‘ಎಸ್ಐಆರ್ ಬಗ್ಗೆ ಸುಳ್ಳು ಹೇಳಿ ದೇಶದಲ್ಲಿ ಅರಾಜಕತೆ ಸೃಷ್ಟಿಸಲೆತ್ನ’ ; ನ.6ರಂದು ಮಂಗಳೂರಿನಲ್ಲಿ ಬೃಹತ್ ಪಾದಯಾತ್ರೆ, ಸಾರ್ವಜನಿಕ ಸಭೆ, ಸಚಿವ ಸುರೇಶ್ ಗೋಪಿ, ತೇಜಸ್ವಿ ಸೂರ್ಯ ಭಾಗಿ

04-11-26 10:30 pm       HK News Desk   ಕರಾವಳಿ

ಎಸ್ಐಆರ್ ಕುರಿತು ಸುಳ್ಳು ಮಾಹಿತಿ ನೀಡಿ ದೇಶಾದ್ಯಂತ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿರುವ ಕಾಂಗ್ರೆಸಿನ ಷಡ್ಯಂತ್ರದ ವಿರುದ್ಧ ವಿರೋಧಿಗಳ ಸಂಚನ್ನು ಬಯಲು ಮಾಡುವ ಉದ್ದೇಶದಿಂದ ನ.6ರ ಶುಕ್ರವಾರ ಬಿಜೆಪಿ ಮಂಗಳೂರು ವಿಭಾಗ ಮಟ್ಟದ ವತಿಯಿಂದ ಪ್ರಜಾಪ್ರಭುತ್ವ ಉಳಿಸಿ- ಅರಾಜಕತೆ ಅಳಿಸಿ ಎಂಬ ಹೆಸರಿನಲ್ಲಿ ಬೃಹತ್ ಪಾದಯಾತ್ರೆ ಮತ್ತು ಸಾರ್ವಜನಿಕ ಸಭೆ ಅಭಿಯಾನ ನಡೆಸಲಾಗುವುದು ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.

ಮಂಗಳೂರು, ನ.4: ಎಸ್ಐಆರ್ ಕುರಿತು ಸುಳ್ಳು ಮಾಹಿತಿ ನೀಡಿ ದೇಶಾದ್ಯಂತ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿರುವ ಕಾಂಗ್ರೆಸಿನ ಷಡ್ಯಂತ್ರದ ವಿರುದ್ಧ ವಿರೋಧಿಗಳ ಸಂಚನ್ನು ಬಯಲು ಮಾಡುವ ಉದ್ದೇಶದಿಂದ ನ.6ರ ಶುಕ್ರವಾರ ಬಿಜೆಪಿ ಮಂಗಳೂರು ವಿಭಾಗ ಮಟ್ಟದ ವತಿಯಿಂದ ಪ್ರಜಾಪ್ರಭುತ್ವ ಉಳಿಸಿ- ಅರಾಜಕತೆ ಅಳಿಸಿ ಎಂಬ ಹೆಸರಿನಲ್ಲಿ ಬೃಹತ್ ಪಾದಯಾತ್ರೆ ಮತ್ತು ಸಾರ್ವಜನಿಕ ಸಭೆ ಅಭಿಯಾನ ನಡೆಸಲಾಗುವುದು ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪಾದಯಾತ್ರೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಿಂದ 20 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಕ್ಲಾಕ್ ಟವರ್ ಬಳಿಯಿಂದ ಪಾದಯಾತ್ರೆ ಆರಂಭಗೊಂಡು ಕೆಎಸ್ ರಾವ್ ರಸ್ತೆ, ಪಿವಿಎಸ್ ಸರ್ಕಲ್ ಮೂಲಕ ಬಂಟ್ಸ್ ಹಾಸ್ಟೆಲ್ ಆಗಿ ಕದ್ರಿ ಮೈದಾನಕ್ಕೆ ಬಂದು ಸಮಾವೇಶ ನಡೆಯಲಿದೆ. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ರಾಜ್ಯ ಸಚಿವ, ಖ್ಯಾತ ಚಿತ್ರನಟ ಸುರೇಶ್ ಗೋಪಿ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಪ್ರಮುಖ ಭಾಷಣ ಮಾಡಲಿದ್ದಾರೆ ಎಂದರು.

ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಯುವಜನರನ್ನು ಮುಂದಿಟ್ಟು ಅನೇಕ ಯೋಜನೆಗಳನ್ನು ತಂದಿದ್ದಾರೆ. ಏಳು ಐಐಟಿಗಳ ಸ್ಥಾಪನೆ, 8 ಕಡೆ ಹೊಸ ಕೇಂದ್ರೀಯ ವಿದ್ಯಾಲಯಗಳನ್ನು ಆರಂಭಿಸಲಾಗಿದೆ. 2014ಕ್ಕೆ ಮೊದಲು ದೇಶದಲ್ಲಿ 387 ವೈದ್ಯಕೀಯ ಕಾಲೇಜುಗಳಿದ್ದವು. 12 ವರ್ಷಗಳಲ್ಲಿ ಹೊಸ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಲಾಗಿದೆ. ಮೋದಿಯವರು ಕೌಶಲ್ಯಾಭಿವೃದ್ಧಿ ಹೊಸ ಸಚಿವಾಲಯ ಆರಂಭಿಸಿದ್ದಾರೆ. 2,12,283 ಸ್ಟಾರ್ಟಪ್ ಗಳು ಆರಂಭವಾಗಿವೆ. ಈ ಪೈಕಿ 21,601 ಸ್ಟಾರ್ಟಪ್ ಕರ್ನಾಟಕದಲ್ಲೇ ಆರಂಭಗೊಂಡಿವೆ.

ಆದರೆ ಇದೆಲ್ಲವನ್ನೂ ಮರೆಮಾಚಿ ಕಾಂಗ್ರೆಸಿಗರು ಮಾತ್ರ ಯುವಜನರನ್ನು ಸಂಘರ್ಷಕ್ಕೆ ಇಳಿಸುವ ಹಾಗೂ ತಪ್ಪು ದಾರಿಗೆ ಎಳೆಯುವ ಯತ್ನ ಮಾಡುತ್ತಿದ್ದಾರೆ. ಯುವಕರನ್ನು ರಾಜಕೀಯ ಲಾಭಕ್ಕೆ ಬಯಳಸಿಕೊಂಡು ಸಂಘರ್ಷಕ್ಕೆ ಇಳಿಸುವುದು ಸರಿಯಲ್ಲವೆಂದು ಸುಪ್ರೀಂ ಕೋರ್ಟ್ ಕೂಡ ಹೇಳಿದೆ. ದೇಶದಲ್ಲಿ 12 ಬಾರಿ ಮತಪಟ್ಟಿ ಪರಿಷ್ಕರಣೆಯಾಗಿದ್ದು 10 ಬಾರಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಆಗಿದೆ. ಈಗ ಎಸ್ಐಆರ್ ನೆಪದಲ್ಲಿ ಪ್ರಜಾಪ್ರಭುತ್ವದ ಮುಖವಾಡ ಧರಿಸಿ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿದೆ ಎಂದು ಹೇಳಿದರು.

ಮೋದಿಯವರ ಜಾಗತಿಕ ಜನಪ್ರಿಯತೆಯನ್ನು ಸಹಿಸಲಾಗದೆ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ವಿದೇಶಿ ಶಕ್ತಿಗಳ ಜೊತೆಗೂಡಿ ದೇಶದಲ್ಲಿ ಆಂತರಿಕ ಶಾಂತಿ ಮತ್ತು ಅರಾಜಕತೆ ಸೃಷ್ಟಿಸಲು ಹುನ್ನಾರ ನಡೆಸುತ್ತಿದೆ ಎಂದು ಹೇಳಿದ ಕಾಮತ್, ನೆರೆಯ ದೇಶಗಳಲ್ಲಿ ಆಗಿರುವ ರೀತಿ ದಂಗೆ ಎಬ್ಬಿಸಿ ಆಡಳಿತ ಪಡೆಯಲು ಹವಣಿಸುತ್ತಿದೆ. ಇದಕ್ಕೆದುರಾಗಿ ದೇಶದ ಯುವಜನರನ್ನು ಜಾಗೃತಿಗೊಳಿಸುವುದು ಮುಖ್ಯವಾಗಿದೆ ಎಂದು ಹೇಳಿದರು.