ಮಕ್ಕಳು ಹೆಚ್ಚು ಓದುವಂತೆ ಮಾಡಲು ಇಲ್ಲಿವೆ ಸಿಂಪಲ್ ದಾರಿಗಳು

10-07-21 02:44 pm       Shreeraksha, BoldSky Kannada   ಡಾಕ್ಟರ್ಸ್ ನೋಟ್

ಅಭಿವೃದ್ಧಿ ಹೊಂದುತ್ತಿರುವ ಸಾಮಾಜಿಕ ಮಾಧ್ಯಮ, ವೈರಲ್ ವೀಡಿಯೊಗಳು, ಒಟಿಟಿ ಪ್ಲಾಟ್‌ಫಾರ್ಮ್‌ಗಳ ನಡುವೆ ಓದುವಿಕೆ ಎಂಬುದು ತುಂಬಾ ಹಿಂದೆ ಉಳಿದಿದೆ.

ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎಂಬ ಮಾತೇ ಇದೆ. ಪುಸ್ತಕಗಳನ್ನು ಓದುವುದರಿಂದ ಅಂತಹ ಲಾಭವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗಿದೆ. ಅಭಿವೃದ್ಧಿ ಹೊಂದುತ್ತಿರುವ ಸಾಮಾಜಿಕ ಮಾಧ್ಯಮ, ವೈರಲ್ ವೀಡಿಯೊಗಳು, ಒಟಿಟಿ ಪ್ಲಾಟ್‌ಫಾರ್ಮ್‌ಗಳ ನಡುವೆ ಓದುವಿಕೆ ಎಂಬುದು ತುಂಬಾ ಹಿಂದೆ ಉಳಿದಿದೆ.

ಓದುವುದೆಂದರೆ ಕೇವಲ ಶಾಲಾಪಠ್ಯಪುಸ್ತಕ ಮಾತ್ರ ಅಲ್ಲ, ಅವುಗಳ ಜೊತೆಗೆ ಇತರ ಪುಸ್ತಕಗಳನ್ನು ಓದುವುದರಿಂದ ಆಳವಾದ ಚಿಂತನೆ ಹೆಚ್ಚಾಗುವುದಲ್ಲದೇ, ಕಲ್ಪನೆಯನ್ನು ಉತ್ಕೃಷ್ಟಗೊಳಿಸುತ್ತದೆ ಮತ್ತು ಏಕಾಗ್ರತೆಯನ್ನು ಸುಧಾರಿಸುತ್ತದೆ. ಆದರೆ ಆನ್‌ಲೈನ್ ಲರ್ನಿಂಗ್ ಪೋರ್ಟಲ್ ನ ಇತ್ತೀಚಿನ ಸಮೀಕ್ಷೆಯ ಪ್ರಕಾರ, ಶೇಕಡಾ 41 ರಷ್ಟು ಪೋಷಕರು ತಮ್ಮ ಮಕ್ಕಳು ಪುಸ್ತಕ ಓದುವುದನ್ನು ಇಷ್ಟಪಡುವುದಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಓದುವಾಗ ಹೆಚ್ಚು ಗಮನ ಕೊಡುವುದಿಲ್ಲ ಎಂಬುದು ಕೂಡ ಪೋಷಕರ ದೂರು.

ಓದುವುದು ಒಂದು ಆಹ್ಲಾದಕರ ಚಟುವಟಿಕೆ ಎಂಬುದನ್ನು ಮಕ್ಕಳು ಕ್ರಮೇಣ ಮರೆಯುತ್ತಿರುವುದು ದುರಾದೃಷ್ಟದ ಸಂಗತಿ. ಆದರೆ, ಎಲ್ಲವೂ ಕಳೆದುಹೋಗಿಲ್ಲ. ಸ್ವಲ್ಪ ಪ್ರಯತ್ನದಿಂದ, ನಿಮ್ಮ ಮಗುವನ್ನು ಓದುವಂತೆ ಮಾಡಬಹುದು, ಅವರಲ್ಲೂ ಪುಸ್ತಕ್ದ ಹುಚ್ಚು ಬೆಳೆಸಬಹುದು. ಅದು ಹೇಗೆ ಎಂಬುದನ್ನು ಇಲ್ಲಿ ನೋಡಿ.

