ಮಗುವಿಗೆ ಬಾಟಲಿ ಹಾಲು ಕೊಡಬೇಕೆಂದಿದ್ದೀರಾ? ಈ ಅಂಶಗಳು ತಿಳಿದಿರಲಿ

03-07-21 02:36 pm       Reena TK, BoldSky Kannada   ಡಾಕ್ಟರ್ಸ್ ನೋಟ್

ಎದೆ ಹಾಲು ಕಡಿಮೆ ಇದ್ದರೆ ಲ್ಯಾಕ್ಟೋಜಿನ್‌ ಅಥವಾ ಫಾರ್ಮೂಲಾ ಮಿಲ್ಕ್‌ ನೀಡುವಂತೆ ಸೂಚಿಸುತ್ತಾರೆ.

ಮಗು ಜನಿಸಿದ ಆರು ತಿಂಗಳವರೆಗೆ ಎದೆ ಹಾಲು ಬಿಟ್ಟು ಬೇರೇನೂ ಕೊಡಬೇಡಿ ಎಂದು ಮಕ್ಕಳ ತಜ್ಞರು ಸೂಚಿಸುತ್ತಾರೆ. ಎದೆ ಹಾಲು ಕಡಿಮೆ ಇದ್ದರೆ ಲ್ಯಾಕ್ಟೋಜಿನ್‌ ಅಥವಾ ಫಾರ್ಮೂಲಾ ಮಿಲ್ಕ್‌ ನೀಡುವಂತೆ ಸೂಚಿಸುತ್ತಾರೆ.



ಇನ್ನು ಮಕ್ಕಳು ಸ್ವಲ್ಪ ದೊಡ್ಡವರಾದ ಮೇಲೆ ಅಂದ್ರೆ ಆರು ತಿಂಗಳು ಕಳೆದ ಮೇಲೆ ಉದ್ಯೋಗಸ್ಥೆ ತಾಯಿಯಾದರೆ ಮಗುವನ್ನು ಬಿಟ್ಟು ಕೆಲಸಕ್ಕೆ ಹೋಗುವ ಅನಿವಾರ್ಯತೆ ಎದುರಾಗುವುದು. ಆದರೆ ಮಗು ಬಾಟಲಿಗೆ ಅಭ್ಯಾಸವಾಗಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಆದರೆ ಒಮ್ಮೆ ಮಕ್ಕಳು ಬಾಟಲಿಗೆ ಅಭ್ಯಾಸವಾದರೆ ಮತ್ತೆ ಎದೆ ಹಾಲು ಕುಡಿಯಲು ಹಿಂದೇಟು ಹಾಕುತ್ತಾರೆ, ನನ್ನ ಮಗು ಎದೆ ಹಾಲುಕುಡಿಯಲು ಇಷ್ಟಪಡುತ್ತಿಲ್ಲ ಎಂದು ಎಷ್ಟೋ ತಾಯಂದಿರು ಹೇಳುತ್ತಾರೆ. ಏಕೆ ಮಗು ಹಾಲು ಕುಡಿಯುತ್ತಿಲ್ಲ? ಇದಕ್ಕೆ ವೈದ್ಯಕೀಯ ಭಾಷೆಯಲ್ಲಿ ನಿಪ್ಪಲ್‌ ಕನ್ಫ್ಯೂಷನ್ ಎಂದು ಕರೆಯಲಾಗುವುದು.



ನಿಪ್ಪಲ್‌ ಕನ್ಫ್ಯೂಷನ್ ಎಂದರೇನು?

ಸ್ತನ ಹಾಲು ಕುಡಿಯುವಾಗ ಮಗು ಸ್ವಲ್ಪ ಎಳೆದು ಕುಡಿಯಬೇಕಾಗುತ್ತದೆ. ಆದರೆ ಬಾಟಲಿ ಹಾಲು ಬಾಯಿಗೆ ಇಟ್ಟರೆ ಸುಲಭವಾಗಿ ಹಾಲು ಸಿಗುವುದರಿಂದ ಮಕ್ಕಳು ಬಾಟಲಿ ಹಾಲನ್ನೇ ಕುಡಿಯಲು ಇಷ್ಟಪಡುತ್ತಾರೆ. ಅಲ್ಲದೆ ಬಾಟಲಿ ಅಭ್ಯಾಸವಾದ ಮೇಲೆ ಮೊಲೆ ತೊಟ್ಟಿಗೆ ಬಾಯಿ ಹಾಕಿದಾಗ ಮಗುವಿಗೆ ಸ್ತನ ತೊಟ್ಟಿನ ಗಾತ್ರ ಬಾಟಲ್‌ ನಿಪ್ಪಲ್‌ಗಿಂತ ಕಡಿಮೆ ಇರುವುದರಿಂದ ಗೊಂದಲ ಉಂಟಾಗುತ್ತದೆ, ಆದ್ದರಿಂದ ಎದೆ ಹಾಲು ಕುಡಿಯಲು ನಿರಾಕರಿಸುತ್ತವೆ.

