ಪುತ್ರಿ ಬರೆದ ಪತ್ರಕ್ಕೆ ತುರ್ತು ಸ್ಪಂದಿಸಿದ ಸಿಎಂ ಯಡಿಯೂರಪ್ಪ ; ಶಿಕ್ಷಕಿಯ ಸಂಪೂರ್ಣ ಚಿಕಿತ್ಸಾ ವೆಚ್ಚ ಭರಿಸುವ ಭರವಸೆ 

14-10-20 09:04 pm       Mangaluru Correspondent   ಕರಾವಳಿ

ಶಿಕ್ಷಕ ವೃತ್ತಿಯಲ್ಲಿದ್ದ ತನ್ನ ತಂದೆ, ತಾಯಿ ಕೊರೊನಾ ಸೋ‌ಂಕಿಗೆ ಒಳಗಾಗಿರುವುದಕ್ಕೆ ಶಿಕ್ಷಣ ಇಲಾಖೆಯ ವಿದ್ಯಾಗಮ ಯೋಜನೆಯೇ ಕಾರಣ‌ ಎಂದು ಆರೋಪಿಸಿ ಪುತ್ರಿ ಜಾಲತಾಣದಲ್ಲಿ ಬರೆದ ಪತ್ರಕ್ಕೆ ಸಿಎಂ ಯಡಿಯೂರಪ್ಪ ತುರ್ತಾಗಿ ಸ್ಪಂದಿಸಿದ್ದಾರೆ.

ಮಂಗಳೂರು, ಅಕ್ಟೋಬರ್ 14: ಶಿಕ್ಷಕ ವೃತ್ತಿಯಲ್ಲಿದ್ದ ತನ್ನ ತಂದೆ, ತಾಯಿ ಕೊರೊನಾ ಸೋ‌ಂಕಿಗೆ ಒಳಗಾಗಿರುವುದಕ್ಕೆ ಶಿಕ್ಷಣ ಇಲಾಖೆಯ ವಿದ್ಯಾಗಮ ಯೋಜನೆಯೇ ಕಾರಣ‌ ಎಂದು ಆರೋಪಿಸಿ ಪುತ್ರಿ ಜಾಲತಾಣದಲ್ಲಿ ಬರೆದ ಪತ್ರಕ್ಕೆ ಸಿಎಂ ಯಡಿಯೂರಪ್ಪ ತುರ್ತಾಗಿ ಸ್ಪಂದಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಾಯಿಯ ಸಂಪೂರ್ಣ ಚಿಕಿತ್ಸಾ ವೆಚ್ಚ ಭರಿಸಲು ಸಿಎಂ ಯಡಿಯೂರಪ್ಪ ದ.ಕ. ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ‌. 

ಮೂಡುಬಿದ್ರೆ ತಾಲೂಕಿನ ಶಿರ್ತಾಡಿ ಗ್ರಾಮದ ನಿವಾಸಿಗಳಾದ ಶಿಕ್ಷಕ ದಂಪತಿ ಶಶಿಕಾಂತ್ ವೈ ಮತ್ತು ಪದ್ಮಾಕ್ಷಿ ಎನ್. ಸೆ.29ರಂದು ಕೊರೊನಾ ಸೋಂಕಿಗೆ ಒಳಗಾಗಿದ್ದರು. ತಾಯಿ ಪದ್ಮಾಕ್ಷಿ ಸ್ಥಿತಿ ಗಂಭೀರವಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸಪೋರ್ಟ್ ನಲ್ಲಿದ್ದಾರೆ. ಇಬ್ಬರೂ ಶಿಕ್ಷಕ ವೃತ್ತಿಯಲ್ಲಿರುವ ಕಾರಣ ಸರಕಾರ ನಮ್ಮ ಬೆಂಬಲಕ್ಕೆ ಬರಬೇಕು. ಆಸ್ಪತ್ರೆಯ ವೆಚ್ಚ ಭರಿಸಲು ನಮ್ಮಿಂದ ಸಾಧ್ಯವಾಗದು‌. ಸರಕಾರದಿಂದ ಚಿಕಿತ್ಸೆಯ ಭರಿಸುವಂತೆ ಕೇಳಿಕೊಳ್ಳುತ್ತೇನೆ ಎಂದು ಪುತ್ರಿ ಐಶ್ವರ್ಯ ಜೈನ್ ಫೇಸ್ಬುಕ್ ನಲ್ಲಿ ಶಿಕ್ಷಣ ಸಚಿವರಿಗೆ ಬರೆದ ಪತ್ರ ವೈರಲ್ ಆಗಿದೆ.  ಸರಕಾರ ನೆರವು ಬಯಸಿ ಬರೆದ ಪತ್ರಕ್ಕೆ ಈಗ ಸಿಎಂ ಯಡಿಯೂರಪ್ಪ ಸ್ಪಂದಿಸಿದ್ದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಕರೆ ಮಾಡಿ, ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರಕಾರದಿಂದ ಭರಿಸುವುದಾಗಿ ಹೇಳಿದ್ದಾರೆ. ಅಲ್ಲದೆ, ಹೆಚ್ಚುವರಿ ಚಿಕಿತ್ಸೆ ನೀಡಲು ಏರ್ಪಾಡು ಮಾಡುವಂತೆ ತಿಳಿಸಿದ್ದಾರೆ. ರೋಗಿಯ ಮನೆಯವರಿಂದ ಯಾವುದೇ ಹಣ ಪಡೆಯದಂತೆ ಸೂಚಿಸಿದ್ದಾರೆ. 

ಸಿಎಂ ಸೂಚನೆ ಮೇರೆಗೆ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ., ಪದ್ಮಾಕ್ಷಿಯವರ ಪುತ್ರಿ ಐಶ್ವರ್ಯಾಳನ್ನು ಕರೆ ಮಾಡಿ ಸಂಪರ್ಕಿಸಿದ್ದು , ತಾಯಿಯ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಜಿಲ್ಲಾಡಳಿತ ನೋಡಿಕೊಳ್ಳಲಿದೆ. ಅ.13ರಂದು ಪದ್ಮಾಕ್ಷಿಯವರ ಕೋವಿಡ್ ವರದಿ ನೆಗೆಟಿವ್ ಬಂದಿದ್ದಾಗಿ ಸಾಂತ್ವನ ಹೇಳಿದ್ದಾಗಿ ದಕ್ಷಿಣ ಕನ್ನಡ ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಪ್ರಕಟಣೆ ಮೂಲಕ ತಿಳಿಸಿದ್ದಾರೆ.