ಶತಾಯುಷಿ ಚಾಲಕ, ಬ್ರಿಟಿಷರ ಕಾಲದ ಕಂಟ್ರಾಕ್ಟರ್, ಕುಳೂರು ಸೇತುವೆ ನಿರ್ಮಿಸಿದ್ದ 108 ವಯಸ್ಸಿನ ಮೈಕಲ್ ಡಿಸೋಜ ಇನ್ನಿಲ್ಲ

08-09-22 10:01 pm       Udupi Correspondent   ಕರಾವಳಿ

ತಮ್ಮ ಇಳಿ ವಯಸ್ಸಿನಲ್ಲೂ ಡ್ರೈವಿಂಗ್ ಲೈಸನ್ಸ್ ಹೊಂದಿದ್ದ ನಿವೃತ್ತ ಯೋಧ, ಬ್ರಿಟಿಷರ ಕಾಲದ ಗುತ್ತಿಗೆದಾರ 108 ವರ್ಷದ ಶತಾಯುಷಿ ಮೈಕಲ್ ಡಿಸೋಜ ನಿಧನರಾಗಿದ್ದಾರೆ.

ಉಡುಪಿ, ಸೆ.8: ತಮ್ಮ ಇಳಿ ವಯಸ್ಸಿನಲ್ಲೂ ಡ್ರೈವಿಂಗ್ ಲೈಸನ್ಸ್ ಹೊಂದಿದ್ದ ನಿವೃತ್ತ ಯೋಧ, ಬ್ರಿಟಿಷರ ಕಾಲದ ಗುತ್ತಿಗೆದಾರ 108 ವರ್ಷದ ಶತಾಯುಷಿ ಮೈಕಲ್ ಡಿಸೋಜ ನಿಧನರಾಗಿದ್ದಾರೆ.

ಮಂಗಳೂರಿನ ಲೇಡಿಹಿಲ್ ನಿವಾಸಿಯಾಗಿದ್ದ ಮೈಕಲ್ ಡಿಸೋಜ ಅವರು ಶತಾಯುಷಿ ಕಳೆದರೂ ಆರೋಗ್ಯದಲ್ಲಿ ಸ್ವಸ್ಥರಾಗಿದ್ದು ಇತ್ತೀಚಿನ ವರೆಗೂ ಕಾರು ಡ್ರೈವಿಂಗ್ ಮಾಡುತ್ತಿದ್ದರು. ಇತ್ತೀಚೆಗಷ್ಟೇ ಲೇಡಿಹಿಲ್ಲಿನಿಂದ ಉಡುಪಿಯ ಪರ್ಕಳದ ಸಂಬಂಧಿಕರ ಮನೆಗೆ ಬಂದು ನೆಲೆಸಿದ್ದರು.

ಮದ್ರಾಸ್ ಸರಕಾರದಲ್ಲಿ ಸೇನೆಗೆ ಸೇರಿದ್ದ ಮೈಕಲ್, ಹತ್ತು ವರ್ಷಗಳ ಕಾಲ ಸೇನೆಯಲ್ಲಿ ಕೆಲಸ ಮಾಡಿ ನಿವೃತ್ತಿ ಪಡೆದಿದ್ದರು. ಸೇನೆಯಲ್ಲಿ ಮೆಕ್ಯಾನಿಕ್ ಕಂ ಡ್ರೈವರ್ ಆಗಿ ಕೆಲಸ ನಿರ್ವಹಿಸಿದ್ದರು. ಹತ್ತು ವರ್ಷ ಸೇನೆಯಲ್ಲಿ ದುಡಿದು ನಿವೃತ್ತಿಯ ಬಳಿಕ ಪಿಡಬ್ಲ್ಯುಡಿ ಕಂಟ್ರಾಕ್ಟರ್ ಆಗಿ ಸೇರಿದ್ದರು. ಮದ್ರಾಸ್ ಸರಕಾರದಲ್ಲಿದ್ದುಕೊಂಡೇ ಕಂಟ್ರಾಕ್ಟ್ ಕೆಲಸ ಮಾಡುತ್ತಿದ್ದರು. ಉಡುಪಿಯ ರಥಬೀದಿಯಲ್ಲಿ ಕಾಂಕ್ರೀಟ್, ಕುಳೂರಿನ ಸೇತುವೆಯನ್ನು ಬ್ರಿಟಿಷರ ಕಾಲದಲ್ಲಿ ಮೈಕಲ್ ಗುತ್ತಿಗೆ ಪಡೆದು ಮಾಡಿದ್ದರೆಂಬುದು ಹೆಗ್ಗಳಿಕೆ. ಮಲ್ಪೆ- ಕಲ್ಮಾಡಿ ಸೇತುವೆ ಸೇರಿ ಬೈಂದೂರಿನಲ್ಲಿ ಹಲವು ಸೇತುವೆಗಳನ್ನು ಮೈಕಲ್ ಮಾಡಿಕೊಟ್ಟಿದ್ದರು.

