ಕೆಎಸ್ಆರ್ ಟಿಸಿ‌ ದಸರಾ ಟೂರ್ ಪ್ಯಾಕೇಜ್ ; ಒಂದೇ ದಿನದಲ್ಲಿ ಒಂಬತ್ತು ದೇಗುಲ ದರ್ಶನಕ್ಕೆ ತೊಕ್ಕೊಟ್ಟಿನಿಂದಲೂ ವಿಶೇಷ ಬಸ್ 

29-09-22 08:40 pm       Mangalore Correspondent   ಕರಾವಳಿ

ನವರಾತ್ರಿ ಪ್ರಯುಕ್ತ ಕೆಎಸ್‌ಆರ್ ಟಿಸಿ ಮಂಗಳೂರು ಡಿಪೋದಿಂದ ಸಾರ್ವಜನಿಕರಿಗಾಗಿ ಪ್ರಾರಂಭಿಸಲಾದ ದಕ್ಷಿಣ ಕನ್ನಡ ಜಿಲ್ಲೆಯ ಒಂಭತ್ತು ಪ್ರಮುಖ ದೇಗುಲ ದರ್ಶನದ "ದಸರಾ ಟೂರ್‌ ಪ್ಯಾಕೇಜ್‌" ಗೆ ಉತ್ತಮ ಸ್ಪಂದನೆ ಸಿಕ್ಕಿದ ಬೆನ್ನಲ್ಲೇ ಉಳ್ಳಾಲ ತಾಲೂಕಿನ ಭಕ್ತರಿಗೂ ಪ್ಯಾಕೇಜ್ ಸಿಗುವಂತಹ ಅವಕಾಶವನ್ನು ಕೆಎಸ್ಆರ್ ಟಿಸಿ ಮಂಗಳೂರು‌ ಡಿಪೋ ಕಲ್ಪಿಸಿದೆ. 

ಉಳ್ಳಾಲ, ಸೆ.29: ನವರಾತ್ರಿ ಪ್ರಯುಕ್ತ ಕೆಎಸ್‌ಆರ್ ಟಿಸಿ ಮಂಗಳೂರು ಡಿಪೋದಿಂದ ಸಾರ್ವಜನಿಕರಿಗಾಗಿ ಪ್ರಾರಂಭಿಸಲಾದ ದಕ್ಷಿಣ ಕನ್ನಡ ಜಿಲ್ಲೆಯ ಒಂಭತ್ತು ಪ್ರಮುಖ ದೇಗುಲ ದರ್ಶನದ "ದಸರಾ ಟೂರ್‌ ಪ್ಯಾಕೇಜ್‌" ಗೆ ಉತ್ತಮ ಸ್ಪಂದನೆ ಸಿಕ್ಕಿದ ಬೆನ್ನಲ್ಲೇ ಉಳ್ಳಾಲ ತಾಲೂಕಿನ ಭಕ್ತರಿಗೂ ಪ್ಯಾಕೇಜ್ ಸಿಗುವಂತಹ ಅವಕಾಶವನ್ನು ಕೆಎಸ್ಆರ್ ಟಿಸಿ ಮಂಗಳೂರು‌ ಡಿಪೋ ಕಲ್ಪಿಸಿದೆ. 

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ ಹಾಗೂ ನಿಯೋಗ ಕೆಎಸ್ಆರ್ ಟಿಸಿ ಅಧಿಕಾರಿಗೆ ಮನವಿಯೊಂದನ್ನು ಸಲ್ಲಿಸಿದ್ದು ಅದರಂತೆ ಇದೀಗ ದಸರಾ ಟೂರ್ ಪ್ಯಾಕೇಜ್ ಉಳ್ಳಾಲ ತಾಲೂಕಿನ ಜನರಿಗೂ ಸಿಗುವಂತಾಗಿದೆ. ಕೆಎಸ್‌ಆರ್ ಟಿಸಿ ಮಂಗಳೂರು ವಿಭಾಗದಿಂದ ದಕ್ಷಿಣ ಕನ್ನಡ ಜಿಲ್ಲೆಯ ಒಂಭತ್ತು ಪ್ರಮುಖ ದೇವಾಲಯಗಳ ದರ್ಶನಕ್ಕಾಗಿ ದಸರಾ ಟೂರ್ ಪ್ಯಾಕೇಜ್ ಕಳೆದ ಕೆಲವು ದಿನಗಳಿಂದ ಯಶಸ್ವಿಯಾಗಿದ್ದು, ಪ್ರವಾಸಿಗರು ಮತ್ತು ಯಾತ್ರಾರ್ಥಿಗಳು ನವರಾತ್ರಿ ಸಮಯದಲ್ಲಿ ಕರಾವಳಿ ಜಿಲ್ಲೆಯ ಪ್ರಮುಖ ದೇವಾಲಯಗಳಿಗೆ ಟಿಕೆಟ್ ಕಾಯ್ದಿರಿಸಿ ಪ್ರಯಾಣಿಸುತ್ತಿದ್ದಾರೆ. 

