Mangalore election, BJP Congress: ಬಿಸಿಲ ಝಳ ಏರುತ್ತಿದ್ದರೂ ರಾಜಕೀಯ ಕಣ ಇನ್ನೂ ಕೂಲ್ ಕೂಲ್..! ಎದ್ದಿಲ್ಲ ಮೋದಿ ಕಲರವ, ಕೇಳುತ್ತಿಲ್ಲ ಕೇಸರಿ ಕಲಿಗಳ ಝೇಂಕಾರ, ಕಾಂಗ್ರೆಸಿನಲ್ಲಿ ಒಗ್ಗಟ್ಟು, ಬಿಜೆಪಿಯಲ್ಲಿ ಬಣ ಬಿಕ್ಕಟ್ಟು! 

02-04-24 09:02 pm       Mangaluru Correspondent   ಕರಾವಳಿ

ಲೋಕಸಭೆ ಚುನಾವಣೆ ಘೋಷಣೆಯಾಗಿ ತಿಂಗಳು ಹತ್ತಿರವಾಗುತ್ತ ಬಂದರೂ ಕರಾವಳಿಯಲ್ಲಿ ಬಿಸಿಲಿನ ಝಳ ಏರುತ್ತಿದೆ ಬಿಟ್ಟರೆ ಚುನಾವಣೆಯ ಕಾವು ಏರುತ್ತಿಲ್ಲ.

ಮಂಗಳೂರು, ಎ.2: ಲೋಕಸಭೆ ಚುನಾವಣೆ ಘೋಷಣೆಯಾಗಿ ತಿಂಗಳು ಹತ್ತಿರವಾಗುತ್ತ ಬಂದರೂ ಕರಾವಳಿಯಲ್ಲಿ ಬಿಸಿಲಿನ ಝಳ ಏರುತ್ತಿದೆ ಬಿಟ್ಟರೆ ಚುನಾವಣೆಯ ಕಾವು ಏರುತ್ತಿಲ್ಲ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ- ಕಾಂಗ್ರೆಸ್ ನಡುವೆ ಇಲ್ಲಿ ನೇರ ಸ್ಪರ್ಧೆ ಇದ್ದರೂ, ದೊಡ್ಡ ಮಟ್ಟಿನ ಚುನಾವಣೆಯ ರಂಗು ಈ ಬಾರಿ ಕಾಣಿಸಿಕೊಂಡಿಲ್ಲ. ಪ್ರಚಾರದ ಭರಾಟೆಯೂ ಕಂಡುಬರುತ್ತಿಲ್ಲ. ಎರಡೂ ಪಕ್ಷಗಳಿಂದ ರಾಷ್ಟ್ರೀಯ ನಾಯಕರಾಗಲೀ, ರಾಜ್ಯ ಮಟ್ಟದ ನಾಯಕರಾಗಲೀ ಜಿಲ್ಲೆಗೆ ಕಾಲಿಟ್ಟಿಲ್ಲ.

दक्षिण कर्नाटक से बीजेपी की पसंद सेना से रिटायर कैप्‍टन ब्रजेश चौटा, जानें  उनके बारे में - Lok Sabha Election 2024: Who is Captain Brijesh Chowta got  BJP ticket from South Karnataka -

ಬಿಜೆಪಿಯಿಂದ ಅಭ್ಯರ್ಥಿಯಾಗಿ ಕ್ಯಾ.ಬೃಜೇಶ್ ಚೌಟ ಅವರ ಹೆಸರನ್ನು ಚುನಾವಣೆ ಘೋಷಣೆಗೆ ಎರಡು ದಿನ ಮೊದಲೇ ಘೋಷಿಸಲಾಗಿತ್ತು. ಮಾ.16ರಂದು ಚುನಾವಣೆಗೆ ದಿನಾಂಕ ಪ್ರಕಟಿಸಿದ್ದು, ಕರಾವಳಿ ಜಿಲ್ಲೆಗಳು ಸೇರಿ ದಕ್ಷಿಣ ಕರ್ನಾಟಕದ ಲೋಕಸಭಾ ಕ್ಷೇತ್ರಗಳಿಗೆ ಎ.26ರಂದು ಚುನಾವಣೆಗೆ ಮುಹೂರ್ತ ನಿಗದಿ ಮಾಡಲಾಗಿದೆ. ನಿಜಕ್ಕಾದರೆ, ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷಗಳಲ್ಲಿ ಎರಡು ಸುತ್ತಿನ ಪ್ರಚಾರ ಮುಗಿಯಬೇಕಿತ್ತು. ರಾಜ್ಯ, ರಾಷ್ಟ್ರ ಮಟ್ಟದ ನಾಯಕರು ಒಂದು ಬಾರಿಯಾದರೂ ಬಂದು ಹೋಗಬೇಕಿತ್ತು. ಬಿಜೆಪಿ ಅಭ್ಯರ್ಥಿ ಅಂತಿಮಗೊಂಡ ವಾರದ ಬಳಿಕ ಕಾಂಗ್ರೆಸಿನಿಂದ ಅಭ್ಯರ್ಥಿ ಹೆಸರು ಪ್ರಕಟವಾಗಿತ್ತು. 

