ದಕ್ಷಿಣ ಕನ್ನಡ- ಚಿಕ್ಕಮಗಳೂರು ಸಂಪರ್ಕ ಕೊಂಡಿ ಚಾರ್ಮಾಡಿ ಘಾಟಿ ಹೆದ್ದಾರಿ ; ರಸ್ತೆ ಅಗಲೀಕರಣಕ್ಕೆ ಸರ್ವೆ ಪೂರ್ಣ, ಶೀಘ್ರದಲ್ಲೇ ಟೆಂಡರ್

05-09-26 04:58 pm       HK News Staffer   ಕರಾವಳಿ

ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ನಡುವಿನ ಸಂಪರ್ಕ ಕೊಂಡಿಯಾಗಿರುವ ಚಾರ್ಮಾಡಿ ಘಾಟಿ ಹೆದ್ದಾರಿ ಅಗಲೀಕರಣಕ್ಕೆ ಸರ್ವೆ ಕಾರ್ಯ ಪೂರ್ಣಗೊಂಡಿದ್ದು, ಅಲೈನ್‌ಮೆಂಟ್ ಸಿದ್ಧವಾಗಿದೆ.

ಚಿಕ್ಕಮಗಳೂರು, ಸೆ.5 : ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ನಡುವಿನ ಸಂಪರ್ಕ ಕೊಂಡಿಯಾಗಿರುವ ಚಾರ್ಮಾಡಿ ಘಾಟಿ ಹೆದ್ದಾರಿ ಅಗಲೀಕರಣಕ್ಕೆ ಸರ್ವೆ ಕಾರ್ಯ ಪೂರ್ಣಗೊಂಡಿದ್ದು, ಅಲೈನ್‌ಮೆಂಟ್ ಸಿದ್ಧವಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ 11.2 ಕಿಮೀ ಹಾಗೂ ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ 13 ಕಿಲೊಮೀಟರ್ ರಸ್ತೆಯು ಚಾರ್ಮಾಡಿ ಘಾಟಿಯಲ್ಲಿ ಹಾದು ಹೋಗುತ್ತದೆ. ಇಲ್ಲಿನ ಕಿರಿದಾದ ಘಾಟಿ ರಸ್ತೆಯಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದು ವಾಹನಗಳು ಕಿಲೊಮೀಟರ್‌ ಉದ್ದಕ್ಕೆ ಸಾಲುಗಟ್ಟಿ ನಿಲ್ಲುತ್ತವೆ. ರಸ್ತೆ ಅತ್ಯಂತ ಕಿರಿದಾಗಿರುವುದರಿಂದ 6 ಚಕ್ರಗಳ ವಾಹನ ಸಂಚಾರಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ. ಇದನ್ನು ತಪ್ಪಿಸಲು ರಸ್ತೆ ವಿಸ್ತರಣೆಗೆ ಯೋಜನೆ ರೂಪಿಸಲಾಗಿದೆ. 

ಕೇಂದ್ರ ಭೂಸಾರಿಗೆ ಇಲಾಖೆಯ 2026-27ರ ಕ್ರಿಯಾ ಯೋಜನೆಯಲ್ಲಿ ಈ ಭಾಗದ ಹೆದ್ದಾರಿ ಅಗಲೀಕರಣಕ್ಕೆ ₹400 ಕೋಟಿ ಅನುದಾನ ನಿಗದಿ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ರಸ್ತೆಯಲ್ಲಿ 11 ಕಿರಿದಾದ ತಿರುವುಗಳಿದ್ದು ದ್ವಿಮುಖ ರಸ್ತೆ ಅಭಿವೃದ್ಧಿಗಾಗಿ 343.74 ಕೋಟಿ ಮೊತ್ತದ ಯೋಜನೆಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ 2023-24ನೇ ಸಾಲಿನಲ್ಲಿ ಅನುಮೋದನೆ ನೀಡಿದೆ. ಎಸ್ಎಲ್‌ವಿ ಅರ್ಥ್ ಮೂವರ್ ಲಿಮಿಟೆಡ್ ಕಂಪನಿಗೆ ಕಾಮಗಾರಿ ವಹಿಸಲಾಗಿದೆ. ಇನ್ನು ಚಿಕ್ಕಮಗಳೂರು ಜಿಲ್ಲೆ ವ್ಯಾಪ್ತಿಯಲ್ಲಿ ಕಡಿದಾದ ತಿರುವುಗಳಿಲ್ಲ. ಹಾಗಾಗಿ, ರಸ್ತೆಯನ್ನು 10 ಮೀಟರ್ ಅಗಲೀಕರಣಕ್ಕೆ ಉದ್ದೇಶಿಸಲಾಗಿದೆ. ಈ ಭಾಗದಲ್ಲಿ ವಿಸ್ತ್ರತ ಯೋಜನಾ ವರದಿ (ಡಿಪಿಆರ್) ತಯಾರಿಸಲು ಕೆ ಆ್ಯಂಡ್ ಜೆ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್ ಅನ್ನು ಸಮಾಲೋಚಕ ಸಂಸ್ಥೆಯನ್ನಾಗಿ ನೇಮಿಸಲಾಗಿತ್ತು. ಈ ಸಂಸ್ಥೆಯು ಸರ್ವೆ ಕಾರ್ಯ ಪೂರ್ಣಗೊಳಿಸಿ ಅಲೈನ್‌ಮೆಂಟ್ ವರದಿಯನ್ನು ಕೇಂದ್ರ ಹೆದ್ದಾರಿ ಸಚಿವಾಲಯದ ಪ್ರಾದೇಶಿಕ ಅಧಿಕಾರಿಗೆ ಸಲ್ಲಿಸಿದೆ.

ಒಂದೆಡೆ ಕಡಿದಾದ ಗುಡ್ಡ, ಮತ್ತೊಂದೆಡೆ ಸಾವಿರಾರು ಅಡಿ ಪ್ರಪಾತ ಇರುವ ಪ್ರದೇಶ ಆಗಿರುವುದರಿಂದ, ಎಲ್ಲೆಲ್ಲಿ 10 ಮೀಟರ್ ಅಗಲ ಮಾಡಲು ಅವಕಾಶ ಇದೆ ಎಂಬುದರ ಪರಿಶೀಲನೆ ನಡೆಸಿ ಅಲೈನ್‌ಮೆಂಟ್ ವರದಿ ಸಿದ್ಧಪಡಿಸಲಾಗಿದೆ. ಈ ವರದಿ ಆಧರಿಸಿ ಕೇಂದ್ರ ಹೆದ್ದಾರಿ ಸಚಿವಾಲಯ ಅನುಮೋದನೆ ನೀಡಬೇಕಿದ್ದು ಆಬಳಿಕ ಡಿಪಿಆರ್ ಸಿದ್ದವಾಗಲಿದೆ. ಇದನ್ನು ಮತ್ತೆ ಹೆದ್ದಾರಿ ಸಚಿವಾಲಯಕ್ಕೆ ಸಲ್ಲಿಸಿ ಆನಂತರ ಟೆಂಡರ್ ಮಾಡಬೇಕಾಗುತ್ತದೆ ಎಂದು ಹೆದ್ದಾರಿ ಅಧಿಕಾರಿಗಳು ತಿಳಿಸಿದ್ದಾರೆ.