‘ಕಾಸರಗೋಡು ಸರ್ಕಾರಿ ಶಾಲೆ’ ಸಿನಿಮಾ ವಿವಾದ ಮತ್ತೆ ಮುನ್ನೆಲೆಗೆ ; ಅಡೂರು ಕನ್ನಡ ಸರ್ಕಾರಿ ಶಾಲೆಗೆ ಮಲಯಾಳಂ ಶಿಕ್ಷಕಿ ನೇಮಕ, ಕರ್ನಾಟಕದ ಸಚಿವರ ಪತ್ರಕ್ಕೂ ಕ್ಯಾರೆನ್ನದ ಕೇರಳ ಸರ್ಕಾರ

23-06-23 05:20 pm       Mangalore Correspondent   ಕರಾವಳಿ

ಖ್ಯಾತ ನಟ, ನಿರ್ದೇಶಕ ರಿಷಬ್ ಶೆಟ್ಟಿ 2018ರಲ್ಲಿ ಗಡಿನಾಡು ಕಾಸರಗೋಡು ಜಿಲ್ಲೆಯ ಕನ್ನಡಿಗರ ಬವಣೆಯನ್ನು ಕಟ್ಟಿಕೊಡುವ ಸರ್ಕಾರಿ ಕನ್ನಡ ಶಾಲೆಯ ಕುರಿತಾಗಿ ಸಿನಿಮಾ ಮಾಡಿದ್ದರು.

ಮಂಗಳೂರು, ಜೂನ್ 23: ಖ್ಯಾತ ನಟ, ನಿರ್ದೇಶಕ ರಿಷಬ್ ಶೆಟ್ಟಿ 2018ರಲ್ಲಿ ಗಡಿನಾಡು ಕಾಸರಗೋಡು ಜಿಲ್ಲೆಯ ಕನ್ನಡಿಗರ ಬವಣೆಯನ್ನು ಕಟ್ಟಿಕೊಡುವ ಸರ್ಕಾರಿ ಕನ್ನಡ ಶಾಲೆಯ ಕುರಿತಾಗಿ ಸಿನಿಮಾ ಮಾಡಿದ್ದರು. ಕನ್ನಡ ಮಾಧ್ಯಮ ಶಾಲೆಗಳಿಗೆ ಮಲಯಾಳಂ ಶಿಕ್ಷಕರನ್ನು ನೇಮಿಸಿ, ಕನ್ನಡಿಗರನ್ನು ತುಳಿಯುವ ವಿವಾದವನ್ನೇ ಎಳೆಯಾಗಿಟ್ಟು ಮಾಡಿದ್ದ ಚಿತ್ರ ಭಾರೀ ಹಿಟ್ ಆಗಿತ್ತು. ಅದಾಗಿ ವರ್ಷ ಐದು ಕಳೆದರೂ ಕಾಸರಗೋಡಿನಲ್ಲಿ ಸ್ಥಿತಿ ಬದಲಾಗಿಲ್ಲ. ಮತ್ತೆ ಮಲಯಾಳಂ ಶಿಕ್ಷಕರನ್ನ ಕನ್ನಡ ಶಾಲೆಗೆ ನೇಮಿಸಿ ಕನ್ನಡಿಗರನ್ನು ಹತ್ತಿಕ್ಕುವ ಕೆಲಸ ಆಗುತ್ತಿದೆ.

