ಕೂದಲು ಬೇಗನೆ ಬೆಳ್ಳಗಾಗುವುದು: ಇದು ನಿಮ್ಮ ದೇಹದ ಕುರಿತು ಏನು ಸೂಚಿಸುತ್ತದೆ?

30-06-21 12:14 pm       Gururaja Achar, BoldSky Kannada   ಡಾಕ್ಟರ್ಸ್ ನೋಟ್

ಬಹುತೇಕರು ತಮ್ಮ ನೈಜ ವಯಸ್ಸಿಗಿಂತಲೂ ಹೆಚ್ಚು ವಯಸ್ಸಾದಂತೆ ಕಾಣಿಸುವವರೇ ಹೆಚ್ಚು. ಈ ವಿಚಾರದಲ್ಲಿ ಈಗಿನ ಧಾವಂತದ ಜೀವನಶೈಲಿಗೇ ಶಹಬ್ಬಾಸ್ ಗಿರಿ ಸಲ್ಲುತ್ತದೆ!!

ಅದೊಂದು ಕಾಲವಿತ್ತು. ವ್ಯಕ್ತಿಯೊಬ್ಬರು ಮೇಲ್ನೋಟಕ್ಕೆ ಹೇಗೆ ಕಾಣಿಸಿಕೊಳ್ಳುತ್ತಾರೆ ಅನ್ನೋದರ ಆಧಾರದ ಮೇಲೆ ಅವರ ವಯಸ್ಸನ್ನ ಅಂದಾಜಿಸಬಹುದಾಗಿದ್ದ ಕಾಲವದು! ಅದೇ ಇಂದಿನ ತಲೆಮಾರಿನವರನ್ನ ನೋಡಿ! ಅವರಲ್ಲಿ ಬಹುತೇಕರು ತಮ್ಮ ನೈಜ ವಯಸ್ಸಿಗಿಂತಲೂ ಹೆಚ್ಚು ವಯಸ್ಸಾದಂತೆ ಕಾಣಿಸುವವರೇ ಹೆಚ್ಚು. ಈ ವಿಚಾರದಲ್ಲಿ ಈಗಿನ ಧಾವಂತದ ಜೀವನಶೈಲಿಗೇ ಶಹಬ್ಬಾಸ್ ಗಿರಿ ಸಲ್ಲುತ್ತದೆ!! ವಿಶ್ರಾಂತಿ ಅನ್ನೋದನ್ನ ಕಲ್ಪಿಸಿಕೊಳ್ಳಲೂ ಸಾಧ್ಯವಾಗದೇ ಇರೋವಂತಹ ಇಂದಿನ ಜೀವನಶೈಲಿಯ ಕೊಡುಗೆ ಇದು!!!

"ನಮಗೆ ವಯಸ್ಸಾಗುತ್ತಿರೋದರ ಸೂಚನೆ ಇದು" ಅಂತಾ ಕೆಲವರು ಭಾವಿಸಿಯಾರು. ಆದರೆ, ನೆರೆಯುತ್ತಿರುವ ಅಥವಾ ಬಿಳಿಬಣ್ಣಕ್ಕೆ ತಿರುಗುತ್ತಿರುವ ನಿಮ್ಮ ತಲೆಗೂದಲು ಬರೀ ಅಷ್ಟನ್ನೇ ಹೇಳ್ತಿರೋದು ಅಂತಾ ನಿಮಗನಿಸುತ್ತದೆಯೇ ? ಹಾಗೆಂದು ನೀವಂದು ಕೊಂಡಿದ್ದರೆ ಪ್ರಾಯಶ: ಅದು ನಿಮ್ಮ ತಪ್ಪು ಕಲ್ಪನೆ. ಕೆಲ ಪ್ರಕರಣಗಳಲ್ಲಿ, ನೆರೆತ ಕೂದಲು ನಮ್ಮ ಜೈವಿಕ ವಯೋಮಾನಕ್ಕಿಂತಲೂ ಮೀರಿ ಇನ್ನೇನನ್ನೋ ಹೇಳುತ್ತಲೂ ಇರಬಹುದು.

