ಕಾರಿಂಜ ; ಮಳೆಗೆ ಕುಸಿದು ಬಿದ್ದ ದೇವಸ್ಥಾನದ ತಡೆಗೋಡೆ

14-10-20 04:36 pm       Headline Karnataka News Network   ಕರಾವಳಿ

ಕರಾವಳಿಯಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ, ನಾಲ್ಕು ಯುಗಗಳ ಪುರಾಣ ಇತಿಹಾಸ ಹೊಂದಿರುವ ಶ್ರೀ ಕ್ಷೇತ್ರ ಕಾರಿಂಜ ದೇವಸ್ಥಾನದ ತಡೆಗೋಡೆ ಕುಸಿದು ಬಿದ್ದಿದೆ.

ಬಂಟ್ವಾಳ, ಅಕ್ಟೋಬರ್.14 : ಕಳೆದೆರಡು ದಿನಗಳ ಮಳೆಯಿಂದಾಗಿ ಬಂಟ್ವಾಳ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಕಾರಿಂಜ ದೇವಸ್ಥಾನದ ಕಲ್ಲಿನ ತಡೆಗೋಡೆ ಕುಸಿದು ಬಿದ್ದಿದೆ.

ಶ್ರೀ ಕಾರಿಂಜೇಶ್ವರ ದೇವಸ್ಥಾನದ ಎಡ ಪಾರ್ಶ್ವದಲ್ಲಿ ಕಟ್ಟಿದ್ದ ಕಲ್ಲಿನ ತಡೆಗೋಡೆ ಕುಸಿದು ಬಿದ್ದಿದೆ. ಬುಧವಾರ ಬೆಳಗ್ಗೆ ಸಿಬ್ಬಂದಿಗಳು ತೆರಳಿದ್ದಾಗ ಘಟನೆ ಗಮನಕ್ಕೆ ಬಂದಿದೆ. ಈ ಅಂಗಣವನ್ನು ವಾನರಗಳಿಗೆ ನೈವೇದ್ಯ ಹಾಕಲು ಬಳಸುತ್ತಿದ್ದು, ಅಂಗಣದ ಇಂಟರ್ ಲಾಕ್ ಕಿತ್ತುಹೋಗಿದೆ. 

ಕುಸಿದ ಪಾರ್ಶ್ವದ ಕೆಳಭಾಗದಲ್ಲಿ ಕಲ್ಲು, ಮಣ್ಣಿನ ದಿಬ್ಬವಿದ್ದು, ದೇವಸ್ಥಾನಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ಆಡಳಿತಾಧಿಕಾರಿ ನೋಣಯ್ಯ ನಾಯ್ಕ್ ತಿಳಿಸಿದ್ದಾರೆ. ತಜ್ಞರ ಪರಿಶೀಲನೆ ಬಳಿಕ ಕಾಮಗಾರಿ ನಡೆಸಬೇಕಷ್ಟೆ ಎಂದು ಮಾಹಿತಿ ನೀಡಿದ್ದಾರೆ.