Journalist Shekhar Ajekar; ಪತ್ರಕರ್ತ ಶೇಖರ ಅಜೆಕಾರು ಹೃದಯಾಘಾತಕ್ಕೀಡಾಗಿ ನಿಧನ 

31-10-23 01:13 pm       Udupi Correspondent   ಕರಾವಳಿ

ಹಿರಿಯ ಪತ್ರಕರ್ತ, ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಶೇಖರ ಅಜೆಕಾರು (54) ಅವರು ಅ.31ರಂದು ಹೃದಯಾಘಾತಕ್ಕೀಡಾಗಿ ನಿಧನ ಹೊಂದಿದ್ದಾರೆ.

ಕಾರ್ಕಳ, ಅ.31: ಹಿರಿಯ ಪತ್ರಕರ್ತ, ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಶೇಖರ ಅಜೆಕಾರು (54) ಅವರು ಅ.31ರಂದು ಹೃದಯಾಘಾತಕ್ಕೀಡಾಗಿ ನಿಧನ ಹೊಂದಿದ್ದಾರೆ. ಮಂಗಳವಾರ ಬೆಳಗ್ಗೆ ಕಾರ್ಕಳದ ಅಜೆಕಾರಿನ ತನ್ನ ಮನೆಯಲ್ಲಿ ಕುಸಿದು ಬಿದ್ದ ಶೇಖರ್‌ ಅವರನ್ನು ತಕ್ಷಣ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಷ್ಟರಲ್ಲೇ ಅವರು ಸಾವು ಕಂಡಿದ್ದರು. 

ಮುಂಬೈನಲ್ಲಿ ಕರ್ನಾಟಕ ಮಲ್ಲ ಪತ್ರಿಕೆಯಲ್ಲಿ ಪತ್ರಿಕಾ ವೃತ್ತಿ ಆರಂಭಿಸಿದ್ದ ಶೇಖರ ಅಜೆಕಾರು ಊರಿಗೆ ಬಂದ ಬಳಿಕ ಹಲವು ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕೆಲಸ ಮಾಡಿದ್ದರು. ಜನವಾಹಿನಿ ಪತ್ರಿಕೆ ಆರಂಭಗೊಂಡಾಗ ಹಲವು ಒಡನಾಡಿಗಳ ಜೊತೆಗೆ ಆ ಪತ್ರಿಕೆಯನ್ನು ಸೇರಿದ್ದರು.‌ ಬಳಿಕ ಕನ್ನಡ ಪ್ರಭ, ವಿಜಯ ಕರ್ನಾಟಕ ಪತ್ರಿಕೆಗಳಿಗೆ ಸುದ್ದಿ ಬರೆಯುತ್ತಿದ್ದರು.‌ ಇತ್ತೀಚಿನ ದಿನಗಳಲ್ಲಿ ಪತ್ರಿಕಾ ವೃತ್ತಿಯ ಜೊತೆಗೆ ಸಾಹಿತ್ಯ ಕಾರ್ಯಕ್ರಮಗಳಲ್ಲಿ ತೊಡಗಿಸಿದ್ದರು. ಬೆಳದಿಂಗಳ ಸಾಹಿತ್ಯ ಸಮ್ಮೇಳನ, ಕವಿಗೋಷ್ಟಿ  ರೀತಿಯ ವಿಭಿನ್ನ ಕಾರ್ಯಕ್ರಮಗಳನ್ನು ಸಂಘಟಿಸಿ ಗಮನ ಸೆಳೆದಿದ್ದರು. 

ಹಲವಾರು ಪ್ರತಿಭೆಗಳನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿದ್ದ ಶೇಖರ್‌ ಅಜೆಕಾರು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಪತ್ರಕರ್ತರಿಗೆ ಚಿರಪರಿಚಿತ ಹೆಸರು. ಅವರಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ರಾಷ್ಟ್ರೀಯ ಬಸವಶ್ರೀ ಅವಾರ್ಡ್ 2018, ಕೃಷಿ ಬಂಧು 2019, ರಾಷ್ಟ್ರೀಯ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪ್ರಶಸ್ತಿ 2019, ವಿಶ್ವ ದರ್ಶನ ಸಾಹಿತ್ಯ ಪ್ರಶಸ್ತಿ 2019, ಶಿಖಾ ಭಾರತ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Renowned writer, journalist Shekhar Ajekar passes away. Renowned writer, journalist Shekar Ajekar passed away on Tuesday October 31 due to cardiac arrest. Shekar Ajekar was actively involved in various social service oriented organisations and also a known name in the literature fraternity.