Vijayendra, Nalin Kateel Mangalore: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಮತ್ತೆ ನಳಿನ್ ಅಭ್ಯರ್ಥಿಯಂತೆ ; ಕಾರ್ಯಕರ್ತರ ಸಭೆಯಲ್ಲಿ ವಿಜಯೇಂದ್ರ ಹೇಳಿಕೆ ಸಂಚಲನ 

22-11-23 04:32 pm       Mangaluru Correspondent   ಕರಾವಳಿ

ಮಂಗಳೂರಿನ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮತ್ತೆ ನಳಿನ್ ಕಟೀಲ್ ಅವರನ್ನೇ ಗೆಲ್ಲಿಸಿ ಕೊಡಿ ಎಂದು ಹೇಳಿರುವುದು ಸಂಚಲನ ಎಬ್ಬಿಸಿದೆ. 

ಮಂಗಳೂರು, ನ.21: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಮತ್ತೆ ನಳಿನ್ ಕುಮಾರ್ ಕಟೀಲ್ ಅವರೇ ಅಭ್ಯರ್ಥಿಯಾಗುತ್ತಾರೆಯೇ ? ಮುಂದಿನ ಬಾರಿಯೂ ಅವರೇ ಸ್ಪರ್ಧೆ ಮಾಡುತ್ತಾರೆಯೇ ಎಂಬ ಮಿಲಿಯನ್ ಡಾಲರ್ ಪ್ರಶ್ನೆ ಕಾರ್ಯಕರ್ತರ ವಲಯದಲ್ಲಿದೆ. ಆದರೆ, ಮಂಗಳೂರಿನ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮತ್ತೆ ನಳಿನ್ ಕಟೀಲ್ ಅವರನ್ನೇ ಗೆಲ್ಲಿಸಿ ಕೊಡಿ ಎಂದು ಹೇಳಿರುವುದು ಸಂಚಲನ ಎಬ್ಬಿಸಿದೆ. 

ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ ಲೋಕಸಭಾ ಚುನಾವಣೆಯನ್ನ ನಾವು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ. ಮತ್ತೊಮ್ಮೆ ನಮ್ಮ‌ ಪಕ್ಷದ ಅಭ್ಯರ್ಥಿಯಾದ ನಳಿನ್ ಕುಮಾರ್ ಕಟೀಲ್ ಅವರನ್ನು ಗೆಲ್ಲಿಸಬೇಕಿದೆ. ಆಮೂಲಕ ಪ್ರಧಾನಿ ಮೋದಿಯ ಕೈ ಬಲಪಡಿಸಬೇಕಿದೆ ಎಂದು ಹೇಳಿದ್ದಾರೆ. 

ಈಗಾಗಲೇ ದ.ಕ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆ ಗೊಂದಲಕ್ಕೀಡಾಗಿದ್ದು ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಳಿನ್ ಕುಮಾರ್ ವಿರುದ್ಧವೇ ಅರುಣ್ ಪುತ್ತಿಲ ‌ಬಂಡಾಯ ಸಾರಿದ್ದರು. ಅಲ್ಲದೆ, ನಳಿನ್ ಕುಮಾರ್ ಮತ್ತೆ ಸ್ಪರ್ಧೆಗೆ ಕಾರ್ಯಕರ್ತರ ವಲಯದಲ್ಲಿ ಭಾರೀ ವಿರೋಧ ವ್ಯಕ್ತ ಆಗಿರುವ ನಡುವಲ್ಲೇ ನೂತನ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಈ ರೀತಿಯ ಹೇಳಿಕೆ ನೀಡಿರುವುದು ಕುತೂಹಲ ಮೂಡಿಸಿದೆ. 

ಪ್ರಧಾನಿ ಮೋದಿಯವರು ಕ್ರೀಡಾ ಮನೋಭಾವದಿಂದ ಮೊನ್ನೆ ಭಾರತದ ಪರ ಸ್ಟೇಡಿಯಂಗೆ ಬಂದಿದ್ದರು. ಆದರೆ ಪುಣ್ಯಾತ್ಮ‌ ರಾಹುಲ್ ಗಾಂಧಿ ಅದು ಅಪಶಕುನ ಅಂದಿದ್ದಾರೆ. ಆದರೆ ನಾವು ರಾಹು ಕಾಲದಲ್ಲಿ ಯಾವುದೇ ಶುಭ ಕಾರ್ಯ ಮಾಡಲ್ಲ. ಆದರೆ ಕಾಂಗ್ರೆಸ್ ಪಕ್ಷದ ನಾಯಕನ ಹೆಸರೇ ರಾಹುಲ್ ಗಾಂಧಿ. ರಾಹುಕಾಲ ಮತ್ತು ರಾಹುಲ್ ಗಾಂಧಿಗೆ ಯಾವುದೇ ವ್ಯತ್ಯಾಸ ಇಲ್ಲ ಎಂದ್ಕೊಳ್ತೀನಿ. ರಾಹುಲ್ ಗಾಂಧಿ ಪಕ್ಷದ ಅಧಿಕಾರ ಪಡೆದ ಬಳಿಕ ಅವರಿಗೆ ಮತ್ತು ಪಕ್ಷಕ್ಕೆ ರಾಹುಕಾಲ ಶುರುವಾಗಿದೆ ಎಂದು ಟೀಕಿಸಿದರು. 