ಮಗುವಿಗೆ ನೀಡುವ ಬಾಟಲ್‌ ನಿಪ್ಪಲ್‌ ಗಾತ್ರ ನೋಡಿ

ಮಗುವಿಗೆ ಬಾಟಲಿ ಹಾಲು ಕೊಡುವಾಗ ಅದರ ನಿಪ್ಪಲ್‌ ರಂಧ್ರ ತುಂಬಾ ದೊಡ್ಡದು ಬೇಡ, ಸ್ವಲ್ಪ ಎಳೆದುಕೊಂಡು ಕುಡಿಯುವಂತೆ ಇರಲಿ, ಆಗ ಬಾಟಲಿ ಹಾಲು ಹಾಗೂ ಎದೆ ಹಾಲು ಎರಡಕ್ಕೂ ಅಭ್ಯಾಸ ಮಾಡುತ್ತವೆ.



ಬಾಟಲಿಗಿಂತ ಸ್ಪೂನ್‌ ಅಭ್ಯಾಸ ಮಾಡಿಸಿ

ಮಕ್ಕಳ ತಜ್ಞರು ಮಕ್ಕಳಿಗೆ ಬಾಟಲಿನಲ್ಲಿ ಹಾಲು ಅಥವಾ ನೀರು ಕೊಡುವುದನ್ನು ಪ್ರೋತ್ಸಾಹಿಸುವುದಿಲ್ಲ. ಲೋಟದಲ್ಲಿ ತೆಗೆದು ಸ್ಪೂನ್‌ನಲ್ಲಿ ಕುಡಿಸುವಂತೆಯೇ ಸೂಚಿಸುತ್ತಾರೆ. ಆಗಷ್ಟೇ ಜನಿಸಿದ ಮಗುವಿಗೆ ಫಾರ್ಮೂಲಾ ಹಾಲು ಕೊಡುವುದಾದರೆ ಸ್ಪೂನ್‌ನಲ್ಲಿಯೇ ಕುಡಿಸುವಂತೆ ಸೂಚಿಸುತ್ತಾರೆ. ಮಗುವಿಗೆ ಸ್ಪೂನ್‌ನಲ್ಲಿ ಕುಡಿಸುವ ಅಭ್ಯಾಸ ಮಾಡಿದರೆ ಈ ರೀತಿಯ ನಿಪ್ಪಲ್‌ ಕನ್ಫ್ಯೂಷನ್ ಇರಲ್ಲ. ಮಗು ಎದೆ ಹಾಲು ಕುಡಿಯಲು ತುಂಬಾ ಆಸಕ್ತಿಯನ್ನು ತೋರಿಸುತ್ತಾರೆ ಕೂಡ.



ಮಗುವಿನ ಆರೋಗ್ಯದ ದೃಷ್ಟಿಯಿಂದ ಕೂಡ ಸ್ಪೂನ್‌ನಲ್ಲಿ ನೀಡುವುದು ಒಳ್ಳೆಯದು

ಬಾಟಲಿನಲ್ಲಿ ಕೊಡುವವರು ಬಾಟಲಿ ಶುಚಿತ್ವದ ಕಡೆ ತುಂಬಾನೇ ಗಮನ ನೀಡಬೇಕು, ಇಲ್ಲದಿದ್ದರೆ ಮಗುವಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅದೇ ಲೋಟ ಹಾಗೂ ಸ್ಪೂನ್‌ ಬಳಸುವುದಾದರೆ ಶುಚಿ ಮಾಡುವುದು ಸುಲಭ, ಅಲ್ಲದೆ 9-10 ತಿಂಗಳು ತುಂಬುವಷ್ಟರಲ್ಲಿ ಲೋಟದಲ್ಲಿಯೇ ಕುಡಿಯುವ ಅಭ್ಯಾಸ ಕೂಡ ರೂಢಿಸಿಕೊಂಡು ಬಿಡುತ್ತಾರೆ. ಇದರಿಂದ ಪೋಷಕರಿಗೆ ಹೊರಗಡೆ ಕರಕ್ಕೊಂಡು ಹೋಗುವ ತುಂಬಾನೇ ಅನುಕೂಲವಾಗುವುದು.

(Kannada Copy of Boldsky Kannada)