ನಾವು ಈ ಕೆಳಗೆ ಪಟ್ಟಿ ಮಾಡಿರೋ ಯಾವುದಾದರೊಂದು ಆರೋಗ್ಯ ಸಮಸ್ಯೆಯ ಸೂಚಕವೂ ಆಗಿರಬಹುದು ಆ ನಮ್ಮ ನೆರೆತ ಕೂದಲು!! ಹೌದು, ನೀವು ಸರಿಯಾಗಿಯೇ ಓದಿರುವಿರಿ....

ಅವಧಿಗಿಂತ ಮೊದಲೇ ಕೂದಲು ನೆರೆಯುವುದು :

ಅದರ ಆರಂಭಿಕ ಲಕ್ಷಣಗಳು ಯಾವುವು ? ಆರಂಭಿಕ ಲಕ್ಷಣಗಳು ಹೇಗಿರುತ್ತವೆ ಅಂದ್ರೆ, ದಪ್ಪವಾಗಿರುವ ಹಾಗೂ ಕಡುಗಪ್ಪು ಬಣ್ಣದ ಕೂದಲು ತ್ವರಿತಗತಿಯಲ್ಲಿ ಉದುರಲಾರಂಭಿಸುತ್ತದೆ ಹಾಗೂ ತೆಳುವಾದ ಬಿಳಿಗೂದಲು ವೇಗವಾಗಿ ಬೆಳೆಯಲಾರಂಭಿಸುತ್ತದೆ. ಕೂದಲು ನೆರೆಯುವ ಒಟ್ಟಾರೆ ಪ್ರಕ್ರಿಯೆಯು ಕೂದಲುದುರುವ ಪ್ರಮಾಣ ಹಾಗೂ ಬೆಳವಣಿಗೆಯ ವಿನ್ಯಾಸವನ್ನ ಅವಲಂಬಿಸಿರೋದ್ರಿಂದ, ಅತ್ಯಂತ ಅಲ್ಪ ಅವಧಿಯಲ್ಲಿ, ಅತ್ಯಂತ ತ್ವರಿತಗತಿಯಲ್ಲಿ ಕೂದಲು ನೆರೆಯುವುದಕ್ಕೆ ಕೆಲವರು ಸಾಕ್ಷಿಯಾಗುತ್ತಾರೆ.

ಪುರುಷರ ವಿಚಾರದಲ್ಲಿ ಹೇಳುವುದಾದರೆ, ಅವರ ಕೂದಲು ನೆರೆಯಲು ಆರಂಭಗೊಂಡಾಗ, ಅದರ ಪ್ರಥಮ ಲಕ್ಷಣ ಕಾಣಿಸಿಕೊಳ್ಳೋದು ಅವರ ಗಡ್ಡದಲ್ಲಿ. ಬಳಿಕ ಅದು ಮೀಸೆಯಲ್ಲೂ ಕಾಣಿಸಿಕೊಳ್ಳಲಾರಂಭಿಸುತ್ತದೆ ಹಾಗೂ ಅಂತಿಮವಾಗಿ ತಲೆಯನ್ನ ತಲುಪುವುದಕ್ಕೆ ಮೊದಲು ಕೆನ್ನೆಯ ಮೇಲೆ ಬೆಳೆಯುವ ಗಡ್ಡದ ಭಾಗವು ನೆರೆಯಲಾರಂಭಿಸುತ್ತದೆ (ಬಿಳಿಬಣ್ಣಕ್ಕೆ ತಿರುಗಲಾರಂಭಿಸುತ್ತದೆ). ಸ್ತ್ರೀಯರ ವಿಚಾರದಲ್ಲಿ ಹೇಳುವುದಾದರೆ, ಮುಂದಲೆಯ ಪಾರ್ಶ್ವಗಳಲ್ಲಿ ಮೊದಲು ತಲೆಗೂದಲು ನೆರೆಯಲಾರಂಭಿಸಿ, ಬಳಿಕ ಸಂಪೂರ್ಣ ಪಾರ್ಶ್ವಭಾಗಗಳನ್ನು ಆವರಿಸಿಕೊಳ್ಳುತ್ತದೆ.



ಅವಧಿಗಿಂತ ಮೊದಲೇ ನೆರೆಯುವ ತಲೆಗೂದಲು ನಿಮ್ಮ ಆರೋಗ್ಯದ ವಿಚಾರವಾಗಿ ಏನನ್ನು ಹೇಳುತ್ತದೆ ?

