ಅದಾನಿ ತೆಕ್ಕೆಗೆ ಮಂಗಳೂರು ಏರ್ಪೋರ್ಟ್ ; 69 ವರ್ಷಗಳ ಬಳಿಕ ಖಾಸಗಿ ಪಾಲು !

16-10-20 01:29 pm       Mangalore Correspondent   ಕರಾವಳಿ

ಮಂಗಳೂರು ಏರ್ಪೋರ್ಟ್ ಅದಾನಿ ಉದ್ಯಮ ಸಮೂಹದ ತೆಕ್ಕೆಗೆ ಬಿದ್ದಿದ್ದು ಹಸ್ತಾಂತರ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.

ಮಂಗಳೂರು, ಅಕ್ಟೋಬರ್ 16: ಮಂಗಳೂರು ಏರ್ಪೋರ್ಟ್ ಅದಾನಿ ಉದ್ಯಮ ಸಮೂಹದ ತೆಕ್ಕೆಗೆ ಬಿದ್ದಿದ್ದು ಹಸ್ತಾಂತರ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಈ ತಿಂಗಳ ಅಂತ್ಯದ ಒಳಗೆ ಏರ್ಪೋರ್ಟ್ ಹೊಣೆ ಪೂರ್ತಿ ಗೌತಮ್‌ ಅದಾನಿ ಒಡೆತನದ ಅದಾನಿ ಸಂಸ್ಥೆಗೆ ಬೀಳುವ ನಿರೀಕ್ಷೆಯಿದೆ. ಏರ್ಪೋರ್ಟ್ ಸ್ಥಾಪನೆಯಾದ 69 ವರ್ಷಗಳ ಬಳಿಕ ವಿಮಾನ ನಿಲ್ದಾಣ ಸರಕಾರದ ಬಳಿಯಿಂದ ಖಾಸಗಿ ತೆಕ್ಕೆಗೆ ಜಾರಲಿದೆ. 

ಮಾಹಿತಿ ಪ್ರಕಾರ, ನವೆಂಬರ್ 1ರಿಂದ ಏರ್‌ಪೋರ್ಟ್‌ ನಿರ್ವಹಣೆಯ ಹೊಣೆಯನ್ನು ಅದಾನಿ ಸಂಸ್ಥೆಗೆ ಅಧಿಕೃತವಾಗಿ ಹಸ್ತಾಂತರ ಆಗಲಿದೆ ಎನ್ನಲಾಗುತ್ತಿದೆ. ಹಸ್ತಾಂತರ ಆದರೂ, ಸದ್ಯಕ್ಕೆ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಅದಾನಿ ಸಂಸ್ಥೆ ಸಮಾನಾಂತರ ಹೊಣೆ ಹೊಂದಿರಲಿವೆ. ಆದರೆ, ಈ ವೇಳೆ ವಾಣಿಜ್ಯ ಚಟುವಟಿಕೆ, ಲಾಭ-ನಷ್ಟ ವ್ಯವಹಾರವನ್ನೂ ಅದಾನಿ ಸಂಸ್ಥೆಯೇ ನೋಡಿಕೊಳ್ಳಲಿದೆ. ವಿಮಾನ ನಿಲ್ದಾಣ ಪ್ರಾಧಿಕಾರ, ಒಟ್ಟು ವ್ಯವಸ್ಥೆಯ ಬಗ್ಗೆ ಮಾರ್ಗದರ್ಶಕ ಸ್ಥಾನದಲ್ಲಿ ಮಾತ್ರ ಇರಲಿದೆ. ಸದ್ಯಕ್ಕೆ ಅಲ್ಲಿನ ಉದ್ಯೋಗಿಗಳು ಕೂಡ ಯಥಾಸ್ಥಿತಿ ಇರಲಿದ್ದಾರೆ. ವರ್ಷದ ಬಳಿಕ ಹೊಸ ನೇಮಕಾತಿಯನ್ನು ಅದಾನಿ ಸಂಸ್ಥೆ ನಡೆಸಲಿದೆ. 