ಕಾಂಗ್ರೆಸಿನಲ್ಲಿ ಒಗ್ಗಟ್ಟು, ಬಿಜೆಪಿಯಲ್ಲೇ ಬಿಕ್ಕಟ್ಟು 

ಬಿಜೆಪಿಯಿಂದ ಪ್ರತಿ ವಿಧಾನಸಭೆ ಕ್ಷೇತ್ರದ ಮಂಡಲ ವ್ಯಾಪ್ತಿಯಲ್ಲಿ ಪ್ರಮುಖ ಕಾರ್ಯಕರ್ತರ ಸಭೆ ಆಗಿದೆ. ಈಗ ಬೂತ್ ಮಟ್ಟದ ಕಾರ್ಯಕರ್ತರ ಸಭೆಗಳಾಗುತ್ತಿವೆ. ಆದರೆ, ಇನ್ನೂ ಜನರ ಸಂಪರ್ಕದಲ್ಲಿ ಬಿಜೆಪಿಯವರು ತೊಡಗಿಲ್ಲ. ಕಾಂಗ್ರೆಸ್ ಪ್ರಚಾರದಲ್ಲಿ ಇನ್ನೂ ಹಿಂದೆ ಇದ್ದು, 3-4 ಕಡೆ ಪ್ರಚಾರ ಸಭೆಗಳಷ್ಟೇ ಆಗಿವೆ. ಅಭ್ಯರ್ಥಿಗಳು ಪ್ರಚಾರ ಸಭೆ, ದೇವಸ್ಥಾನ, ಮಸೀದಿ, ಚರ್ಚ್ ಭೇಟಿಯಲ್ಲೇ ಬಿಝಿಯಾಗಿದ್ದಾರೆ. ಪ್ರಚಾರದಲ್ಲಿ ಹಿಂದಿನಿಂದಲೂ ಬಿಜೆಪಿಗರೇ ಮುಂದಿರುತ್ತಿದ್ದರು. ಈ ಬಾರಿ ಮಾತ್ರ ಬಿಜೆಪಿಯಲ್ಲೂ ಸಂಭ್ರಮದ ವಾತಾವರಣ ಇದ್ದಂತಿಲ್ಲ. ಜಿಲ್ಲೆಯ ಒಳಗಿನ ನಾಯಕರು ತಮ್ಮಲ್ಲೇ ಗುಂಪು ಕಟ್ಟಿಕೊಂಡಿದ್ದಾರೆ. ಹೇಗಿದ್ದರೂ ಗೆಲ್ಲುತ್ತೆ ಎನ್ನುವ ಅಸಡ್ಡೆಯ ನಿಲುವಿನಲ್ಲಿ ಇದ್ದಂತೆ ಕೆಲವರಿದ್ದಾರೆ. ಹಾಲಿ ಸಂಸದರಿಗೆ ಟಿಕೆಟ್ ಸಿಗದೇ ಇದ್ದುದರಿಂದ ಅವರ ಜೊತೆಗಿದ್ದ ಬೆಂಬಲಿಗರು ಸೈಲಂಟ್ ಆಗಿದ್ದಾರೆ.

