ಬೆಂಕಿ, ಗಲಭೆಗೆ ಸಿದ್ದರಾಮಯ್ಯ ಬಿಡುಗಡೆ ಮಾಡಿದ್ದ ವಿಷ ಬೀಜಗಳೇ ಕಾರಣ ; ನಳಿನ್ ಕುಮಾರ್ ಟಾಂಗ್

17-08-20 07:42 pm       Mangalore Reporter   ಕರಾವಳಿ

ಸಿದ್ದರಾಮಯ್ಯನವರೇ ನೀವು ಬಿಡುಗಡೆಗೊಳಿಸಿದ ಆ ವಿಷ ಬೀಜಗಳೇ ಇಂದು ಕರ್ನಾಟಕದಲ್ಲಿ ಹೆಮ್ಮರವಾಗಿ ಬೆಳೆದು ಕಂಡ ಕಂಡಲ್ಲಿ ಬೆಂಕಿ ಇಟ್ಟು ಅಶಾಂತಿಗೆ ಕಾರಣರಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಟ್ವೀಟ್ ಮೂಲಕ ಆರೋಪ ಮಾಡಿದ್ದಾರೆ. 

ಮಂಗಳೂರು, ಆಗಸ್ಟ್ 17: ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಮಧ್ಯೆ ಟ್ವೀಟ್ ಸಮರ ತಾರಕಕ್ಕೇರಿದೆ. ಬೆಂಗಳೂರು ಗಲಭೆ ವಿಚಾರ ಮುಂದಿಟ್ಟು ಇಬ್ಬರೂ ಟ್ವಿಟರ್ ನಲ್ಲಿ ಹರಿಹಾಯುತ್ತಿದ್ದಾರೆ. 

ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಜೈಲಿನಿಂದ ಬಿಡುಗಡೆ ಮಾಡಿದವರೇ ಈಗ ರಾಜ್ಯಕ್ಕೆ ಬೆಂಕಿ ಇಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಟ್ವೀಟ್ ಮೂಲಕ ಆರೋಪ ಮಾಡಿದ್ದಾರೆ. 

"ಸಿದ್ದರಾಮಯ್ಯನವರೇ, ನೀವು ಅಂದು ಅಧಿಕಾರದಲ್ಲಿದ್ದಾಗ ಎಸ್ ಡಿಪಿಐ, ಕೆಎಫ್ ಡಿ ಮತ್ತು ಪಿಎಫ್ಐ ಸಂಘಟನೆಗಳಿಗೆ ಸೇರಿದ 1600 ಸಮಾಜಘಾತುಕರ ವಿರುದ್ಧ ಇದ್ದ 175 ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದು ಮಾಡಿ, ಅಪರಾಧಿಗಳನ್ನು ಖುಲಾಸೆಗೊಳಿಸಿದಿರಿ.. ನೀವು ಬಿಡುಗಡೆಗೊಳಿಸಿದ ಆ ವಿಷ ಬೀಜಗಳೇ ಇಂದು ಕರ್ನಾಟಕದಲ್ಲಿ ಹೆಮ್ಮರವಾಗಿ ಬೆಳೆದು ಕಂಡ ಕಂಡಲ್ಲಿ ಬೆಂಕಿ ಇಟ್ಟು ಅಶಾಂತಿಗೆ ಕಾರಣರಾಗಿದ್ದಾರೆ " ಎಂಬುದಾಗಿ ನಳಿನ್ ಕುಮಾರ್ ಟ್ವೀಟ್ ಮಾಡಿದ್ದಾರೆ. ಬೆಂಗಳೂರು ಗಲಭೆಯ ವಿಚಾರದಲ್ಲಿ ಎಸ್ ಡಿಪಿಐ, ಪಿಎಫ್ಐ ಸಂಘಟನೆಯ ಕೈವಾಡ ಕಂಡುಬಂದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್,  ಸಿದ್ದರಾಮಯ್ಯ ವಿರುದ್ಧ ನೇರವಾಗಿ ಆರೋಪ ಮಾಡಿದ್ದು ಮಾಜಿ ಮುಖ್ಯಮಂತ್ರಿ ಈ ಆರೋಪಕ್ಕೆ ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತಾರೆಂದು ಕುತೂಹಲ ಉಂಟಾಗಿದೆ.