ಈಗಾಗಲೇ ಪ್ರಸ್ತಾವಿಸಿರುವ ಪ್ರಕಾರ, ನೆರೆತಿರುವ ಕೂದಲು ಎಲ್ಲ ಕಾಲಗಳಲ್ಲೂ ನಿಮ್ಮ ನೈಜ ವಯಸ್ಸಿನ ಮಾನದಂಡವೇನೂ ಆಗಿರುವುದಿಲ್ಲ. ಈ ಕೂದಲು ನೆರೆಯುವುದು ಕೆಲವೊಮ್ಮೆ ಯಾವುದೋ ಆಂತರಿಕವಾದ ಗಂಭೀರ ಸ್ವರೂಪದ ಖಾಯಿಲೆಯು ನಿಮ್ಮ ಶರೀರವನ್ನ ಆವರಿಸಿಕೊಳ್ಳುತ್ತಿದೆ ಅನ್ನೋದರ ಸೂಚಕವೂ ಆಗಿರುತ್ತದೆ. ಅದರ ಕುರಿತು ಕೂಡಲೇ ಗಮನಹರಿಸದೇ ಹೋದಲ್ಲಿ ಅದು ಮಾರಣಾಂತಿಕವೂ ಆದೀತು!! ಹಾಗಾದರೆ ಅಂತಹ ಯಾವ ಗಂಭೀರ ಸ್ವರೂಪದ ಮಾರಣಾಂತಿಕ ಖಾಯಿಲೆಗಳ ಸೂಚಕ ಈ ನೆರೆತ ಕೂದಲು ಆಗಿರುತ್ತದೆ ಅನ್ನೋದರ ಬಗ್ಗೆ ಸ್ವಲ್ಪ ತಿಳಿಯಲು ಪ್ರಯತ್ನಿಸೋಣ:



ವಿಟಮಿನ್ ನ ಕೊರತೆಯಿಂದ ನೀವು ಬಳಲುತ್ತಿರಬಹುದು

ಕೆಲ ವ್ಯಕ್ತಿಗಳ ಕೂದಲು ಬಹುಬೇಗನೇ ನೆರೆಯುತ್ತದೆ. ಸಂಶೋಧನೆಯು ತೋರಿಸಿಕೊಟ್ಟಿರುವ ಪ್ರಕಾರ ಶರೀರದಲ್ಲಿ ವಿಟಮಿನ್ ಬಿ12 ರ ಕೊರತೆಯಿದ್ದರೆ, ಕೂದಲು ತನ್ನ ವರ್ಣಕಾರಕವನ್ನ (ಪಿಗ್ಮೆಂಟ್) ಕಳೆದುಕೊಳ್ಳುತ್ತದೆ. ಹಾಗಿದ್ದರೆ ಈ ಕೂದಲ ಪಿಗ್ಮೆಂಟ್ ಎಂದರೇನು ? ಪ್ರತೀ ಕೂದಲ ಎಳೆಯಲ್ಲೂ ಮೆಲನಿನ್ ಎಂದು ಕರೆಯಲ್ಪಡುವ ಒಂದು ಪಿಗ್ಮೆಂಟ್ ಅಥವಾ ವರ್ಣಕಾರಕವು ಇರುತ್ತದೆ. ನಮ್ಮ ತ್ವಚೆಯ ವರ್ಣಕ್ಕೂ ಇದೇ ಪಿಗ್ಮೆಂಟ್ ನ ಇರುವಿಕೆಯೇ ಕಾರಣವಾಗಿರುತ್ತದೆ. ಇದೇ ಪಿಗ್ಮೆಂಟ್ ನಮ್ಮ ಕೂದಲುಗಳಿಗೂ ಬಣ್ಣವನ್ನ ನೀಡುವುದು.