Ramanath Rai announces retirement from electoral politics, says Cong will  work hard to regain lost seats in DK | coastaldigest.com - The Trusted News  Portal of India

Karnataka Speaker U T Khader's 'early bird' offer to lawmakers

ಕಾಂಗ್ರೆಸಿನಲ್ಲಿ ಪ್ರಚಾರಕ್ಕಿಳಿದಿದ್ದು ವಿಳಂಬವೇ ಆಗಿದ್ದರೂ ಈ ಸಲ ಸ್ವಲ್ಪ ಒಗ್ಗಟ್ಟಿನ ಜಪ ಕಾಣಿಸಿಕೊಂಡಿದೆ. ರಮಾನಾಥ ರೈ ಬಣ, ಮೊಯ್ಲಿ ಬಣ, ಐವಾನ್ ಬಣ, ಲೋಬೊ ಬಣ, ಹರೀಶ್ ಕುಮಾರ್ ಬಣ, ಮಿಥುನ್ ರೈ ಬಣ, ಖಾದರ್ ಬಣ, ಪುತ್ತೂರಿನಲ್ಲಿ ಹೇಮನಾಥ ಶೆಟ್ಟಿ ಬಣ ಹೀಗೆ ಜಿಲ್ಲಾ ಕಾಂಗ್ರೆಸಿನಲ್ಲಿ ಹತ್ತು ಗುಂಪುಗಳಿದ್ದರೂ ಚುನಾವಣೆ ವಿಚಾರದಲ್ಲಿ ಒಗ್ಗಟ್ಟು ತೋರಿದ್ದಾರೆ. 2019ರಲ್ಲಿ ಮಿಥುನ್ ರೈ ಅಭ್ಯರ್ಥಿಯಾಗಿದ್ದ ವೇಳೆ ಇದ್ದ ಅಸಮಾಧಾನ ಈ ಬಾರಿ ಅಷ್ಟಾಗಿ ಕಾಣಿಸುತ್ತಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ವರ್ಚಸ್ಸು, ಹೊಸ ಮುಖದ ಹುಮ್ಮಸ್ಸು ಪಕ್ಷದೊಳಗೆ ಕಾಣಿಸುತ್ತಿದೆ. ಆದರೆ, ಇಷ್ಟಕ್ಕೇ ಮತ ಗಳಿಕೆ ಸಾಧ್ಯವಿಲ್ಲ. ತಳಮಟ್ಟದಲ್ಲಿ ಇಳಿದು ಕೆಲಸ ಮಾಡುವುದರಲ್ಲಿ ಕಾಂಗ್ರೆಸ್, ಬಿಜೆಪಿಗಿಂತ ಹಿಂದೆ ಇದೆ.

ಬಿಜೆಪಿಗೆ ಪ್ರಚಾರ ಸಮಿತಿಯೇ ಇಲ್ವಂತೆ !

ಬಿಜೆಪಿಯಲ್ಲಿ ಚುನಾವಣಾ ನಿರ್ವಹಣಾ ಸಮಿತಿಯನ್ನು ಟಿಕೆಟ್ ಘೋಷಣೆಗೂ ಮೊದಲೇ ಮಾಡಲಾಗಿತ್ತು. ನಿರ್ವಹಣಾ ಸಮಿತಿ ಒಂದ್ಕಡೆಯಾದರೆ, ಬಿಜೆಪಿ ಜಿಲ್ಲಾ ಕಮಿಟಿ ಇನ್ನೊಂದೆಡೆ ಇದೆ. ಈ ಸಮಿತಿಯ ಸದಸ್ಯರಲ್ಲೇ ಸಮನ್ವಯ ಇದ್ದಂತೆ ಇಲ್ಲ. ಪ್ರಚಾರ ಸಮಿತಿಯೆಂದು ಪ್ರತ್ಯೇಕ ಕಮಿಟಿಯನ್ನೇ ಮಾಡಿಲ್ಲ. ಪುತ್ತೂರು, ಸುಳ್ಯದಲ್ಲಿ ಪ್ರಖರ ಭಾಷಣಗಳಿಂದ, ಕಳೆದ ಅಸೆಂಬ್ಲಿ ಚುನಾವಣೆ ಬಳಿಕ ಇಡೀ ಜಿಲ್ಲೆಯಲ್ಲಿ ಹೊಸ ಅಲೆ ಎಬ್ಬಿಸಿದ್ದ ಅರುಣ್ ಪುತ್ತಿಲ ಬಿಜೆಪಿ ಸೇರಿದ್ದರೂ, ಅವರನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿಲ್ಲ. ಪ್ರಚಾರ ಸಭೆಗಳಲ್ಲಿ ಅದೇ ಹಳೆ ಮುಖ, ಹಳಸಲು ಭಾಷಣಗಳನ್ನು ಕೇಳಿ ಕಾರ್ಯಕರ್ತರೇ ಬೇಸತ್ತ ರೀತಿ ಇದ್ದಾರೆ. ಯಾವತ್ತೂ ಪ್ರಚಾರಕ್ಕೆ ಖದರು ಬರುವುದು ಹೊಸತನ ಇದ್ದರಷ್ಟೇ. ಪ್ರಚೋದಕ ಅಲ್ಲದಿದ್ದರೂ ಕಾರ್ಯಕರ್ತರನ್ನು ಆಕರ್ಷಿಸುವ ರೀತಿಯ ಭಾಷಣ ಒಂದು ಕಲೆ. ಜನರನ್ನು ಸೆಳೆಯಬಲ್ಲ ಭಾಷಣಕಾರರಿಗೆ ಸಂಘ ಪರಿವಾರದಲ್ಲಿ ಕೊರತೆ ಇಲ್ಲ. ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಪಕ್ಷದಲ್ಲಿ ಉಸ್ತುವಾರಿ ಹೊತ್ತವರನ್ನು ಹೊಂದಿಕೊಂಡು ಇದೆಲ್ಲ ನಿರ್ಧಾರಗಳಾಗುತ್ತವೆ.  

