ಬಿಕೆ ಹರಿಪ್ರಸಾದ್ ಅವರನ್ನು ತುಳಿಯುವ ಪ್ರಯತ್ನ ಬೇಡ, ಸಚಿವ ಸ್ಥಾನ ಕೊಡದಿದ್ದರೆ ಪರಿಣಾಮ ಎದುರಿಸಬೇಕು ; ಪ್ರಣವಾನಂದ 

03-07-23 02:54 pm       Mangalore Correspondent   ಕರಾವಳಿ

ವಿಧಾನ ಪರಿಷತ್ ಸದಸ್ಯ, ಬಿಲ್ಲವ ಸಮುದಾಯದ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಅವರ ಸುದೀರ್ಘ ಸೇವಾನುಭವ ಪರಿಗಣಿಸಿ ಅವರನ್ನು ಮಂತ್ರಿಯನ್ನಾಗಿಸಬೇಕು.

ಮಂಗಳೂರು, ಜುಲೈ 3: ವಿಧಾನ ಪರಿಷತ್ ಸದಸ್ಯ, ಬಿಲ್ಲವ ಸಮುದಾಯದ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಅವರ ಸುದೀರ್ಘ ಸೇವಾನುಭವ ಪರಿಗಣಿಸಿ ಅವರನ್ನು ಮಂತ್ರಿಯನ್ನಾಗಿಸಬೇಕು. ಕಾಂಗ್ರೆಸಿನಲ್ಲಿ ಅವರನ್ನು ತುಳಿಯುವ ಪ್ರಯತ್ನ ನಡೆಯುತ್ತಿದ್ದು, ಇಂಥ ಪ್ರಯತ್ನಗಳು ನಡೆದರೆ, ಮುಂದಿನ ಜಿ.ಪಂ, ತಾ.ಪಂ ಚುನಾವಣೆಯಲ್ಲಿ ಹಾಗೂ ಲೋಕಸಭೆ ಚುನಾವಣೆಯಲ್ಲಿ ಬಿಲ್ಲವರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಡಾ. ಪ್ರಣವಾನಂದ ಸ್ವಾಮೀಜಿ ಹೇಳಿದ್ದಾರೆ. 

Horatti has violated anti-defection law: BK Hariprasad | Deccan Herald

ಕಾಂಗ್ರೆಸ್ ಪಕ್ಷದಲ್ಲಿ ಎಐಸಿಸಿ ಮಟ್ಟದ ನಾಯಕರಾಗಿದ್ದು ದೇಶದ ಹದಿನೈದು ರಾಜ್ಯಗಳಲ್ಲಿ ಪ್ರಭಾರಿಗಳಾಗಿದ್ದವರು ಬಿ.ಕೆ.ಹರಿಪ್ರಸಾದ್. ಆದರೆ ಅವರನ್ನೀಗ ಕಾಂಗ್ರೆಸ್ ಪಕ್ಷದಲ್ಲಿ ತುಳಿಯಲಾಗುತ್ತಿದೆ. ಮಂತ್ರಿ ಸ್ಥಾನ ನೀಡದೆ ಬಿಲ್ಲವ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ.  ರಾಜಕೀಯದಿಂದಲೇ ಸಂಪೂರ್ಣ ಮುಗಿಸಬೇಕು ಎಂಬ ಹುನ್ನಾರ ನಡೆದಿದೆ ಎಂದು ಪ್ರಣವಾನಂದ ಸ್ವಾಮೀಜಿ ಸುದ್ದಿಗೋಷ್ಟಿಯಲ್ಲಿ ಆತಂಕ ವ್ಯಕ್ತಪಡಿಸಿದರು. ಜನಾರ್ದನ ಪೂಜಾರಿ ಅವರನ್ನು ಸೈಡ್ ಲೈನ್ ಮಾಡಿದಂತೆ ಹರಿಪ್ರಸಾದ್ ಅವರನ್ನೂ ಮೂಲೆಗುಂಪು ಮಾಡಲಾಗುತ್ತಿದೆ. ಹರಿಪ್ರಸಾದ್ ಅವರು ಹಿಂದುಳಿದ ಸಮುದಾಯದ ನಾಯಕರಾಗಿದ್ದಾರೆ. ಬಿಲ್ಲವ ಸಮುದಾಯವನ್ನು ಅವಗಣನೆ ಮಾಡಿದರೆ, ಸಮುದಾಯವನ್ನು ಟಾರ್ಗೆಟ್ ಮಾಡಿದರೆ, ರಾಜಕೀಯ ಪಕ್ಷಗಳು ಮುಂದಿನ ಚುನಾವಣೆಯಲ್ಲಿ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪ್ರಣವಾನಂದ ಹೇಳಿದರು. 

ದೊಡ್ಡ ಪ್ರಮಾಣದ ಮೀಸಲಾತಿ ನಮ್ಮ ಸಮುದಾಯಕ್ಕಿದೆ. ಆದರೆ ಕರ್ನಾಟಕದಲ್ಲಿ ಇಲ್ಲ. ಹೀಗಾಗಿ ನಮ್ಮ ಸಮುದಾಯ ಎಸ್.ಟಿ. ಮೀಸಲಾತಿಯನ್ನು ಪಡೆಯಲು ದೊಡ್ಡ ಮಟ್ಟಿನ ಹೋರಾಟ ಅವಶ್ಯ ಎಂದರು. ನಮ್ಮ ಕುಲಕಸುಬಿಗೆ ಪ್ರೋತ್ಸಾಹ ನೀಡಬೇಕು, ಕಾಂಗ್ರೆಸ್ ಸರ್ಕಾರ ಘೋಷಿಸಿದಂತೆ 250 ಕೋಟಿಗಳನ್ನು ಬ್ರಹ್ಮಶ್ರೀ ನಾರಾಯಣಗುರು ನಿಗಮಕ್ಕೆ ನೀಡಬೇಕು ಎಂದು ಸರಕಾರವನ್ನು ಒತ್ತಾಯಿಸಿದರು. 

ಬದುಕನ್ನು ಒತ್ತೆಯಿಟ್ಟು ಯಾರಿಗೋ ಕೆಲಸ ಮಾಡುವ ಅವಶ್ಯಕತೆ ಇಲ್ಲ ಎಂದು ಬಿಲ್ಲವ ಯುವಕರು ಹಿಂದು ಸಂಘಟನೆ ಹೆಸರಲ್ಲಿ ಕೇಸು ಮೈಗೆಳೆದುಕೊಳ್ಳುವ ಬಗ್ಗೆ ಟೀಕೆ ಮಾಡಿದರು. ಬೆಂಗಳೂರಿನಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಪುತ್ಥಳಿ ಅನಾವರಣ ಮಾಡಬೇಕು. ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ನೀರಾ ಮತ್ತು ಶೇಂದಿ ಇಳಿಸುವ ಕುರಿತು ವ್ಯವಸ್ಥೆ ಕಲ್ಪಿಸಬೇಕು ಎಂದವರು ಒತ್ತಾಯಿಸಿದರು.

Congress will face consequences if BK Hariprasad will not be given Minister post says Pranavananda Swamiji in Mangalore.