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮೋದಿ ಪ್ರಧಾನಿಯಾಗೋದನ್ನ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 28ಕ್ಕೆ 28 ಸಂಸದರನ್ನ ನಾವು ಗೆಲ್ಲಿಸಿ ಕಳುಹಿಸ್ತೇವೆ. ಇಡೀ ವಿಶ್ವ ನರೇಂದ್ರ ಮೋದಿ ಮಾರ್ಗದರ್ಶನದಲ್ಲಿ ಸಾಗ್ತಿದೆ ಎಂದ ವಿಜಯೇಂದ್ರ, ದೇಶದ ರಾಜಕೀಯ ಇತಿಹಾಸದಲ್ಲಿ ಆರೇ ತಿಂಗಳಲ್ಲಿ ಜನಪ್ರಿಯತೆ ಕಳೆದುಕೊಂಡ ಸರ್ಕಾರ ಇದ್ರೆ ಅದು ರಾಜ್ಯದ ಕಾಂಗ್ರೆಸ್ ಸರ್ಕಾರ. ಸಿದ್ದರಾಮಯ್ಯ, ಡಿಕೆಶಿ ಕುಂತಲ್ಲಿ ನಿಂತಲ್ಲಿ ಮೋದಿ ಅವರನ್ನು ಟೀಕಿಸ್ತಾರೆ. ಇವರ ಯೋಗ್ಯತೆಗೆ ಬರ ನಿಯಂತ್ರಣ ಮಾಡಲು ಆಗಿಲ್ಲ. ರಾಜ್ಯದ ಬರಗಾಲದ ಹೊತ್ತಲ್ಲಿ ಸಚಿವರಿಗೆ ಐಶಾರಾಮಿ ಕಾರು ಕೊಟ್ಟಿದ್ದಾರೆ. ಅದರ ಜೊತೆಗೆ ಸಿಎಂ ನಿವಾಸವನ್ನು ಕೋಟ್ಯಾಂತರ ಖರ್ಚಿನಲ್ಲಿ ನವೀಕರಣ ಮಾಡಿದ್ದಾರೆ. 

ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ನುಗ್ಗಿ ಅಲ್ಪಸಂಖ್ಯಾತರು ಬೆಂಕಿ ಹಚ್ಚಿದ್ದರು. ಆದರೆ ಓಲೈಕೆ ರಾಜಕಾರಣಿ ಡಿಕೆಶಿ ಆ ಬಗ್ಗೆ ಮಾತನಾಡಲೇ ಇಲ್ಲ. ಬಿಜೆಪಿ ಅಲ್ಪಸಂಖ್ಯಾತರ ವಿರೋಧಿ ಅಲ್ಲ, ಆದರೆ ನಮ್ಮಲ್ಲಿ ದೇಶದ್ರೋಹ ಕೆಲಸ ಮಾಡೋರನ್ನ ಕ್ಷಮಿಸಲ್ಲ. ಜಮೀರ್ ಅಹ್ಮದ್ ಖಾನ್ ಎಂಥಾ ದುರಹಂಕಾರದ‌ ಮಾತಾಡಿದ್ದಾರೆ ಅನ್ನೋದು ಎಲ್ರಿಗೂ ಗೊತ್ತು.‌ ಸಭಾಧ್ಯಕ್ಷರ ಸ್ಥಾನಕ್ಕೂ ಅಗೌರವ ಮಾಡೋ ಕೆಲಸ ಮಾಡಿದ್ದಾರೆ. ಆದರೆ ಸಿಎಂ ಆಗಲೀ, ಡಿಕೆಶಿ ಆಗಲೀ ಇದನ್ನ ವಿರೋಧ ಮಾಡಿಲ್ಲ. ಆದರೆ ನಾವು ಇದನ್ನು ಇಷ್ಟಕ್ಕೆ ಬಿಡಲ್ಲ. ಜಮೀರ್ ಅಹ್ಮದ್ ವಿಧಾನಸಭೆಗೆ ಕಾಲಿಡಲು ನಾವು ಬಿಡಲ್ಲ. ಈ ಭರವಸೆಯನ್ನ ನಾನು ನಿಮಗೆ ಇಲ್ಲಿ ಕೊಡ್ತೇನೆ ಎಂದು ಹೇಳಿದರು. 

ರಾಷ್ಟ್ರೀಯ ಮತ್ತು ರಾಜ್ಯದ ಅಧ್ಯಕ್ಷರಿಗೆ ಕೊಡೋ ಗೌರವ ಬೂತ್ ಅಧ್ಯಕ್ಷರಿಗೂ ಕೊಡಬೇಕು. ನನ್ನ ಜಿಲ್ಲಾ ಪ್ರವಾಸದ ವೇಳೆ ಬೂತ್ ಅಧ್ಯಕ್ಷರ ಮನೆಗೆ ಭೇಟಿ ಕೊಡ್ತೇನೆ. ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕಾರ್ಯಕರ್ತರು ರಸ್ತೆಗಿಳಿದು ಹೋರಾಟ ಮಾಡಬೇಕಿದೆ ಎಂದು  ವಿಜಯೇಂದ್ರ ಹೇಳಿದರು

Lok sabha election 2024 Mangalore MP contestant is Nalin Kateel says Vijayendra at Bjp program in Mangalore.