ಹಸ್ತಾಂತರ ಪ್ರಕ್ರಿಯೆ ಬಳಿಕವೂ ವಿಮಾನಗಳ ಆಗಮನ - ನಿರ್ಗಮನದ ಉಸ್ತುವಾರಿ ಹೊಣೆ ಪ್ರಾಧಿಕಾರದಲ್ಲೇ ಇರಲಿದೆ. ಹೀಗಾಗಿ ಏರ್‌ ಟ್ರಾಫಿಕ್‌ ಕಂಟ್ರೋಲ್‌ ಹಾಗೂ ಕಮ್ಯುನಿಕೇಶನ್‌ ಆ್ಯಂಡ್‌ ನೇವಿಗೇಷನ್‌ ಸೆಂಟರ್‌ನ ಉಸ್ತುವಾರಿ ಪ್ರಾಧಿಕಾರದಲ್ಲೆ ಇರಲಿದೆ. ಭದ್ರತೆ ಹೊರತುಪಡಿಸಿ ಟರ್ಮಿನಲ್‌ ಕಟ್ಟಡ, ರನ್‌ ವೇ, ಎಲೆಕ್ಟ್ರಿಕಲ್‌, ಸಿವಿಲ್‌ ಸೇರಿದಂತೆ ಎಲ್ಲ ವಿಚಾರಗಳನ್ನು ಅದಾನಿ ಸಂಸ್ಥೆ ನಿರ್ವಹಿಸಲಿದೆ.

ನಿಲ್ದಾಣದ ಒಟ್ಟು ಪ್ರಕ್ರಿಯೆ ಬಗ್ಗೆ ಅದಾನಿ ಸಂಸ್ಥೆಯ ಉನ್ನತ ಅಧಿಕಾರಿಗಳು ಅಧ್ಯಯನ ಮಾಡಿದ್ದಾರೆ. ಹಸ್ತಾಂತರ ಬಳಿಕ ನಿಲ್ದಾಣದ ನಿರ್ದೇಶಕ ಹುದ್ದೆ ಇರುವುದಿಲ್ಲ. ಬದಲಿಗೆ, ಅದಾನಿ ಸಂಸ್ಥೆಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. ಅದಾನಿ ಸಂಸ್ಥೆ ಪೂರ್ತಿಯಾಗಿ ಕೈಗೆ ತೆಗೆದುಕೊಂಡ ಬಳಿಕ ರನ್‌ವೇ ವಿಸ್ತರಣೆ, ಹೊಸದಿಲ್ಲಿ- ಮುಂಬಯಿ ಏರ್‌ಪೋರ್ಟ್‌ ಮಾದರಿಯಲ್ಲಿ ಮಂಗಳೂರಿನಲ್ಲೂ ಪ್ರತ್ಯೇಕ ಕಾಂಪ್ಲೆಕ್ಸ್‌, ಮಾಲ್‌ಗ‌ಳು ಬರಲಿದ್ದು ಅದಕ್ಕಾಗಿ ಕಂಪೆನಿ ದೊಡ್ಡ ಮಟ್ಟಿನ ಹೂಡಿಕೆ ಮಾಡಲಿದೆ. 

2018ರ ಡಿಸೆಂಬರ್‌ನಲ್ಲಿ ಮಂಗಳೂರು ವಿಮಾನ ನಿಲ್ದಾಣದ ಖಾಸಗಿ ಸಹಭಾಗಿತ್ವದಡಿ ಅಭಿವೃದ್ಧಿ ಪಡಿಸಲು ಟೆಂಡರ್‌ ಆಹ್ವಾನಿಸಲಾಗಿತ್ತು. 2020ರ ಫೆಬ್ರವರಿಯಲ್ಲಿ ಅದಾನಿ ಸಂಸ್ಥೆಯ ಜತೆಗೆ ಕೇಂದ್ರ ಸರಕಾರ ಒಪ್ಪಂದ ಮಾಡಿದ್ದಲ್ಲದೆ, ಮುಂದಿನ 50 ವರ್ಷಗಳ ವರೆಗೆ ಗುತ್ತಿಗೆ ನೀಡಲಾಗಿತ್ತು.