ಕಾಸರಗೋಡು ಸರ್ಕಾರಿ ಶಾಲೆ ಸಿನಿಮಾದ ಕೊನೆಯಲ್ಲಿ ನಟ ಅನಂತ್ ನಾಗ್ ಅದ್ಭುತ ಡೈಲಾಗ್ ಹೊಡೆಯುತ್ತಾರೆ. ಸಂಸತ್ತಿಗೆ ಸಂಸದರು ಬರಲ್ಲ ಎಂದು ಪಾರ್ಲಿಮೆಂಟನ್ನು ಮುಚ್ಚಲ್ಲ. ಐಸಿಯುಗೆ ರೋಗಿಗಳು ಬರಲ್ಲ ಅಂತ ಐಸಿಯು ಮುಚ್ಚೋಕೆ ಆಗಲ್ಲ. ಅದೇ ರೀತಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಒಂದು ಮಗು ಇದ್ದರೂ, ಅಲ್ಲಿ ಕನ್ನಡಿಗರೇ ಶಿಕ್ಷಕರು ಇರಬೇಕು, ಅದನ್ನು ಮುಚ್ಚುವುದು ಸಾಧ್ಯವಿಲ್ಲ ಎಂದಿದ್ದರು. ಅನಂತನಾಗ್ ಹೇಳುವ ಈ ಡೈಲಾಗ್ ಅದೆಷ್ಟು ಮನಸ್ಸು ತಟ್ಟಿತ್ತು ಅಂದರೆ, ಎಲ್ಲ ಕನ್ನಡಿಗರ ಎದೆಗಪ್ಪಳಿಸಿತ್ತು. ಮಾತೃಭಾಷೆ ಕನ್ನಡದಲ್ಲೇ ಕಲಿಯೋದು ಕನ್ನಡಿಗರ ಹಕ್ಕು ಅನ್ನೋದನ್ನು ಸಾರಿ ಹೇಳಿತ್ತು. ಆದರೆ, ಸಿನಿಮಾದಲ್ಲಿ ತೋರಿಸಿದ ಕಥಾವಸ್ತುವೇ ಕಾಸರಗೋಡು ಜಿಲ್ಲೆಯಲ್ಲಿ ಮಾತ್ರ ವಾಸ್ತವ ಸ್ಥಿತಿಯಾಗಿ ಮತ್ತೆ ಮತ್ತೆ ಮರುಕಳಿಸುತ್ತಿದೆ.

ಕಾಸರಗೋಡು ಜಿಲ್ಲೆಯ ಸುಳ್ಯದ ಗಡಿಭಾಗ ಅಡೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆಯಲ್ಲಿ ಇತ್ತೀಚೆಗೆ ಮಲಯಾಳಂ ಶಿಕ್ಷಕಿಯೊಬ್ಬರನ್ನು ನೇಮಿಸಲಾಗಿದೆ. ಸರ್ಕಾರದ ನಡೆಯ ವಿರುದ್ಧ ವಿದ್ಯಾರ್ಥಿಗಳು, ಪೋಷಕರು ಪ್ರತಿಭಟನೆಯನ್ನೂ ನಡೆಸಿದ್ದಾರೆ. ಸಮಾಜ ವಿಜ್ಞಾನ ಪಠ್ಯ ಕಲಿಸಲು ಮಲಯಾಳಂ ಭಾಷಿಗ ಶಿಕ್ಷಕಿಯನ್ನು ನೇಮಿಸಿದ್ದನ್ನು ವಿರೋಧಿಸಿ ಜಿಲ್ಲಾಧಿಕಾರಿಯ ಗಮನಕ್ಕೂ ತಂದಿದ್ದಾರೆ. ಆದರೆ ಅಲ್ಲಿನ ಜನಪ್ರತಿನಿಧಿಗಳಾಗಲೀ, ಅಧಿಕಾರಿಗಳಾಗಲೀ ಈ ಬಗ್ಗೆ ಕ್ಯಾರೆಂದಿಲ್ಲ. ಹೀಗಾಗಿ ಸ್ಥಳೀಯರು ಸೇರಿಕೊಂಡು ಹೈಕೋರ್ಟ್ ಮೆಟ್ಟಿಲೇರಿದ್ದು, ಕಾಸರಗೋಡು ಜಿಲ್ಲೆಯಲ್ಲಿ ಕನ್ನಡಿಗರನ್ನೇ ಸರ್ಕಾರಿ ಹುದ್ದೆಗೆ ನೇಮಕ ಮಾಡಬೇಕು. ಜೊತೆಗೆ, ಕನ್ನಡ ಶಾಲೆಗಳಿಗೆ ಕನ್ನಡಿಗರನ್ನೇ ಶಿಕ್ಷಕರನ್ನಾಗಿ ನೇಮಿಸಬೇಕು ಎಂದು ರಿಟ್ ಅರ್ಜಿ ಸಲ್ಲಿಸಿದ್ದಾರೆ.

