Mangalore Agnes College Protest, ABVP: ಮಂಗಳೂರಿನಲ್ಲಿ ಎಷ್ಟು ಪ್ರತಿಭಟನೆಯಲ್ಲಿ ಒಂದು ಲಕ್ಷ ಬಾಂಡ್ ಬರೆಸಿದ್ದೀರಿ? ಎಬಿವಿಪಿ ವಿದ್ಯಾರ್ಥಿಗಳೆಂದು ಬಾಂಡ್ ಕೇಳಿದ್ದೀರಾ..? ಪೊಲೀಸರ ಕ್ರಮಕ್ಕೆ ಆಕ್ರೋಶ

14-10-26 10:45 pm       HK News Staffer   ಕರಾವಳಿ

ದಸರಾ ಹಬ್ಬದ ಸಂದರ್ಭ ಪರೀಕ್ಷೆ ನಡೆಸುವುದನ್ನು ಪ್ರಶ್ನಿಸಿ ವಿದ್ಯಾರ್ಥಿಗಳು ಪ್ರತಿಭಟಿಸಿದ ಸಂದರ್ಭ ಎಬಿವಿಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು ವಿದ್ಯಾರ್ಥಿಗಳಿಂದ ಮುಂದೆ ಇಂತಹ ಪ್ರತಿಭಟನೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿ ಒಂದು ಲಕ್ಷದ ಬಾಂಡ್‌ ಬರೆಯುವಂತೆ ಒತ್ತಡ ಹೇರಿದ್ದಾರೆ.

ಮಂಗಳೂರು, ಅ.14: ದಸರಾ ಹಬ್ಬದ ಸಂದರ್ಭ ಪರೀಕ್ಷೆ ನಡೆಸುವುದನ್ನು ಪ್ರಶ್ನಿಸಿ ವಿದ್ಯಾರ್ಥಿಗಳು ಪ್ರತಿಭಟಿಸಿದ ಸಂದರ್ಭ ಎಬಿವಿಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು ವಿದ್ಯಾರ್ಥಿಗಳಿಂದ ಮುಂದೆ ಇಂತಹ ಪ್ರತಿಭಟನೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿ ಒಂದು ಲಕ್ಷದ ಬಾಂಡ್‌ ಬರೆಯುವಂತೆ ಒತ್ತಡ ಹೇರಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳ ಮೇಲೆ ಇಂತಹ ಧೋರಣೆ ತೋರುವುದು ಯಾವ ನ್ಯಾಯ. ಅಲ್ಲದೆ, ಶಾಂತಿಯುತ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಕೈಮಾಡಿದ್ದಾರೆ. ಇವರಿಗೆ ವಿದ್ಯಾರ್ಥಿಗಳ ಮೇಲೆ ಕೈಮಾಡುವಷ್ಟು ಧೈರ್ಯವೇ ಎಂದು ಎಬಿವಿಪಿ ನಾಯಕರು ಪೊಲೀಸರನ್ನು ಪ್ರಶ್ನಿಸಿದ್ದಾರೆ.

ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಸುವಿತ್ ಶೆಟ್ಟಿ, ಮಂಗಳೂರಿನಲ್ಲಿ ಎಷ್ಟೊಂದು ಪ್ರತಿಭಟನೆಗಳು ನಡೆದಿಲ್ಲ. ಪ್ರತಿ ಬಾರಿಯೂ ಬಾಂಡ್ ಬರೆಸಿಕೊಂಡಿದ್ದೀರಾ.. ಇಲ್ಲಿ ಎಬಿವಿಪಿ ವಿದ್ಯಾರ್ಥಿಗಳೆಂದು ಹತ್ತಿಕ್ಕಲು ನೋಡಿದ್ದೀರಾ ಎಂದು ಅವರು ಪ್ರಶ್ನಿಸಿದರು.

ದಸರಾ ಸಂದರ್ಭ ಪರೀಕ್ಷೆಯನ್ನು ವಿರೋಧಿಸಿ ವಿದ್ಯಾರ್ಥಿಗಳ ಪರವಾಗಿ ಕಾಲೇಜು ಆಡಳಿತ ಮಂಡಳಿಯ ಜತೆ ಮಾತುಕತೆ ನಡೆಸಲು ಎಬಿವಿಪಿ ನಾಯಕರು ತೆರಳಿದ್ದಾಗ ಅವರಲ್ಲಿ ಮಾತನಾಡುವ ಸೌಜನ್ಯ ತೋರಿಸಿಲ್ಲ. ಹಾಗಾಗಿ ಅ. 12ರಂದು ಕಾಲೇಜಿನ ನಿರ್ಧಾರದ ವಿರುದ್ಧ ವಿದ್ಯಾರ್ಥಿಗಳು ಹೋರಾಟ ನಡೆಸಲು ನಿರ್ಧರಿಸಿದ್ದು ಅದಕ್ಕೆ ಎಬಿವಿಪಿ ಬೆಂಬಲ ನೀಡಿತ್ತು ಎಂದವರು ಹೇಳಿದರು.

ಪರೀಕ್ಷೆ ನಡೆಯುತ್ತಿದ್ದ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಯೊಂದರ ಎದುರು ಹೋರಾಟ ನಡೆಸುವ ಬಗ್ಗೆ ಪೊಲೀಸ್‌ ಇಲಾಖೆಯಿಂದ ಅನುಮತಿ ಪಡೆಯಲಾಗಿತ್ತೇ ಎಂಬ ಪ್ರಶ್ನೆಗೆ, ನಾವು ಪ್ರತಿಭಟನೆಯ ಉದ್ದೇಶದಿಂದ ಹೋಗಿರಲಿಲ್ಲ. ಹಾಗಂತ, ಪೊಲೀಸರು ವಿದ್ಯಾರ್ಥಿಗಳ ಮೇಲೆ ಕೈಮಾಡಿದ್ದು ಅಕ್ಷಮ್ಯ. ಎಸಿಪಿ ರವೀಶ್ ನಾಯ್ಕ್ ನೇತೃತ್ವದಲ್ಲಿ ಈ ಕೆಲಸ ಆಗಿದ್ದು ಅವರನ್ನು ಹೊಣೆಯಾಗಿಸಿ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.