Parashurama Theme Park in Karkala: ಕಾಂಗ್ರೆಸ್ ಆಡಳಿತದಲ್ಲಿ ಪ್ರತಿಮೆ ನಕಲಿಯಾಗಿರುತ್ತಿದ್ದರೆ ಕರಾವಳಿ ಹೊತ್ತಿ ಉರೀತ್ತಿತ್ತು, ಪರಶುರಾಮನ ಶಾಪದಿಂದಲೇ ಕರಾವಳಿ ಬಿಜೆಪಿ ಮುಕ್ತವಾಗಲಿದೆ ; ಎಂ.ಜಿ. ಹೆಗ್ಡೆ ಆಕ್ರೋಶ

27-10-23 12:24 pm       Mangalore Correspondent   ಕರಾವಳಿ

ಕಾಂಗ್ರೆಸ್ ಆಡಳಿತದಲ್ಲಿ ಪರಶುರಾಮನ ಪ್ರತಿಮೆ ನಕಲಿ ಎಂದಾಗಿರುತ್ತಿದ್ದರೆ ಕರಾವಳಿಯೇ ಹೊತ್ತಿ ಉರಿಯುತ್ತಿತ್ತು. ಈಗ ಯಾಕೆ ಇವರೆಲ್ಲ ಸುಮ್ಮನಿದ್ದಾರೆ.‌

ಉಳ್ಳಾಲ, ಅ.27: ಕಾಂಗ್ರೆಸ್ ಆಡಳಿತದಲ್ಲಿ ಪರಶುರಾಮನ ಪ್ರತಿಮೆ ನಕಲಿ ಎಂದಾಗಿರುತ್ತಿದ್ದರೆ ಕರಾವಳಿಯೇ ಹೊತ್ತಿ ಉರಿಯುತ್ತಿತ್ತು. ಈಗ ಯಾಕೆ ಇವರೆಲ್ಲ ಸುಮ್ಮನಿದ್ದಾರೆ.‌ ಪರಶುರಾಮನ ಶಾಪದಿಂದಲೇ ಕರಾವಳಿ ಬಿಜೆಪಿ ಮುಕ್ತವಾಗಲಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಎಮ್.ಜಿ ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕಾರ್ಕಳದಲ್ಲಿ ಪರಶುರಾಮನ ಫೈಬರ್ ಪ್ರತಿಮೆ ನಿರ್ಮಿಸಿ ಕಂಚಿನದ್ದೆಂದು ಹೇಳಿ ಹಿಂದೂಗಳನ್ನು ಮೋಸಗೊಳಿಸಲಾಗಿದೆ ಎಂದು ಆರೋಪಿಸಿ ತೊಕ್ಕೊಟ್ಟಿನಲ್ಲಿ ಉಳ್ಳಾಲ‌ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಹಿಂದೂ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ಸುಳ್ಳನ್ನೇ ದೇವರೆಂದು ಆರಾಧಿಸುವ ಸೂಲಿಬೆಲೆ, ಶೋಭಕ್ಕ, ಸಿ.ಟಿ.ರವಿಯವರೇ ನೀವೀಗ ಎಲ್ಲಿದ್ದೀರಿ. ನೀವೇಕೆ ಕಾರ್ಕಳಕ್ಕೆ ಹೋಗುತ್ತಿಲ್ಲ‌‌? ಇಂಥಹ ಮೋಸ ಕಾಂಗ್ರೆಸ್ ಆಡಳಿತದಲ್ಲಾದರೆ ನೀವು ಸುಮ್ನೆ ಇರುತ್ತಿದ್ರಾ? ದೈವ- ದೇವರ ಹೆಸರಲ್ಲಿ ಜನರನ್ನು ಮೋಸಗೊಳಿಸುವುದು ನಿಮ್ಮ ಹಿಂದುತ್ವ. ಇಂಥಹ ನಾಟಕವಾಡದ ನಮ್ಮದು ಅಸಲೀ ಹಿಂದುತ್ವ. ಚುನಾವಣಾ ಸಂದರ್ಭ ತಾನು ಹಿಂದೂ ಹುಲಿ ಎಂದು ತೋರಿಸಲು ಸುನಿಲ್ ಕುಮಾರ್ ಪರಶುರಾಮನ ನಕಲಿ ಮೂರ್ತಿ ತಂದು ಇಟ್ಟಿದ್ದಾರೆ. ಮೂರ್ತಿ ಇಡುವಾಗ ಸುನಿಲ್ ಕುಮಾರ್ ಭಜನೆ ಮಾಡಿದ್ದು, ಶಂಖ ಊದಿದ್ದು ಸತ್ಯ ಎಂದಾದರೆ ಪರಶುರಾಮನ ಮೂರ್ತಿ ಸತ್ಯ ಯಾಕಾಗಿಲ್ಲ. ಹಿಂದೂಗಳ ಅಸ್ಮಿತೆಯನ್ನೇ ನಕಲಿ ಮಾಡಿದ ಬಿಜೆಪಿ, ಸಂಘ ಪರಿವಾರದ ನಕಲಿ ಹಿಂದುತ್ವದ ಮುಖ ಇದಾಗಿದೆ ಎಂದು ಟೀಕಿಸಿದರು‌‌. 

ಪರಶುರಾಮನ ನಕಲಿ ಪ್ರತಿಮೆ ನಿರ್ಮಿಸಿದ ಜಮೀನೂ ಅಕ್ರಮ. ಗೋಮಾಳ ಜಾಗದಲ್ಲಿ ಪ್ರತಿಮೆ ನಿರ್ಮಿಸಿದ್ದು ಸುನಿಲ್ ಕುಮಾರ್ ಅವರ ದೊಡ್ಡ ಹುನ್ನಾರ. ಜಿಲ್ಲಾಡಳಿತ, ಕಂದಾಯ ಇಲಾಖೆ ತಿರಸ್ಕರಿಸಿದ ಜಾಗದಲ್ಲಿ ನಿರ್ಮಿತಿ ಕೇಂದ್ರ ಮೂರ್ತಿ ನಿರ್ಮಿಸಿದ್ದು ಬಿಜೆಪಿಯ ಯಾವ ಸೀಮೆಯ ಆಡಳಿತ ಎಂದು ಪ್ರಶ್ನಿಸಿದರು. 

ಉಳ್ಳಾಲ‌ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್, ಉಡುಪಿ ಯುವ ಕಾಂಗ್ರೆಸ್ ಅಧ್ಯಕ್ಷರಾದ ದೀಪಕ್ ಕೋಟ್ಯಾನ್, ಕಾಂಗ್ರೆಸ್ ಜಿಲ್ಲಾ ಸದಸ್ಯರಾದ ಸುರೇಶ್ ಭಟ್ನಗರ, ಮಂಗಳೂರು ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಮಹಮ್ಮದ್ ಮುಸ್ತಫಾ ಮಲಾರ್, ಸುರೇಖಾ ಚಂದ್ರಹಾಸ್, ಪ್ರಮುಖರಾದ ಮನ್ಸೂರ್ ಮಂಚಿಲ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

If Parashurama Theme Park in Karkala was fake by Congress Karavali would have been burnt in  fire, mg hedge in Ullal.