ಅವರು ಎಷ್ಟು ಆರೋಗ್ಯದಲ್ಲಿದ್ದರಂದ್ರೆ, ಮಂಗಳೂರಿನ ಆರ್ ಟಿಓ ಅವರಿಗೆ 2024ರ ವರೆಗೂ ಡ್ರೈವಿಂಗ್ ಲೈಸನ್ಸ್ ಕೊಟ್ಟಿತ್ತು. ಕೇವಲ ಎರಡು ದಿನಗಳ ಹಿಂದೆ ಸ್ವಲ್ಪ ಮಟ್ಟಿಗೆ ಅನಾರೋಗ್ಯಕ್ಕೆ ತುತ್ತಾಗಿದ್ದರು. ಸೆ.8ರಂದು ಕೊನೆಯುಸಿರೆಳೆದಿದ್ದಾರೆ. ಈ ಬಾರಿಯ 75ನೇ ಸ್ವಾತಂತ್ರ್ಯೋತ್ಸವದಂದು ಉಡುಪಿಯ ಇಂದ್ರಾಳಿಯಲ್ಲಿ ಲಯನ್ಸ್ ಕ್ಲಬ್ ವತಿಯಿಂದ ನಡೆದಿದ್ದ ಕಾರ್ಯಕ್ರಮದಲ್ಲಿ ಮೈಕಲ್ ಅವರು ಧ್ವಜಾರೋಹಣ ನೆರವೇರಿಸಿದ್ದರು. ಅವರ ಪತ್ನಿ ಎಲಿಸಾ ಡಿಸೋಜ 9 ವರ್ಷಗಳ ಹಿಂದೆ ಮೃತಪಟ್ಟಿದ್ದರು. ಮೈಕಲ್ ಡಿಸೋಜ ಅವರ ತಾಯಿಯೂ 108 ವರ್ಷ ಬದುಕಿದ್ದರು.

ಮೈಕಲ್ ಅವರಿಗೆ ಅಂತಿಮ ನಮನ ಸಲ್ಲಿಸುವ ಸಲುವಾಗಿ ಪರ್ಕಳದ ಅಚ್ಯುತ ನಗರದಲ್ಲಿ ಪಾರ್ಥಿವ ಶರೀರವನ್ನು ಸೆ.10ರ ಶನಿವಾರ ಬೆಳಗ್ಗೆ ಹತ್ತು ಗಂಟೆ ವರೆಗೆ ಇಡಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Michael D'Souza, a 108-year-old retired soldier and lone DL holder at this age passed away on Thursday, September 8. He had served in the army for 10 years. He joined the army in the Madras government and served as a mechanic-cum-driver. Michael D'Souza's mother also lived for 108 years. Originally a resident of Ladyhill, Mangaluru, Michael D'Souza lived his retired life at his relative's house in Parkala. After serving in the army for 10 years, he joined the PWD Department. He was involved in concretization of Udupi Car Street, Kulur Bridge built during the British period. Malpe–Kalmady bridge, and few other bridges of Byndoor and undivided DK district. The centenarian was also given a driving license to run a four-wheeler till 2024 by Mangalore RTO. He was ill for the last two days.