Truck accident, Puttur: ಪುತ್ತೂರಿನಲ್ಲಿ ಟ್ಯಾಂಕರ್ ಪಲ್ಟಿ ; ರಸ್ತೆ ತುಂಬೆಲ್ಲ ಹರಿದ ಪಾಮ್ ಆಯಿಲ್, ಅಪಘಾತ ತಪ್ಪಿಸಿದ ಸ್ಥಳೀಯರು

19-10-23 01:52 pm       Mangalore Correspondent   ಕರಾವಳಿ

ಪಾಮ್ ಆಯಿಲ್ ಸಾಗಿಸುತ್ತಿದ್ದ ಟ್ಯಾಂಕರ್ ಮಾಣಿ – ಮೈಸೂರು ಹೆದ್ದಾರಿಯ ಪುತ್ತೂರಿನ ಬೈಪಾಸ್ ರಸ್ತೆಯ ಉರ್ಲಂಡಿ ಬಳಿ ಪಲ್ಟಿಯಾಗಿದ್ದು ರಸ್ತೆಯ ತುಂಬೆಲ್ಲ ಆಯಿಲ್ ಹರಿದು ಹೋಗಿದೆ.

ಪುತ್ತೂರು, ಅ.19: ಪಾಮ್ ಆಯಿಲ್ ಸಾಗಿಸುತ್ತಿದ್ದ ಟ್ಯಾಂಕರ್ ಮಾಣಿ – ಮೈಸೂರು ಹೆದ್ದಾರಿಯ ಪುತ್ತೂರಿನ ಬೈಪಾಸ್ ರಸ್ತೆಯ ಉರ್ಲಂಡಿ ಬಳಿ ಪಲ್ಟಿಯಾಗಿದ್ದು ರಸ್ತೆಯ ತುಂಬೆಲ್ಲ ಆಯಿಲ್ ಹರಿದು ಹೋಗಿದೆ. ನಿನ್ನೆ ರಾತ್ರಿ ಘಟನೆ ನಡೆದಿದ್ದು ಟ್ಯಾಂಕರ್ ನಿಂದ ಪಾಮ್ ಆಯಿಲ್‌ ಸೋರಿಕೆಯಾಗಿ ರಸ್ತೆಯಲ್ಲಿ ಹರಡಿದೆ. 

ಮಂಗಳೂರಿನಿಂದ ಮಡಿಕೇರಿ ಕಡೆಗೆ ಪಾಮ್ ಆಯಿಲ್ ತುಂಬಿದ್ದ ಟ್ಯಾಂಕರ್ ತೆರಳುತ್ತಿದ್ದಾಗ, ಮುಂದಿನಿಂದ ಬರುತ್ತಿದ್ದ ಕಾರನ್ನು ತಪ್ಪಿಸಲು ಹೋಗಿ ಟ್ಯಾಂಕರ್ ಪಲ್ಟಿಯಾಗಿದೆ. ಪಾಮ್ ಆಯಿಲ್ ರಸ್ತೆ ತುಂಬೆಲ್ಲ ಹರಿದಿತ್ತು. ತಕ್ಷಣ ಸ್ಥಳೀಯರು ಸೇರಿದ್ದು, ಇತರೇ ವಾಹನಗಳನ್ನು ಎಚ್ಚರಿಸಿ ರಸ್ತೆಯಲ್ಲಿ ಆಯಿಲ್ ಚೆಲ್ಲಿರುವುದರಿಂದ ಅಪಘಾತಕ್ಕೀಡಾಗದಂತೆ ತಪ್ಪಿಸಿದರು. 

ಘಟನೆಯಲ್ಲಿ ಟ್ಯಾಂಕರ್ ಚಾಲಕನಿಗೆ ಗಾಯವಾಗಿದ್ದು ಪುತ್ತಿಲ ಪರಿವಾರದ ಮುಖ್ಯಸ್ಥ ಅರುಣ್ ಕುಮಾರ್ ಪುತ್ತಿಲ ಅವರು ಗಾಯಾಳು ಚಾಲಕನನ್ನು ತಮ್ಮ ಕಾರಿನಲ್ಲಿ ಕರೆದೊಯ್ದು ಮಹಾವೀರ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಅಗ್ನಿಶಾಮಕ ದಳದವರು ಹಾಗೂ ಮೆಸ್ಕಾಂ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.

Tanker truck accident, oil spill all over the road at Puttur