾಲ್ಸಿಯಂ ಅಂಶಗಳ ಆಹಾರವನ್ನು ಹೆಚ್ಚು ಸೇವನೆ ಮಾಡಬೇಕು. ಅದರಲ್ಲೂ ಮಹಿಳೆಯರು ಕ್ಯಾಲ್ಸಿಯಂ ಭರಿತ ಆಹಾರ ಸೇವನೆಗಳ ಜೊತೆಗೆ ವೈದ್ಯರ ಸಲಹೆ ಮೇರೆಗೆ ಕ್ಯಾಲ್ಸಿಯಂ ಮಾತ್ರೆಗಳನ್ನೂ ಸೇವಿಸುವ ಅಗತ್ಯವಿರುತ್ತದೆ.
  • ಇನ್ನು ಆಯುರ್ವೇದಲ್ಲಿ ಗುಗ್ಲೂ, ರಾಸ್ನಾದಂತಹ ಔಷಧಗಳು ಸಂಧಿವಾತ ತಡೆಗೆ ಹೆಚ್ಚು ಪರಿಣಾಮಕಾರಿಯಾಗಿದೆ. ಇದರಿಂದ ಮೂಳೆಗಳ ಮತ್ತು ಕಾರ್ಟಿಲೇಜ್‌ಗಳ ಸವೆತವನ್ನು ತಡೆಯಬಹುದಾಗಿದೆ. ಜೊತೆಗೆ ಊತವನ್ನೂ ಕಡಿಮೆ ಮಾಡಬಹುದಾಗಿದೆ.
  • ಇನ್ನು ಸಂಧಿವಾತದ ತಡೆಗೆ ವ್ಯಾಯಾಮಗಳು ಹೆಚ್ಚು ಉಪಯುಕ್ತವಾಗಿದೆ. ಮಂಡಿಯ ನೋವಿದ್ದರೆ ಮಂಡಿಯನ್ನು ಬಿಗಿಗೊಳಿಸುವ ವ್ಯಾಯಾಮ ಮತ್ತು ಯೋಗಾಸನಗಳನ್ನು ಮಾಡುವುದು ಒಳಿತು.
  • ಪಂಚಕರ್ಮದಲ್ಲಿಯೂ ಸಂಧಿವಾತಕ್ಕೆ ಉತ್ತಮ ಪರಿಹಾರವಿದೆ. ನೋವಿರುವ ಜಾಗದಲ್ಲಿ ಎಣ್ಣೆಯ ಮಸಾಜ್‌ ಮಾಡಿದ ನಂತರ ಬಿಸಿ ನೀರಿನ ಶಾಖವನ್ನು ನೀಡಲಾಗುತ್ತದೆ. ಇದರಿಂದ ಅತಿಯಾದ ನೋವನ್ನು ತಕ್ಷಣ ನಿಯಂತ್ರಿಸಬಹುದು.
  • ದೇಹದ ತೂಕ ಹೆಚ್ಚಾಗದಂತೆ ನೋಡಿಕೊಳ್ಳುವುದು ಸಂಧಿವಾತ ತಡೆಗೆ ಇರುವ ಉತ್ತಮ ಪರಿಹಾರವಾಗಿದೆ

​ಕ್ಯಾಲ್ಸಿಯಂ ಅಂಶವಿರುವ ಆಹಾರ ಸೇವನೆ ಮಾಡಲೇಬೇಕು

Calcium: ಕ್ಯಾಲ್ಸಿಯಂ ಯಾವ ಆಹಾರಗಳಲ್ಲಿ ಸಮೃದ್ಧವಾಗಿರುತ್ತದೆ? ಇಲ್ಲಿದೆ ಮಾಹಿತಿ |  Health Tips in Kannada these five foods contains more calcium know details  here | TV9 Kannada

ಸಂಧಿವಾತಕ್ಕೆ ಕ್ಯಾಲ್ಸಿಯಂ ಅಂಶಗಳ ಕೊರತೆ ಕೂಡ ಒಂದು ಕಾರಣವಾಗಿರುವುದರಿಂದ ಕ್ಯಾಲ್ಸಿಯಂಯುಕ್ತ ಆಹಾರಗಳ ಸೇವನೆ ಮಾಡುವುದು ಮುಖ್ಯವಾಗಿದೆ. ಮಹಿಳೆಯರಲ್ಲಿ ಸಾಮಾನ್ಯವಾಗಿಯೇ ಕ್ಯಾಲ್ಸಿಯಂ ಅಂಶಗಳು ಅಧಿಕವಾಗಿ ಬೇಕಾಗಿರುವುದರಿಂದ ಸಂಧಿವಾತದ ಸಮಸ್ಯೆ ಇದ್ದವರಂತೂ ಅವಶ್ಯವಾಗಿ ಸೊಪ್ಪು, ಹಣ್ಣು, ತರಕಾರಿ, ಮೊಟ್ಟೆಯಂತಹ ಆಹಾರವನ್ನು ತೆಗೆದುಕೊಳ್ಳಬೇಕು ಎಂದು ಸಲಹೆ ನೀಡುತ್ತಾರೆ ಡಾ. ಅರುಣಾ ಮಂಗಳಗಿ.

How To Cure The Arthritis In Natural Way.