ಮಕ್ಕಳಿಗೆ ಪುಸ್ತಕ ಓದುವ ಹುಚ್ಚನ್ನು ಬೆಳೆಸುವ ದಾರಿಗಳನ್ನು ಈ ಕೆಳಗೆ ನೀಡಲಾಗಿದೆ:



1. ನೀವೇ ಮಾದರಿಯಾಗಿ:

ಮಕ್ಕಳು, ಪೋಷಕರನ್ನು ಅನುಕರಣೆ ಮಾಡುತ್ತಾರೆ. ಅದು ಉಡುಗೆ-ತೊಡುಗೆ, ಮಾತಿನ ಶೈಲಿ, ಹವ್ಯಾಸಗಳು ಏನೇ ಇದ್ದರೂ ಹಿಂಬಾಲಿಸುತ್ತಾರೆ. ಅದ್ದರಿಂದ ಓದುವ ವಿಚಾರದಲ್ಲಿ ಅವರಿಗೆ ಮಾದರಿಯಾಗಿ. ಈ ದಿನಗಳಲ್ಲಿ ಪುಸ್ತಕಗಳನ್ನು ಓದಲು ನಿಮಗೆ ಸಮಯ ಸಿಗುವುದಿಲ್ಲ ಎಂದು ಹೇಳಬೇಡಿ. ನಿಮ್ಮ ಆನ್‌ಲೈನ್ ಚಟುವಟಿಕೆಗಳನ್ನು ಸ್ವಲ್ಪ ಬದಿಗಿಟ್ಟು, ನಿಮ್ಮ ಓದುವ ಅಭ್ಯಾಸಕ್ಕೆ ಮರಳಿ ಹೋಗಿ. ನೀವು ಓದಲು ಕುಳಿತರೆ ಅದನ್ನು ನೋಡುವ ಮಕ್ಕಳು ಖಂಡಿತವಾಗಿಯೂ ಓದಲು ಮುಂದಾಗುತ್ತಾರೆ.



2. ಮಿನಿ ಲೈಬ್ರರಿ ನಿರ್ಮಿಸಿ:

ನಿಮ್ಮ ಮನೆಯಲ್ಲಿ ಓದುವ ಸ್ಥಳವನ್ನು ನಿರ್ಮಿಸಿ. ಗೋಡೆಯ ಮೇಲೆ ಕಲರ್ ಫುಲ್ ಬಣ್ಣಗಳು, ಟ್ರೆಂಡಿ ಪುಸ್ತಕ ಸ್ಟ್ಯಾಂಡ್, ಸಣ್ಣ ಬುದ್ಧನ ವಿಗ್ರಹ, ಗಿಡಗಳು ಮುಂತಾದವುಗಳೊಂದಿಗೆ ಅಲಂಕರಿಸಿ. ಇದು ಓದಲು ಆಸಕ್ತಿ ಬರುವಂತೆ ಮಾಡುವುದು. ನಿಮ್ಮ ಮಗುವಿಗೆ ಮಿನಿ ಲೈಬ್ರರಿಯನ್ನು ನಿರ್ಮಿಸಲು ಪ್ರಯತ್ನಿಸಿ, ಮುಖ್ಯವಾಗಿ ಅವನ / ಅವಳ ಆಸಕ್ತಿಯನ್ನು ಸೆಳೆಯುವ ಪುಸ್ತಕಗಳನ್ನು ತಂದಿಡಿ, ಕೇವಲ ಕಾದಂಬರಿಗೆ ಸೀಮಿತಗೊಳಿಸಬೇಡಿ, ಎಲ್ಲಾ ಕ್ಷೇತ್ರಗಳ ವಿಷಯಗಳನ್ನು ತಿಳಿದುಕೊಳ್ಳುವುದು ಮುಖ್ಯ.