ಥೈರಾಯಿಡ್ ಗ್ರಂಥಿಯ ಸಮಸ್ಯೆಯ ಸೂಚಕವೂ ಆಗಿರಬಹುದು

ಥೈರಾಯಿಡ್ ಗ್ರಂಥಿಯ ಕಾರ್ಯಾಚರಣೆಯಲ್ಲಿ ವ್ಯತ್ಯಯವಾದಾಗ, ಅದು ಸ್ರವಿಸುವ ಹಾರ್ಮೋನುಗಳ ಪ್ರಮಾಣಗಳಲ್ಲೂ (ಹೈಪರ್ ಥೈರಾಯ್ಡಿಸಂ ಅಥವಾ ಹೈಪೋಥೈರಾಯ್ಡಿಸಂ) ವ್ಯತ್ಯಯಗಳಾಗುತ್ತವೆ. ಹೀಗೆ ಥೈರಾಯಿಡ್ ಹಾರ್ಮೋನುಗಳ ಸ್ರವಿಕೆಯಲ್ಲಿ ವ್ಯತ್ಯಯಗಳಾದಾಗಲೂ ಕೂಡ ಕೂದಲು ಬೇಗನೇ ನೆರೆಯುವ ಸಾಧ್ಯತೆ ಇರುತ್ತದೆ. ಹೈಪೋಥೈರಾಯ್ಡಿಸಂ ನಿಂದ ಬಳಲುವ ರೋಗಿಗಳ ಕೂದಲುಗಳ ಬುಡಭಾಗಗಳೂ ಸಹ ಕುಂಠಿತ ಶಕ್ತಿಯನ್ನ ತೋರಿಸಿಕೊಟ್ಟಿವೆ.



ಮಾನಸಿಕವಾಗಿ ನೀವು ತೀರಾ ಬಳಲುತ್ತಿರುವುದರ ಸೂಚಕವೂ ಆಗಿರಬಹುದು

ಹೌದು, ಮಾನಸಿಕ ಒತ್ತಡವೂ ಕೂಡ ತಲೆಕೂದಲು ಉದುರಿಹೋಗುವುದು, ಮತ್ತು ಅವಧಿಗಿಂತ ಮೊದಲೇ ತಲೆಗೂದಲು ನೆರೆಯುವುದಕ್ಕೆ ಕಾರಣವಾಗುವ ಸಾಧ್ಯತೆ ತುಂಬಾನೇ ಹೆಚ್ಚು. ಸಂಶೋಧನೆಯು ತೋರಿಸಿಕೊಟ್ಟಿರುವ ಪ್ರಕಾರ, ಮಾನಸಿಕ ಒತ್ತಡವು "ಎದುರಿಸು ಇಲ್ಲವೇ ಪಲಾಯನ ಮಾಡು" ಎಂಬ ಪ್ರತಿಕ್ರಿಯೆಯ ಭಾಗವಾಗಿರುವ ನರಗಳನ್ನ ಸಕ್ರಿಯಗೊಳಿಸುತ್ತದೆ. ಹೀಗಾದಾಗ, ಇದು ಕೂದಲ ಎಳೆಗಳಲ್ಲಿರುವ ವರ್ಣಕಾರಕಗಳನ್ನ ಉತ್ಪತ್ತಿ ಮಾಡುವಂತಹ ಕಾಂಡ ಕೋಶಗಳಿಗೆ (ಸ್ಟೆಮ್ ಸೆಲ್ಸ್) ಶಾಶ್ವತವಾದ ಹಾನಿಯನ್ನುಂಟು ಮಾಡುತ್ತದೆ.



ನಿಮ್ಮ ಯಕೃತ್ತು ತೊಂದರೆಗೀಡಾಗಿರಬಹುದು

ಆಮ್ಲೀಯತೆ (ಆಸಿಡಿಟಿ) ಹಾಗೂ ಯಕೃತ್ತಿನ ಸಮಸ್ಯೆಗಳಿಂದ ಬಳಲುತ್ತಿರುವವರೂ ಕೂಡ ಅವಧಿಗಿಂತ ಮೊದಲೇ ಕೂದಲು ನೆರೆಯುವ ಪರಿಸ್ಥಿತಿಗೆ ಗುರಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅದಕ್ಕೆ ಕಾರಣ ಶರೀರದ ರಾಸಾಯನಿಕ ಕ್ರಿಯೆಗಳ ಏರುಪೇರಾಗುವಿಕೆ. ಇಪ್ಪತ್ತರ ಹರೆಯದಲ್ಲೇ ತಲೆಕೂದಲು ನೆರೆಯಲಾರಂಭಿಸಿದ್ದರೆ, ಅದಕ್ಕೆ ಕಾರಣ ಪ್ರಾಯಶ: ನಿಮ್ಮ ಅನಾರೋಗ್ಯಕರ ಜೀವನ ಶೈಲಿಯೇ ಆಗಿದ್ದಿರಬಹುದು.



