Mangalore Ullal Kondan temple issue: ಖಾಸಗಿ ಅಧೀನದಲ್ಲಿ ಕೊಂಡಾಣ ಕ್ಷೇತ್ರದ ಭಂಡಾರಮನೆ ; ಮಾತು‌ ತಪ್ಪಿದ ಜಾಗದ ಮಾಲೀಕರು, ಪರ್ಯಾಯ ಜಾಗದಲ್ಲಿ ಭಂಡಾರಮನೆಗೆ ಯೋಜನೆ  

27-11-23 09:08 pm       Mangalore Correspondent   ಕರಾವಳಿ

ಕೋಟೆಕಾರು ಗ್ರಾಮದ ಕಾರಣಿಕ ಕ್ಷೇತ್ರ ಕೊಂಡಾಣದಲ್ಲಿ ಭಂಡಾರಮನೆ ಇನ್ನೂ ಕ್ಷೇತ್ರದ ಆಸ್ತಿಯಾಗಿರದೆ ಖಾಸಗಿ ಮನೆತನದ ಹೆಸರಿನಲ್ಲಿದೆ.

ಉಳ್ಳಾಲ, ನ.27: ಕೋಟೆಕಾರು ಗ್ರಾಮದ ಕಾರಣಿಕ ಕ್ಷೇತ್ರ ಕೊಂಡಾಣದಲ್ಲಿ ಭಂಡಾರಮನೆ ಇನ್ನೂ ಕ್ಷೇತ್ರದ ಆಸ್ತಿಯಾಗಿರದೆ ಖಾಸಗಿ ಮನೆತನದ ಹೆಸರಿನಲ್ಲಿದೆ. ಅದನ್ನು ಕ್ಷೇತ್ರದ ಹೆಸರಿಗೆ ಪರಭಾರೆ ಮಾಡಿಸುವುದಾಗಿ ಜಾಗದ ಮಾಲೀಕರು ಮಾತು ಕೊಟ್ಟಿದ್ದರೂ ತಮ್ಮ ಮಾತನ್ನು ಉಳಿಸಿಕೊಂಡಿಲ್ಲ‌. ಭಂಡಾರಮನೆ ಎಂಬುದು ಕ್ಷೇತ್ರದ ಹೆಸರಿನಲ್ಲಿಯೇ ನೋಂದಣಿ ಆಗಿರಬೇಕು ಎಂದು ವ್ಯವಸ್ಥಾಪನಾ ಸಮಿತಿ ನಿರ್ಧಾರ ಕೈಗೊಂಡಿದ್ದು ಆ ನಿಟ್ಟಿನಲ್ಲಿ ಪರ್ಯಾಯ ಮಾರ್ಗ ಕಂಡುಕೊಂಡಿದೆ ಎಂದು ಕೊಂಡಾಣ ಪಿಲಿಚಾಮುಂಡಿ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣ ಶೆಟ್ಟಿ ತಾಮಾರು ಹೇಳಿದ್ದಾರೆ. 

ತೊಕ್ಕೊಟ್ಟಿನ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪೂರ್ವದ ಧರ್ಮಸ್ಥಳ, ಉತ್ತರದ ಕೊಲ್ಲೂರು, ದಕ್ಷಿಣದ ಕಾನತ್ತೂರು ಇರುವಂತೆಯೇ ಪಶ್ಚಿಮದ ಕಾರಣಿಕ ಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿರುವ ಕೊಂಡಾಣ ಶ್ರೀ ಪಿಲಿಚಾಮುಂಡಿ, ಬಂಟ ಮತ್ತು ಮುಂಡತ್ತಾಯ ದೈವಸ್ಥಾನದ ಒಳಿತಿಗಾಗಿ ಒಂದೂವರೆ ವರ್ಷದ ಹಿಂದೆ ಪ್ರಶ್ನಾಚಿಂತನೆ ಇಡಲಾಗಿತ್ತು. ಅದರಲ್ಲಿ ಕಂಡುಬಂದ ದೋಷಗಳಿಗೆ ಶ್ರೀ ಕ್ಷೇತ್ರದ ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಯವರ ಮಾರ್ಗದರ್ಶನದಲ್ಲಿ ಪರಿಹಾರ ಕಾರ್ಯ ಮಾಡಲಾಗಿದೆ. ತಂತ್ರಿಗಳ ಸಲಹೆಯಂತೆ ಆರು ತಿಂಗಳ‌ ಹಿಂದೆ 22 ಪ್ರಮುಖ ಕಾಮಗಾರಿಗಳು ಸೇರಿದಂತೆ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ನಡೆದಿದೆ. 