ಇದೇ ವೇಳೆ, ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ, ಕೇರಳದ ಶಿಕ್ಷಣ ಸಚಿವ ಶಿವನ್ ಕುಟ್ಟಿ ಅವರಿಗೆ ಪತ್ರ ಬರೆದಿದ್ದಾರೆ. ಜೂನ್ 5ಕ್ಕೆ ಪತ್ರ ಬರೆದಿದ್ದು, ಗಡಿನಾಡಿನ ಕನ್ನಡ ಭಾಷಾ ಅಲ್ಪಸಂಖ್ಯಾತರದ್ದು ಮಾತೃಭಾಷೆಯಲ್ಲಿ ಕಲಿಯೋದು ಮೂಲಭೂತ ಹಕ್ಕು. ಅದಕ್ಕೆ ಚ್ಯುತಿ ಬರದಂತೆ ನೋಡಿಕೊಳ್ಳಬೇಕು. ಕನ್ನಡದ ಶಿಕ್ಷಕರನ್ನೇ ಶಾಲೆಗಳಲ್ಲಿ ನೇಮಿಸಬೇಕು. ಈಗಾಗಲೇ ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು ಕಾಸರಗೋಡು ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಈ ಬಗ್ಗೆ ಮನವರಿಕೆ ಮಾಡಿದ್ದಾರೆ ಎಂದು ಕೇರಳದ ಶಿಕ್ಷಣ ಸಚಿವ ಶಿವನ್ ಕುಟ್ಟಿ ಗಮನಕ್ಕೆ ತಂದಿದ್ದರು. ಕರ್ನಾಟಕ ಸರ್ಕಾರದಿಂದ ಅಧಿಕೃತವಾಗಿ ಈ ರೀತಿ ಮನವಿ ಮಾಡಿಕೊಂಡಿದ್ದರೂ, ಅದಕ್ಕೆ ಸ್ಪಂದಿಸುವ ಗೋಜಿಗೆ ಕೇರಳ ಸರಕಾರ ಮುಂದಾಗಿಲ್ಲ. ಬದಲಿಗೆ, ಮಲಯಾಳಂ ಶಿಕ್ಷಕರನ್ನೇ ಶಾಲೆಯಲ್ಲಿ ಮುಂದುವರಿಸಿದ್ದಾರೆ.

ಗಡಿನಾಡು ಕಾಸರಗೋಡು ಜಿಲ್ಲೆಯ ಅರ್ಧಕ್ಕೂ ಹೆಚ್ಚು ಭಾಗದಲ್ಲಿ ಈಗಲೂ ಕನ್ನಡ ಮಾಧ್ಯಮ ಶಾಲೆಗಳೇ ಇದ್ದು, ಸಾವಿರಾರು ವಿದ್ಯಾರ್ಥಿಗಳು ಅಲ್ಲಿ ಕಲಿಯುತ್ತಿದ್ದಾರೆ. ಕನ್ನಡ ಶಾಲೆಗಳಲ್ಲಿ ಖಾಲಿಯಾದ ಹುದ್ದೆಗಳಿಗೆ ಕೇರಳ ಸರ್ಕಾರ ಮಲಯಾಳಂ ಶಿಕ್ಷಕರನ್ನೇ ನೇಮಿಸುವ ಮೂಲಕ ಕನ್ನಡಿಗರ ಮೇಲೆ ಮಲಯಾಳ ಭಾಷೆಯನ್ನು ಹೇರುವ ಕೆಲಸ ಮಾಡುತ್ತಿದೆ. ಕಾಸರಗೋಡು ಸರ್ಕಾರಿ ಶಾಲೆಯ ಹೆಸರಲ್ಲಿ ಸಿನಿಮಾ ಮಾಡಿ, ಅಲ್ಲಿನ ವಾಸ್ತವ ಸ್ಥಿತಿಯನ್ನು ಜಗತ್ತಿನೆತ್ತರಕ್ಕೆ ಬಿತ್ತರಿಸಿದ್ದರೂ, ಕೇರಳ ಸರ್ಕಾರ ಮಾತ್ರ ಯಾವುದಕ್ಕೂ ಕ್ಯಾರೆನ್ನದೆ ಆನೆ ನಡೆದಿದ್ದೇ ದಾರಿ ಎನ್ನುವಂತೆ ವರ್ತಿಸುತ್ತಿದೆ.

Appointemt of Malyalam teacher at Kannada Government school at Kasargod sparks kasargod.