Mangalore Mcc raid, Madka Soda: ಕೊಳಚೆ ನೀರಿನಲ್ಲೇ ಮಟ್ಕಾ ಸೋಡಾ ಪಾಟ್ ತೊಳೆವ ವ್ಯಾಪಾರಿಗಳು ; ತಂಬಾಕು ಜಗಿದು ಉಗಿಯೋದೂ ಅಲ್ಲೇ ! ವಿಡಿಯೋ ವೈರಲ್ ಬೆನ್ನಲ್ಲೇ ಎಚ್ಚೆತ್ತ ಪಾಲಿಕೆ 

23-10-23 06:33 pm       Mangalore Correspondent   ಕರಾವಳಿ

ಸ್ವಚ್ಛತೆ ಕಾಪಾಡದೆ ಬೇಕಾಬಿಟ್ಟಿಯಾಗಿ ಮಟ್ಕಾ ಸೋಡಾ ಮಾರಾಟ ಮಾಡುತ್ತಿದ್ದ ಕುದ್ರೋಳಿ ದೇವಸ್ಥಾನ ಬಳಿಯ ನವರಾತ್ರಿ ಉತ್ಸವದ ಸ್ಟಾಲ್ ಗೆ ಪಾಲಿಕೆಯ ಆರೋಗ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.‌

ಮಂಗಳೂರು, ಅ.23: ಸ್ವಚ್ಛತೆ ಕಾಪಾಡದೆ ಬೇಕಾಬಿಟ್ಟಿಯಾಗಿ ಮಟ್ಕಾ ಸೋಡಾ ಮಾರಾಟ ಮಾಡುತ್ತಿದ್ದ ಕುದ್ರೋಳಿ ದೇವಸ್ಥಾನ ಬಳಿಯ ನವರಾತ್ರಿ ಉತ್ಸವದ ಸ್ಟಾಲ್ ಗೆ ಪಾಲಿಕೆಯ ಆರೋಗ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.‌

ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ದ್ವಾರದ ಬಳಿಯಲ್ಲೇ ಹಿಂದಿ ಮಾತನಾಡುತ್ತಿರುವ ವ್ಯಾಪಾರಿಗಳು ಮಟ್ಕಾ ಸೋಡಾ ಸ್ಟಾಲ್ ಹಾಕಿದ್ದರು. ಸ್ಟಾಲ್ ನಲ್ಲಿ ರಾತ್ರಿ ವೇಳೆ ಭರಪೂರ ವ್ಯಾಪಾರ ನಡೆಯುತ್ತಿದ್ದ ವೇಳೆ ಗ್ರಾಹಕರೊಬ್ಬರು ಅಲ್ಲಿನ ದುಸ್ಥಿತಿ ಬಗ್ಗೆ ವಿಡಿಯೋ ಮಾಡಿದ್ದರು. ಮಟ್ಕಾ ಪಾಟ್ ಗಳನ್ನು ತೊಳೆಯುತ್ತಿದ್ದ ನೀರು ತೀರಾ ಕಪ್ಪು ಕಪ್ಪಗೆ ಆಗಿದ್ದು ವಿಡಿಯೋದಲ್ಲಿ ದಾಖಲಾಗಿತ್ತು. ಅಲ್ಲದೆ, ಸ್ಟಾಲ್ ಸಿಬಂದಿ ತಂಬಾಕು ಜಗಿದು ಅಲ್ಲಿಯೇ ಉಗುಳುತ್ತಿದ್ದರು. ಅದನ್ನು ಬಾಯಿಂದ ತೆಗೆದು ಕೈತೊಳೆದ ನೀರಿನಲ್ಲೇ ಮಟ್ಕಾ ಪಾಟ್ ಗಳನ್ನು ತೊಳೆಯುತ್ತಿದ್ದರು. ಆ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದಲ್ಲದೆ, ಶುಚಿತ್ವ ಇಲ್ಲದ ಮಟ್ಕಾ ಸೋಡಾ ಬಗ್ಗೆ ಭಾರೀ ಆಕ್ರೋಶ ಕೇಳಿಬಂದಿತ್ತು. 

ವಿಡಿಯೋ ವೈರಲ್ ಬೆನ್ನಲ್ಲೇ ಸೋಮವಾರ ಮಧ್ಯಾಹ್ನ ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ. ಮಟ್ಕಾ ಸೋಡಾ ಸ್ಟಾಲ್ ನಲ್ಲಿದ್ದ ಪಾಟ್ ಸೇರಿ ಎಲ್ಲ ವಸ್ತುಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದು ಶುಚಿತ್ವ ಕಾಪಾಡದೆ ಸ್ಟಾಲ್ ಗಳನ್ನು ಹಾಕದಂತೆ ತಾಕೀತು ಮಾಡಿದ್ದಾರೆ. 

ಕುದ್ರೋಳಿ ನವರಾತ್ರಿ ಉತ್ಸವಕ್ಕೆ ಬಹಳಷ್ಟು ಸ್ಟಾಲ್ ಗಳನ್ನು ಹಾಕಿದ್ದು ಇತರೇ ಸ್ಟಾಲ್ ಗಳಲ್ಲೂ ಶುಚಿತ್ವ ಬಗ್ಗೆ ಪರಿಶೀಲನೆ ಮಾಡಿದ್ದಾರೆ.‌ ಆದರೆ ಈ ರೀತಿ ಶುಚಿತ್ವ ಇಲ್ಲದ ಸ್ಟಾಲ್ ಮಂಗಳೂರಿನ ಬಹಳಷ್ಟು ಕಡೆ ಇದ್ದು ಪಾಲಿಕೆ ಅಧಿಕಾರಿಗಳು ಕುರುಡರ ರೀತಿ ವರ್ತಿಸುತ್ತಾರೆ. ಕರಾವಳಿ ಉತ್ಸವ ಮೈದಾನದಲ್ಲಿ ಹಣ ಕೊಟ್ಟು ವಸ್ತು ಪ್ರದರ್ಶನ, ಅಕ್ವೇರಿಯಂ ನೋಡಲು ಹೋಗುವ ಜಾಗದಲ್ಲು ಅಂಥದ್ದೇ ವೈಪರೀತ್ಯ ಇದೆ. ಒಳಗಡೆ ತಿಂಡಿ ಸ್ಟಾಲ್ ಗಳನ್ನು ಹಾಕಿದ್ದು ವಾಕರಿಕೆ ಬರುವಂತಿದೆ. ಮಂಗಳೂರಿನ ಜನರು ಪ್ರಶ್ನೆ ಮಾಡುವುದನ್ನೇ ಬಿಟ್ಟಿದ್ದರಿಂದ ಎಲ್ಲೆಲ್ಲಿಂದ ಬಂದು ಇಲ್ಲಿ ಬೇಕಾಬಿಟ್ಟಿ ತಿಂಡಿ, ತಿನಿಸಿನ ಸ್ಟಾಲ್ ಹಾಕುತ್ತಿದ್ದಾರೆ. ಇದಕ್ಕೆಲ್ಲ ಪಾಲಿಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಆಗಾಗ್ಗೆ ದಾಳಿ ನಡೆಸಿ ಮೂಗುದಾರ ಹಾಕಬೇಕಿದೆ. ಎಲ್ಲೋ ವಿಡಿಯೋ ಬಂದಾಗ ಮಾತ್ರ ಎಚ್ಚತ್ತುಕೊಳ್ಳುವುದಲ್ಲ..

Matka Soda cup washed in ditry water and served at Kurdoli Dasara, MCC raid in Mangalore.