Ullal, UT Khader, Mudipu KSRTC: ನಾಲೇಜ್ ಕಾರಿಡಾರ್ ಯೋಜನೆಯಡಿ ಮಣಿಪಾಲ- ಕೊಣಾಜೆಗೆ ಮೆಟ್ರೋ ಅನುಷ್ಠಾನ ; ಮುಡಿಪುವಿನಲ್ಲಿ ಕೆಎಸ್ಆರ್ ಟಿಸಿ ಬಸ್ ತಂಗುದಾಣಕ್ಕೆ 3 ಎಕರೆ ಜಮೀನು ಮಂಜೂರು ; ನರಿಂಗಾನದಲ್ಲಿ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟಿಸಿ ಯುಟಿ ಖಾದರ್ 

23-12-25 10:23 pm       Mangalore Correspondent   ಕರಾವಳಿ

ಆರೋಗ್ಯ ಮತ್ತು ಶೈಕ್ಷಣಿಕ ಹಬ್ ಎನಿಸಿರುವ ಮಣಿಪಾಲ ಮತ್ತು ಕೊಣಾಜೆ ನಡುವೆ 2019ರಲ್ಲಿ ರೂಪಿಸಿದ್ದ ನಾಲೆಜ್ ಕಾರಿಡಾರ್ ಯೋಜನೆಯಡಿ ಮುಂದಿನ ದಿನಗಳಲ್ಲಿ ಮೆಟ್ರೋ ಅನುಷ್ಟಾನಗೊಳಿಸುವ ಬಗ್ಗೆ ರೂಪುರೇಷೆ ಸಿದ್ಧಗೊಳ್ಳುತ್ತಿದೆ.

ಉಳ್ಳಾಲ, ಡಿ.23: ಆರೋಗ್ಯ ಮತ್ತು ಶೈಕ್ಷಣಿಕ ಹಬ್ ಎನಿಸಿರುವ ಮಣಿಪಾಲ ಮತ್ತು ಕೊಣಾಜೆ ನಡುವೆ 2019ರಲ್ಲಿ ರೂಪಿಸಿದ್ದ ನಾಲೆಜ್ ಕಾರಿಡಾರ್ ಯೋಜನೆಯಡಿ ಮುಂದಿನ ದಿನಗಳಲ್ಲಿ ಮೆಟ್ರೋ ಅನುಷ್ಟಾನಗೊಳಿಸುವ ಬಗ್ಗೆ ರೂಪುರೇಷೆ ಸಿದ್ಧಗೊಳ್ಳುತ್ತಿದೆ. ಇದಲ್ಲದೆ, ಮುಡಿಪುವಿನಲ್ಲಿ ಕೆಎಸ್ಆರ್ ಟಿಸಿ ಬಸ್ಸು ತಂಗುದಾಣ‌ ನಿರ್ಮಾಣಕ್ಕೆ ಮೂರು ಎಕರೆ ಜಮೀನು ಮಂಜೂರುಗೊಳಿಸಲಾಗಿದೆ ಎಂದು ವಿದಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಹೇಳಿದರು.

ನರಿಂಗಾನ ಗ್ರಾಮ ಪಂಚಾಯತ್ ವಠಾರದಲ್ಲಿ ಗಾಂಧಿ ಪ್ರತಿಮೆ ಅನಾವರಣ, ಗ್ರಾಮ ವ್ಯಾಪ್ತಿಯ ಬೋಳದಲ್ಲಿ ನಿರ್ಮಿಸಲಾದ ಸ್ವಚ್ಛ ಸಂಕೀರ್ಣ ಮತ್ತು ಮಲತ್ಯಾಜ್ಯ ಘಟಕ ಉದ್ಘಾಟನೆ, ಆಶಾ ಕಾರ್ಯಕರ್ತೆಯರಿಗೆ ಸ್ಕೂಟರ್ ಹಸ್ತಾಂತರ, ಹಕ್ಕುಪತ್ರ ವಿತರಣೆ, ನೀರಿನ ಟ್ಯಾಂಕ್ ಉದ್ಘಾಟನೆ, ವಿಶೇಷ ಚೇತನರಿಗೆ ಚೆಕ್ ವಿತರಣೆ ಸೇರಿದಂತೆ ನರಿಂಗಾನ ಗ್ರಾಮದಲ್ಲಿ ಐದು ಕೋಟಿ ಅನುದಾನದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು. 