ನಿಮ್ಮ ಹೃದಯದ ಆರೋಗ್ಯವು ಅಪಾಯದಲ್ಲಿದೆ ಅನ್ನೋದರ ಸೂಚಕವೂ ಆಗಿರಬಹುದು

ವಿಶೇಷವಾಗಿ ಪುರುಷರಲ್ಲಿ, ನೆರೆತ ಕೂದಲು ಹೆಚ್ಚಿದ ಹೃದ್ರೋಗದೊಂದಿಗೆ ನಂಟು ಹೊಂದಿದೆ. ಸಂಶೋಧಕರು ಕಂಡುಕೊಂಡಿರುವ ಪ್ರಕಾರ, ಹೇರ್ ಸ್ಕೋರ್ ಮೂರಕ್ಕಿಂತ ಹೆಚ್ಚು ಇದ್ದವರಲ್ಲಿ ಕೊರೊನರಿ ಆರ್ಟರಿ ರೋಗದ ಅಪಾಯವು ಹೆಚ್ಚು ಇದ್ದಿತ್ತು. ಈ ಅಂಶವು ಅವರ ವಯೋಮಾನವನ್ನಾಗಲೀ ಅಥವಾ ಅವರಲ್ಲಿ ಮೊದಲೇ ಕಂಡುಕೊಳ್ಳಲಾದ ಹೃದ್ರೋಗದ ಅಪಾಯದ ವಿಚಾರಗಳನ್ನೇನೂ ಅವಲಂಬಿಸಿರಲಿಲ್ಲ.



ತಡೆಗಟ್ಟುವುದು ಹೇಗೆ?

ಇದನ್ನೆಲ್ಲ ಓದಿದ ಬಳಿಕ ತಲೆಬಿಸಿಯಾಯಿತೇ ? ಒಳ್ಳೆಯದು, ಇವೆಲ್ಲವನ್ನ ತಡೆಗಟ್ಟಬೇಕಾದರೆ ನೀವು ಆರೋಗ್ಯದಾಯಕವಾದ ಜೀವನಶೈಲಿಯನ್ನ ಆರಂಭಿಸಬೇಕು.



ಆರೋಗ್ಯಕರ ಆಹಾರ ಸೇವನೆ

ಯೋಗ್ಯ ಆಹಾರ ಸೇವನೆಯ ಮೂಲಕ ಸ್ವಲ್ಪಮಟ್ಟಿಗೆ ಕೂದಲು ನೆರೆಯುವ ಪ್ರಕ್ರಿಯೆಯನ್ನ ನಿಧಾನಗೊಳಿಸಬಹುದು ನಿಮ್ಮ ಕೂದಲಿಗೆ ಒಂದು ಆರೋಗ್ಯಯುತವಾದ ಸಮತೋಲನವನ್ನ ಕೊಡಬಲ್ಲಂತಹ ವಿವಿಧ ವಿಟಮಿನ್ ಗಳು (ಎ ಮತ್ತು ಬಿ), ಪ್ರೋಟೀನ್ ಗಳು, ತಾಮ್ರ, ಅಯೋಡಿನ್, ಮತ್ತು ಕಬ್ಬಿಣದಂತಹ ಖನಿಜಾಂಶಗಳಿವೆ. ಒಂದೊಮ್ಮೆ ನೀವು ಸೇವಿಸುತ್ತಿರುವ ಆಹಾರವು ಈ ಪ್ರಮುಖ ವಸ್ತುಗಳ ಕೊರತೆಯಿಂದ ಕೂಡಿದ್ದಲ್ಲಿ, ನಿಮ್ಮ ಕೂದಲು ಮಾಸಲಾಗುವ ಹಾಗೂ ತನ್ನ ಆರೋಗ್ಯವನ್ನ ಕಳೆದುಕೊಳ್ಳುವ ಸಾಧ್ಯತೆ ತುಂಬಾನೇ ಹೆಚ್ಚಾಗಿರುತ್ತದೆ. ಹಾಗಾಗಿ, ನಿಮ್ಮ ಭೋಜನ ಕ್ರಮದಲ್ಲಿ ಕಡುಹಸುರು ಬಣ್ಣದ ಸೊಪ್ಪು, ತರಕಾರಿಗಳು, ಕಿತ್ತಳೆ ಮತ್ತು ಹಳದಿವರ್ಣದ ಹಣ್ಣುಗಳು, ಹಾಗೂ ಇತರ ತರಕಾರಿಗಳನ್ನ ಒಳಗೊಳ್ಳಿರಿ. ತಾಜಾವಾಗಿರುವ ಹಸಿರು ಸೊಪ್ಪುಯುಕ್ತ ತರಕಾರಿಗಳು, ಟೊಮೆಟೊಗಳು, ಹೂಕೋಸು, ಧಾನ್ಯಗಳು, ಗಿಣ್ಣು, ಬಾಳೆಹಣ್ಣುಗಳು, ಮೊಟ್ಟೆಗಳು, ಮೀನುಗಳು, ಸೋಯಾ, ಹಾಗೂ ಬಹುಧಾನ್ಯಗಳನ್ನ ಹೆಚ್ಚು ಹೆಚ್ಚಾಗಿ ಸೇವಿಸಬೇಕು.