ಇದೇ ಶನಿವಾರದಿಂದ ಬೆಳಗ್ಗೆ 7.30ರಿಂದ ತೊಕ್ಕೊಟ್ಟು ಕೇಂದ್ರ ಬಸ್ಸು ನಿಲ್ದಾಣದಿಂದ ಕೆಎಸ್ ಆರ್ ಟಿಸಿ ವಿಶೇಷ ಬಸ್ಸುಗಳನ್ನ ಹೊರಡಿಸಲಿದ್ದು, ಬಸ್ಸು ನಿಲ್ದಾಣದಿಂದ ಹೊರಟು ನೇರವಾಗಿ
ಮಂಗಳಾದೇವಿ, ಪೊಳಲಿ ಶ್ರೀ ರಾಜರಾಜೇಶ್ವರಿ, ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ, ಕಟೀಲು ಶ್ರೀ ದುರ್ಗಾಪರಮೇಶ್ವರಿ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ, ಸಸಿಹಿತ್ಲು ಶ್ರೀ ಭಗವತಿ ಕ್ಷೇತ್ರ ಮತ್ತು ಸಸಿಹಿತ್ಲು ಬೀಚ್ ಸಂದರ್ಶನ ನಂತರ ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ, ಉರ್ವ ಶ್ರೀ ಮರಿಯಮ್ಮ ದೇವಾಲಯ ಮತ್ತು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯಗಳಿಗೆ ತೆರಳಿ ನವದುರ್ಗೆಯರ ವಿಗ್ರಹಗಳನ್ನು ವೀಕ್ಷಿಸಬಹುದಾಗಿದ್ದು ವಿವಿಧ ಕ್ಷೇತ್ರ ದರ್ಶನ ಮುಗಿಸಿ ರಾತ್ರಿ 8.30ಕ್ಕೆ ತೊಕ್ಕೊಟ್ಟು ಕೇಂದ್ರ ಬಸ್ಸು ನಿಲ್ದಾಣ ತಲುಪಲಿದ್ದು ಆಮೂಲಕ ಉಳ್ಳಾಲ ತಾಲೂಕಿನ ಪ್ರವಾಸಿಗರಿಗೂ ಅನುಕೂಲ ಕಲ್ಪಿಸಿದೆ. 

ಗುರುವಾರ ಬೆಳಗ್ಗೆ ಮಂಗಳೂರು ಡಿಪೋ ವಿಭಾಗೀಯ ನಿಯಂತ್ರಕ ರಾಜೇಶ್ ಶೆಟ್ಟಿ ಅವರಿಗೆ ಉಳ್ಳಾಲ ತಾಲೂಕಿನ ಭಕ್ತರ ಅನುಕೂಲಕ್ಕಾಗಿ ಮನವಿ ಸಲ್ಲಿಸಲಾಗಿದ್ದು ಅಧಿಕಾರಿ ತಕ್ಷಣ ಸ್ಪಂದಿಸಿ ಸೇವೆ ಒದಗಿಸುವುದಾಗಿ ತಿಳಿಸಿರುವುದು ಸಂತಸ ತಂದಿದೆ ಎಂದು ಬಿಜೆಪಿ ಮುಖಂಡ ಸತೀಶ್ ಕುಂಪಲ ತಿಳಿಸಿದ್ದಾರೆ. 

ವಯಸ್ಕರಿಗೆ ₹ 350 ಮತ್ತು ಮಕ್ಕಳಿಗೆ ₹ 300 ಪ್ರಯಾಣ ದರ ನಿಗದಿ ಪಡಿಸಲಾಗಿದೆ. ನಿಯೋಗದಲ್ಲಿ ಬಿಜೆಪಿ ಮಂಗಳೂರು ಮಂಡಲ ಪ್ರಧಾನ ಕಾರ್ಯದರ್ಶಿ ಹೇಮಂತ್ ಶೆಟ್ಟಿ , ಪ್ರದೀಪ್ ಶೆಟ್ಟಿ, ಪ್ರವೀಣ್ ಎಸ್ ಕುಂಪಲ, ದಯಾನಂದ್ ತೊಕ್ಕೊಟ್ಟು, ಪುರುಷೋತ್ತಮ ಕಲ್ಲಾಪು, ಪ್ರಶಾಂತ್ ಶೆಟ್ಟಿ ಪಿಲಾರ್ ಹಾಗೂ ಕೋಟೆಕಾರು ಪಟ್ಟಣ ಪಂಚಾಯತ್ ಮಾಜಿ ಉಪಾಧ್ಯಕ್ಷ ಅನಿಲ್ ಬಗಂಬಿಲ ಉಪಸ್ಥಿತರಿದ್ದರು.

Mangalore Dasra tour package by KSRTC, Visit to 9 temples in one day from Thokottu by special bus.