Dinesh Gundu Rao appointed Karnataka Congress president | Mint

ಬಿಜೆಪಿಗೆ ಹೋಲಿಸಿದರೆ, ಕಾಂಗ್ರೆಸಿನಲ್ಲಿ ಪ್ರಚಾರ ಸಮಿತಿ, ಗ್ಯಾರಂಟಿ ಯೋಜನೆಗಳ ಹೆಸರಲ್ಲಿ ಸಮಾವೇಶ ನಡೆಸಲು ಅದಕ್ಕೊಂದು ಸಮಿತಿ, ಚುನಾವಣಾ ನಿರ್ವಹಣಾ ಸಮಿತಿಯನ್ನು ಜಿಲ್ಲೆ ಮತ್ತು ಪ್ರತಿ ತಾಲೂಕು ಮಟ್ಟದಲ್ಲಿಯೂ ಮಾಡಲಾಗಿದೆ. ಆದರೆ ಸಮಿತಿ ಇದ್ದರಷ್ಟಕ್ಕೇ ಪ್ರಚಾರ ನಿರ್ವಹಣೆ ಆಗಲ್ಲ ಅನ್ನುವುದನ್ನು ನಾಯಕರು ಮರೆತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಎ.3ರಂದು ಬೆಳಗ್ಗೆ ನಾಮಪತ್ರ ಸಲ್ಲಿಸಲಿದ್ದು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಕೇರಳ ಸಂಸದ ರೋಜಿ ಜಾನ್, ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಸೇರಿದಂತೆ ಜಿಲ್ಲೆಯ ನಾಯಕರು ಭಾಗವಹಿಸಲಿದ್ದಾರೆ. ಕುದ್ರೋಳಿ, ಅಳಕೆ ಆಸುಪಾಸಿನಲ್ಲಿ ರೋಡ್ ಶೋ ನಡೆಯಲಿದ್ದು, ಆನಂತರ ಕುದ್ರೋಳಿ ದೇವಸ್ಥಾನ, ಮಸೀದಿ, ಚರ್ಚ್ ಗೆ ತೆರಳಿ ಬಳಿಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಆಗಲಿದೆ. 