3. ಪುಸ್ತಕಗಳ ಬಗ್ಗೆ ಚರ್ಚಿಸಿ:

ನಿಮ್ಮ ಮಗುವಿನೊಂದಿಗೆ ಓದಲು ಮತ್ತು ಪುಸ್ತಕಗಳ ಬಗ್ಗೆ ಚರ್ಚಿಸಲು ಪ್ರತಿದಿನ ಒಂದು ಗಂಟೆ ನಿಗದಿಪಡಿಸಿ. ಅವರು ಓದಲೇಬೇಕು ಎನ್ನುವ ಕಟ್ಟುನಿಟ್ಟಾದ ದಿನಚರಿಯನ್ನು ಅನುಸರಿಸುವಂತೆ ಮಾಡುವ ಅಗತ್ಯವಿಲ್ಲ. ನಿಮ್ಮ ಮಗುವಿಗೆ ಇಷ್ಟವಾಗುವ ಪುಸ್ತಕಗಳನ್ನು ತೆಗೆದುಕೊಳ್ಳಲು ಬಿಡಿ. ಪುಸ್ತಕದಲ್ಲಿನ ಒಳ್ಳೆಯ ಮತ್ತು ಕೆಟ್ಟ ಅಂಶಗಳನ್ನು ಚರ್ಚಿಸಿ. ನಿಮ್ಮ ಮಗುವಿಗೆ ಇಷ್ಟಗಳು ಮತ್ತು ಇಷ್ಟಪಡದಿರುವಿಕೆಗಳನ್ನು ವ್ಯಕ್ತಪಡಿಸಲು ಪ್ರೋತ್ಸಾಹಿಸಿ.



4. ಪುಸ್ತಕ ಕ್ಲಬ್‌ಗಳಿಗೆ ಹೋಗಿ:

ನಿಮ್ಮ ಮಗುವನ್ನು ನೆರೆಹೊರೆಯಲ್ಲಿರುವ ಪುಸ್ತಕ ಕ್ಲಬ್‌ನ ಭಾಗವಾಗುವಂತೆ ಪ್ರೋತ್ಸಾಹಿಸಿ. ಪುಸ್ತಕಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಹೆಚ್ಚು ಓದಲು ಪರಸ್ಪರ ಪ್ರೋತ್ಸಾಹಿಸಬಹುದಾದ ಸಮಾನ ಆಸಕ್ತ ಗುಂಪನ್ನು ಹುಡುಕುವುದು ಇದರ ಆಲೋಚನೆ.



5. ಇ-ಬುಕ್‌ಗಳನ್ನು ಓದಲು ಬಿಡಿ:

ಭೌತಿಕ ಪುಸ್ತಕಗಳು ಮತ್ತು ಇ-ಪುಸ್ತಕಗಳ ನಡುವೆ ವ್ಯತ್ಯಾಸವನ್ನು ತೋರಿಸಬೇಡಿ. ನಿಮ್ಮ ಮಗು ಇ- ಪುಸ್ತಕಗಳನ್ನು ಓದುವುದನ್ನು ಪ್ರೀತಿಸುತ್ತಿದ್ದರೆ, ಇರಲಿ. ಅದನ್ನೇ ಓದಲಿ. ಡಿಜಿಟಲ್ ಅಥವಾ ಇನ್ನಿತರ ಎಲ್ಲಾ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಓದಲು ನಿಮ್ಮ ಮಗುವನ್ನು ಪ್ರೋತ್ಸಾಹಿಸಿ. ಯಾವುದರಲ್ಲಾದರೂ ಓದಿದರೆ ಸಾಕು, ವಿಷಯಗಳನ್ನು ತಿಳಿದುಕೊಂಡರೆ ಸಾಕು.

(Kannada Copy of Boldsky Kannada)