ವ್ಯಾಯಾಮ

ನಿಮ್ಮ ದೇಹದ ಒಟ್ಟಾರೆ ಆರೋಗ್ಯಕ್ಕಾಗಿ ಪ್ರತೀ ದಿನವೂ ವ್ಯಾಯಾಮ ಮಾಡುವುದು ಅತೀ ಅಗತ್ಯ ಅದು ಕೂದಲುದುರುವ ವಿಚಾರವಾಗಿರಲೀ ಇಲ್ಲವೇ ಅವಧಿಗೂ ಮೊದಲೇ ಕೂದಲು ನೆರೆಯುವ ವಿಚಾರವೇ ಆಗಿರಲೀ, ನಿಮ್ಮ ದಿನಚರಿಯಲ್ಲಿ ಕನಿಷ್ಟ 20 ರಿಂದ 30 ನಿಮಿಷಗಳ ಕಾಲದ ವ್ಯಾಯಾಮವನ್ನ ಒಳಗೊಳ್ಳುವುದು ತುಂಬಾನೇ ಮುಖ್ಯ. ದೈಹಿಕ ವ್ಯಾಯಾಮವು ನಿಮ್ಮ ಸದೃಢರನ್ನಾಗಿ ಇರಿಸುತ್ತದೆ ಹಾಗೂ ಸೋಂಕು ರೋಗಗಳ ವಿರುದ್ಧ ನಿಮ್ಮ ರೋಗನಿರೋಧಕ ಶಕ್ತಿಯನ್ನ ಸನ್ನದ್ಧವಾಗಿ ಇರಿಸುತ್ತದೆ.



ಸಾಕಷ್ಟುನೀರು ಕುಡಿಯಿರಿ

ಶರೀರದ ಒಟ್ಟಾರೆ ಆರೋಗ್ಯಕ್ಕೆ ನೀರು ಬಹಳ ಮುಖ್ಯ. ದಿನವಿಡೀ ಸಾಕಷ್ಟು ನೀರನ್ನು ಕುಡಿಯುವುದು ನಿಮ್ಮ ಉಲ್ಲಾಸಭರಿತರಾಗಿ ಹಾಗೂ ಆರೋಗ್ಯವಾಗಿರಿಸುವುದಷ್ಟೇ ಅಲ್ಲ, ಜೊತೆಗೆ ಅವಧಿಗೂ ಮೊದಲೇ ಕೂದಲು ನೆರೆಯುವುದಕ್ಕೆ ಹಾಗೂ ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಲ್ಲ ನಂಜನ್ನೂ ನಿಮ್ಮ ಶರೀರದಿಂದ ತೊಳೆದು ನಿವಾರಿಸುತ್ತದೆ.

(Kannada Copy of Boldsky Kannada)