Puneeth Rajkumar, Heart Attack, Dinesh Gundurao, Mangalore: ಪುನೀತ್ ಹೆಸರಲ್ಲಿ ಹೃದಯ ಜ್ಯೋತಿ ಯೋಜನೆ ; ಹಠಾತ್ ಹೃದಯಾಘಾತ ತಪ್ಪಿಸಲು ಉಚಿತ ಇಂಜೆಕ್ಷನ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ 

01-11-23 05:42 pm       Mangalore Correspondent   ಕರಾವಳಿ

ಹೃದಯಾಘಾತದಿಂದ ನಿಧನರಾದ ಚಿತ್ರನಟ ಪುನೀತ್ ರಾಜ್ ಕುಮಾರ್ ಸ್ಮರಣೆಗಾಗಿ ಅವರ ಹೆಸರಲ್ಲಿ ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ ಯೋಜನೆಯನ್ನು ಮುಂದಿನ ತಿಂಗಳಿನಿಂದ ರಾಜ್ಯಾದ್ಯಂತ ಜಾರಿ ಮಾಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಮಂಗಳೂರು, ನ.1: ಹೃದಯಾಘಾತದಿಂದ ನಿಧನರಾದ ಚಿತ್ರನಟ ಪುನೀತ್ ರಾಜ್ ಕುಮಾರ್ ಸ್ಮರಣೆಗಾಗಿ ಅವರ ಹೆಸರಲ್ಲಿ ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ ಯೋಜನೆಯನ್ನು ಮುಂದಿನ ತಿಂಗಳಿನಿಂದ ರಾಜ್ಯಾದ್ಯಂತ ಜಾರಿ ಮಾಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ ನೆಹರು ಮೈದಾನದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು. ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ ಮೂಲಕ ರಾಜ್ಯದಲ್ಲಿ 85 ಜಿಲ್ಲೆ ಮತ್ತು ತಾಲೂಕುಗಳಲ್ಲಿ ಇಸಿಜಿ ಜೊತೆಗೆ ಹಠಾತ್ ಹೃದಯಾಘಾತ ಆಗುವುದನ್ನು ತಡೆಯಲು ಉಚಿತವಾಗಿ ಇಂಜೆಕ್ಷನ್ ನೀಡಲಾಗುವುದು ಎಂದರು. ಅಲ್ಲದೆ ಜಯದೇವ ಸೇರಿದಂತೆ ರಾಜ್ಯದ 16 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುವುದು ಎಂದರು. 

ರಾಜ್ಯದಲ್ಲಿ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸುವುದರ ಜೊತೆಗೆ ತುಳು, ಕೊಂಕಣಿ ಮತ್ತು ಬ್ಯಾರಿ ಭಾಷೆಗಳ ಸಾಹಿತ್ಯ ಹಾಗೂ ಸಂಸ್ಕೃತಿಗಳಿಗೂ ಸರ್ಕಾರ ಉತ್ತೇಜನ ನೀಡಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. 

ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿ ದ.ಕ. ಜಿಲ್ಲೆಯಲ್ಲಿ 3.44 ಲಕ್ಷ ಫಲಾನುಭವಿಗಳು ನೋಂದಣಿಯಾಗಿದ್ದಾರೆ. ಅವರಿಗೆ ತಿಂಗಳಿಗೆ ಎರಡು ಸಾವಿರದಂತೆ ನೀಡಲಾಗುತ್ತಿದೆ. ಬಡವರ ಹಸಿವು ನೀಗಿಸುವ ದೃಷ್ಟಿಯಿಂದ ಅನ್ನಭಾಗ್ಯ ಯೋಜ‌ನೆಯಡಿ ಜಿಲ್ಲೆಯಲ್ಲಿ 2.48 ಲಕ್ಷ ಫಲಾನುಭವಿಗಳಿದ್ದು ನಗದು ವರ್ಗಾವಣೆಯಡಿ ಇವರಿಗೆ 17.30 ಕೋಟಿ ರೂ. ಜಮೆಯಾಗಿದೆ. ಶಕ್ತಿ ಯೋಜನೆಯಡಿ ನಾಲ್ಕು ತಿಂಗಳಲ್ಲಿ ದ.ಕ. ಜಿಲ್ಲೆಯಲ್ಲಿ 183 ಲಕ್ಷ ಫಲಾನುಭವಿಗಳು ಸರ್ಕಾರಿ ಬಸ್ಸಿನಲ್ಲಿ ಪ್ರಯಾಣಿಸಿದ್ದು ಇದರಿಂದ 6072 ಲಕ್ಷ ಆದಾಯ ಬಂದಿದೆ. ಹೀಗಾಗಿ ರಾಜ್ಯದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದ ಸರ್ಕಾರ ಎಂದು ತೋರಿಸಿಕೊಟ್ಟಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು. 

ಇದೇ ವೇಳೆ, ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ಒಟ್ಟು 47 ಮಂದಿಗೆ ಹಾಗೂ 17 ಸಂಸ್ಥೆಗಳಿಗೆ ಪ್ರದಾನ ಮಾಡಲಾಯಿತು.

Free injection in the name of Puneeth Rajkumar to save people from Heart Attack says Dinesh Gundurao in Mangalore.