ಮಂಗಳೂರು ವಿದಾನಸಭಾ ಕ್ಷೇತ್ರದಲ್ಲಿ 20 ಕೋಟಿ ಅನುದಾನದಲ್ಲಿ ಸೈಬರ್ ಸೆಕ್ಯೂರಿಟಿ ಜಾರಿಗೆ ತರಲು ಯೋಚಿಸಲಾಗಿದ್ದು ಇದರ ಬಗ್ಗೆ ಉನ್ನತ ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ. ಇದು ಜಾರಿಯಾದಲ್ಲಿ ಅಪರಾಧ ಸಹಿತ ಎಲ್ಲಾ ರೀತಿಯ ಸಮಸ್ಯೆಗಳಿಗೂ ಕಡಿವಾಣ ಹಾಕಲು ಸಾಧ್ಯ. ನರಿಂಗಾನ ಗ್ರಾ.ಪಂ.ನಿಂದ ಆಶಾ ಕಾರ್ಯಕರ್ತೆಯರಿಗೆ ಉಚಿತ ಸ್ಕೂಟರ್ ವಿತರಣೆಯು ಕ್ರಾಂತಿಕಾರಿ ಯೋಜನೆಯಾಗಿದ್ದು ಇದನ್ನೇ ಮಾದರಿಯಾಗಿಟ್ಟು ಮುಂದಿನ‌ ದಿನಗಳಲ್ಲಿ ಸರ್ಕಾರದಿಂದಲೇ ಇಂತಹ‌ ಯೋಜನೆ ಜಾರಿಗೆ ತಂದರೂ ಆಶ್ಚರ್ಯವಿಲ್ಲ. ನರಿಂಗಾನ ಗ್ರಾಮದ‌ ಬೋಳದಲ್ಲಿ ತುಳುಗ್ರಾಮ ನಿರ್ಮಾಣ ಯೋಜನೆ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಕ್ರೀಡಾಂಗಣ ನಿರ್ಮಿಸಲು ಜಮೀನು ಗುರುತಿಸಿದರೆ ಒಂದು ಕೋಟಿ ಅನುದಾನ ತಕ್ಷಣ ಬಿಡುಗಡೆಗೊಳಿಸುವುದಾಗಿ ಅವರು ಭರವಸೆ ನೀಡಿದರು. 

ಸುಸಜ್ಜಿತ ರಸ್ತೆ, 24 ಗಂಟೆ ಕುಡಿಯುವ ನೀರು, ಶಿಕ್ಷಣ ಸಂಸ್ಥೆಗಳು, ಆರೋಗ್ಯ ಕೇಂದ್ರ ಹೀಗೆ ಎಲ್ಲಾ ಕ್ಷೇತ್ರದ ಅಭಿವೃದ್ಧಿ ಮೂಲಕ ಜನರು ನೀಡಿದ ಮತದ ಗೌರವ ಹೆಚ್ಚಿಸಲಾಗಿದೆ. ಸಾವಿರಕ್ಕಿಂತಲೂ ಅಧಿಕ ವಿದ್ಯಾರ್ಥಿಗಳಿರುವ ಶಾಲೆ ಗ್ರಾಮದಲ್ಲಿದ್ದು ಕ್ಷೇತ್ರದ ಎಲ್ಲಾ ಶಾಲೆಗಳನ್ನು ಆಂಗ್ಲ ಮಾಧ್ಯಮವಾಗಿ ಮಂಜೂರುಗೊಳಿಸಲಾಗಿದೆ ಎಂದರು.

ನರಿಂಗಾನ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹಮ್ಮದ್ ನವಾಝ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಜ್ಯೋತಿ ಡಿಸೋಜ, ನರಿಂಗಾನ ಲವ-ಕುಶ ಜೋಡುಕರೆ ಕಂಬಳ ಸಮಿತಿ ಕಾರ್ಯಾಧ್ಯಕ್ಷರಾದ ಪ್ರಶಾಂತ್ ಕಾಜವ,ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಮೇಶ್ ಶೆಟ್ಟಿ ಬೋಳಿಯಾರ್, ಮಾಜಿ ಒಂಬುಡ್ಸ್ ಮೆನ್ ಶೀನ ಶೆಟ್ಟಿ,‌ ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ ಮೊದಲಾದವರು ಉಪಸ್ಥಿತರಿದ್ದರು.

A detailed plan is being prepared to implement a metro rail service between Manipal and Konaje under the Knowledge Corridor project conceptualised in 2019, said Karnataka Legislative Assembly Speaker U.T. Khader. He also announced that three acres of land have been sanctioned at Mudipu for the construction of a KSRTC bus terminal.