ಸುಮಾರು‌ ಹನ್ನೆರಡು ಕೋಟಿ ರೂ. ಮೌಲ್ಯದ ಜಾಗ ಕ್ಷೇತ್ರದ ಹೆಸರಿಗೆ ನೋಂದಣಿ‌ ಆಗಿದೆ. ಆದರೆ ಭಂಡಾರಮನೆ ಕ್ಷೇತ್ರದ ಹೆಸರಿನಲ್ಲಿ  ಇಲ್ಲದಿರುವುದು ಕೊರತೆಯಾಗಿದೆ. ಪ್ರತಿ ಮಂಗಳವಾರ ಹೂಹಾಕುವುದು, ಸಂಕ್ರಮಣ, ವಾರ್ಷಿಕ ಜಾತ್ರೆಗಳು ನಡೆಯುತ್ತದೆ. ದೈವ ಅದೆಲ್ಲವನ್ನು ಸ್ವೀಕರಿಸಿದರೂ ಭಂಡಾರಮನೆಯು ಕ್ಷೇತ್ರದ ಹೆಸರಿನಲ್ಲಿ ಇಲ್ಲದಿರುವುದರಿಂದ ಪರ್ಯಾಯವಾಗಿ ನೂತನ ಭಂಡಾರಮನೆ ನಿರ್ಮಾಣ ಕಾರ್ಯಕ್ಕೆ ವ್ಯವಸ್ಥಾಪನಾ ಸಮಿತಿ ಮುಂದಾಗಿದ್ದು ಅದಕ್ಕೆ ಈಗಾಗಲೇ ಕ್ಷೇತ್ರದ ಭಕ್ತರೂ ಆಗಿರುವ ದಾನಿಗಳು ಸ್ಥಳ ಖರೀದಿ ಮಾಡಿ ಕೊಟ್ಟಿದ್ದಾರೆ. ಅಷ್ಟಮಂಗಳ ಪ್ರಶ್ನೆ ಚಿಂತನೆಯಲ್ಲೂ ಜ್ಯೋತಿಷಿಗಳು ಆ ಸ್ಥಳ ನೂತನ ಭಂಡಾರಮನೆಗೆ ಸರಿ ಹೊಂದುತ್ತದೆ ಎಂದು ತಿಳಿಸಿದ್ದು ಮುಂದಿನ ನಡೆಗಳು ಮತ್ತು ಸಾಧಕ‌ ಬಾಧಕಗಳ ಬಗ್ಗೆ ಅರಿಯುವ ಸಲುವಾಗಿ ನ.29ರ  ಬುಧವಾರ ಶ್ರೀಕ್ಷೇತ್ರದಲ್ಲಿ ಒಂದು ದಿನದ ತಾಂಬೂಲ ಪ್ರಶ್ನೆ ಇಡಲಾಗಿದೆ ಎಂದು ಹೇಳಿದರು.

ದೇವಸ್ಯ ಮನೆತನದ ಗಡಿಕಾರ ರಾಘವೇಂದ್ರ ಭಟ್, ವ್ಯವಸ್ಥಾಪನಾ ಸಮಿತಿ ಸದಸ್ಯ ಐತಪ್ಪ ಪೂಜಾರಿ ಹಾಗೂ ದಿನಮಣಿ ರಾವ್ ಹಿರಿಯರಾದ  ಅಜಯ್ ನಾಯ್ಕ್ ಹಾಗೂ ಜಯಂತ್ ಸಂಕೊಳಿಗೆ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

Mangalore Ullal Kondan temple issue raise again in matter of land.