ಪದ್ಮಶ್ರೀ ಹಾಜಬ್ಬರಿಗೆ ಚುನಾವಣಾ ಆಯೋಗವು ನೋಟೀಸು ನೀಡುವುದಾದರೆ ಉಳಿದವರ ಪಾಡೇನು? ಜ್ಞಾನೇಶ್ ಕುಮಾರ್ ರಾಜೀನಾಮೆ ಆಗ್ರಹಿಸಿ ತೊಕ್ಕೊಟ್ಟಿನಲ್ಲಿ ಯೂತ್ ಕಾಂಗ್ರೆಸ್ ಅಹೋರಾತ್ರಿ ಧರಣಿ

16-10-26 10:28 pm       HK News Desk   ಕರಾವಳಿ

ಎಸ್ ಐಆರ್ ಪ್ರಕ್ರಿಯೆಯಲ್ಲಿ ದೇಶಾದ್ಯಂತ ಕೋಟ್ಯಾಂತರ ಮತದಾರರ ಹೆಸರುಗಳನ್ನ ಅಳಿಸುವ ಕಾರ್ಯಕ್ಕೆ ಚುನಾವಣಾ ಆಯೋಗ ಕೈಹಾಕಿದೆ.

ಉಳ್ಳಾಲ, ಅ.16: ಎಸ್ ಐಆರ್ ಪ್ರಕ್ರಿಯೆಯಲ್ಲಿ ದೇಶಾದ್ಯಂತ ಕೋಟ್ಯಾಂತರ ಮತದಾರರ ಹೆಸರುಗಳನ್ನ ಅಳಿಸುವ ಕಾರ್ಯಕ್ಕೆ ಚುನಾವಣಾ ಆಯೋಗ ಕೈಹಾಕಿದೆ. ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ಚುನಾವಣಾ ಆಯೋಗವು ನೋಟೀಸು ನೀಡುವುದಾದರೆ, ಇವರು ಇನ್ನು ಯಾರನ್ನೂ ಬಿಡಲಾರರೆಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಚುನಾವಣಾ ಆಯೋಗದ ಮುಖ್ಯಸ್ಥ ಜ್ಞಾನೇಶ್ ಕುಮಾರ್ ರಾಜೀನಾಮೆ ಕೊಡಲೇಬೇಕಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಯುವಶಕ್ತಿಯನ್ನು ಇಂದು ಓಟಿಗಾಗಿ ಸಂಗ್ರಾಮ ನಡೆಸುವ ಸ್ಥಿತಿಗೆ ಬಿಜೆಪಿಗರು ತಳ್ಳಿದ್ದಾರೆಂದು ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಮತಾ ಡಿ.ಎಸ್.ಗಟ್ಟಿ ಆರೋಪಿಸಿದರು.

ಎಸ್ ಐಆರ್ ವಿರುದ್ಧ ಹಾಗೂ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಮಂಗಳೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ತೊಕ್ಕೊಟ್ಟು ಕೇಂದ್ರ ಬಸ್ಸು ನಿಲ್ದಾಣದಲ್ಲಿ ಶುಕ್ರವಾರ ಸಂಜೆ ನಡೆದ ಅಹೋರಾತ್ರಿ ಧರಣಿಯನ್ನುದ್ಧೇಶಿಸಿ ಅವರು ಮಾತನಾಡಿದರು. ಯುವಕರೇ ದೇಶದ ಶಕ್ತಿಯಾಗಿದ್ದು ಇಡೀ ದೇಶದ ಪ್ರಜೆಗಳ ಒಳಿತಿಗಾಗಿ ನಡೆಯುತ್ತಿರುವ ಪ್ರತಿಭಟನೆ ಇದಾಗಿದೆಯೆಂದರು.

ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಶಾಂತ್ ಕಾಜವ ಮಾತನಾಡಿ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥರಾದ ಜ್ಞಾನೇಶ್ ಕುಮಾರನ್ನ ಕೂಡಲೇ ಬಂಧಿಸಬೇಕು. ಯುವಜನತೆ ಎಚ್ಚೆತ್ತಾಗಲೇ ಎಸ್ ಐಆರ್ ಸಮಸ್ಯೆ ಬಗೆಹರಿಯಲು ಸಾಧ್ಯ. ಯೂತ್ ಕಾಂಗ್ರೆಸ್ ಸದಸ್ಯರು ಪ್ರತೀ ಕಾಲೇಜುಗಳಿಗೆ ತೆರಳಿ ಯುವ ಸಮುದಾಯವನ್ನ ಒಗ್ಗೂಡಿಸಿ ಎಸ್ ಐಆರ್ ವಿರುದ್ಧ ಪ್ರತಿಭಟಿಸಬೇಕಿದೆ. ಜ್ಞಾನೇಶ್ ಅವರನ್ನ ಬಂಧಿಸದಿದ್ದರೆ ನಿರಂತರ ಧರಣಿ‌ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಅವರು ಎಚ್ಚರಿಸಿದರು.

ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್, ಯೂತ್ ಕಾಂಗ್ರೆಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರಯ್ಯ ಅಂಜುಮ್, ಮಂಗಳೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವಾಝ್ ನರಿಂಗಾನ, ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಮುಸ್ತಾಫ ಹರೇಕಳ, ಜಬ್ಬಾರ್ ಬೋಳಿಯಾರ್, ಇರಾ ಗ್ರಾ.ಪಂ ಮಾಜಿ ಅಧ್ಯಕ್ಷ ರಝಾಕ್ ಕುಕ್ಕಾಜೆ, ಗ್ಯಾರಂಟಿ ಅನುಷ್ಟಾನ ಸಮಿತಿ ತಾಲೂಕು ಅಧ್ಯಕ್ಷ ರಫೀಕ್ ಅಂಬ್ಲಮೊಗರು, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಬಶೀರ್, ಪ್ರಮುಖರಾದ ಅಬ್ದುಲ್ ಶಕೀಲ್, ನಾಸಿರ್ ಸಾಮಾಣಿಗೆ, ಸಫ್ವಾನ್ ಕೆರೆಬೈಲು, ಮನ್ಸೂರ್ ಮಂಚಿಲ, ಪ್ರಕಾಶ್ ಪಿಂಟೊ ಮೊದಲಾದವರು ಉಪಸ್ಥಿತರಿದ್ದರು.