Ex-cop Annamalai appointed BJP Tamil Nadu President - The Hindu BusinessLine

Lingayat seers urge BJP to shift Pralhad Joshi from Dharwad : The Tribune  India

ಅಣ್ಣಾಮಲೈ, ಪ್ರಹ್ಲಾದ ಜೋಷಿಯೂ ಡೌಟು 

ಎಪ್ರಿಲ್ 4ರಂದು ಬಿಜೆಪಿ ಅಭ್ಯರ್ಥಿ ಬೃಜೇಶ್ ಚೌಟ ನಾಮಪತ್ರ ಸಲ್ಲಿಸಲಿದ್ದು, ರಾಷ್ಟ್ರೀಯ ಮುಖಂಡರೊಬ್ಬರು ಬರಲಿದ್ದಾರೆಂದು ಪಕ್ಷದ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ತಿಳಿಸಿದ್ದಾರೆ. ಪ್ರಹ್ಲಾದ ಜೋಷಿ, ಅಣ್ಣಾಮಲೈ ಬರಲಿದ್ದಾರೆ ಎಂದು ಹೆಸರು ಕೇಳಿಬರುತ್ತಿದ್ದರೂ ಅದಿನ್ನೂ ಅಂತಿಮ ಆಗಿಲ್ಲ. ಇವರಿಬ್ಬರೂ ಚುನಾವಣೆ ಸ್ಪರ್ಧಿಸುತ್ತಿದ್ದು, ತಮ್ಮ ಕ್ಷೇತ್ರದಲ್ಲೇ ಬಿಝಿಯಾಗಿದ್ದಾರೆ. ಇದಲ್ಲದೆ, ಅಣ್ಣಾಮಲೈ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷನಾಗಿರುವುದರಿಂದ ಇಡೀ ರಾಜ್ಯದ ಚಿಂತೆಯೂ ಅವರಿಗಿದೆ. ಉಡುಪಿಯಲ್ಲಿ ಎಸ್ಪಿ ಆಗಿದ್ದ ಅಣ್ಣಾಮಲೈ ಈಗ ಬಿಜೆಪಿ ಪಾಲಿಗೆ ಯೂತ್ ಐಕಾನ್ ಆಗಿದ್ದಾರೆ. ಚುನಾವಣೆ ಕಾಲಕ್ಕೆ ಕರಾವಳಿಯತ್ತ ಮುಖ ಮಾಡಿದರೆ ಖದರ್ ಬದಲಾಗಲಿದೆ. ನಾಮಪತ್ರ ಸಲ್ಲಿಕೆಗೆ ಬಂಟ್ಸ್ ಹಾಸ್ಟೆಲಿನ ಚುನಾವಣಾ ಕಚೇರಿಯಿಂದ ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಕ್ಲಾಕ್ ಟವರ್ ವರೆಗೆ ಮೆರವಣಿಗೆಯಲ್ಲಿ ಸಾಗಿ ಅಲ್ಲಿ ಸಮಾವೇಶ ನಡೆದು ಬಳಿಕ ನಾಮಪತ್ರ ಸಲ್ಲಿಕೆ ಆಗಲಿದೆಯೆಂದು ಪಕ್ಷದ ಮೂಲಗಳಿಂದ ತಿಳಿದಿದೆ.

ಇಷ್ಟಾದರೂ ಕೇಸರಿ ಭದ್ರಕೋಟೆಯಲ್ಲಿ ಕಾರ್ಯಕರ್ತರಲ್ಲೇ ಹುರುಪು ಎದ್ದಿಲ್ಲ. ಮೋದಿ, ಮೋದಿ ಹೆಸರಿನ ಅಬ್ಬರವೂ ಕಾಣಿಸುತ್ತಿಲ್ಲ. ಕಟೌಟ್, ಪೋಸ್ಟರುಗಳಿಗೆ ಚುನಾವಣೆ ಆಯೋಗ ಅಂಕುಶ ಹಾಕಿರುವುದರಿಂದ ಎಲ್ಲವೂ ಸೈಲಂಟ್ ಆಗಿದೆ. ಮಂಗಳೂರಿನಲ್ಲಿ ರಸ್ತೆ ನಿರ್ಮಾಣ ನೆಪದಲ್ಲಿ ದೊಡ್ಡ ಮರಗಳನ್ನೆಲ್ಲ ಕಡಿದು ಹಾಕಿದ್ದರಿಂದ ಬಿಸಿಲಿನ ಪ್ರಖರತೆ ಅಂತೂ ಹಿಂದೆಂದಿಗಿಂತ ಈ ಬಾರಿ ಹೆಚ್ಚಿದೆ. 35 ಡಿಗ್ರಿಯ ಬಿಸಿಯಲ್ಲಿ ಕಾರ್ಯಕರ್ತರೂ ಹೈರಾಣಾಗಿದ್ದಾರೋ ಅನ್ನುವಂತಿದೆ ವಾತಾವರಣ. ಹೊಟ್ಟೆಗೆ ತಂಪು, ಕೈಗೆ ಇಂಪು ಮಾಡಿದರಷ್ಟೇ ನಾಯಕರಿಗೆ ಕಂಪು ಅನ್ನುವ ಉತ್ತರ ಭಾರತದ ಶೈಲಿಗೆ ಕರಾವಳಿಗರೂ ನಿಧಾನಕ್ಕೆ ಶರಣಾಗುತ್ತಿದ್ದಾರೆ. ಹಳೆಕಾಲದ ಚುನಾವಣೆಯ ಕಾರ್ಯಶೈಲಿ ಮಗ್ಗುಲು ಹೊರಳಿಸುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ.

Mangalore how is the heat waves of BJP and Congress, ground Report by Headline Karnataka. No national leaders have come to Mangalore either Modi or Amit Shah for campaign.