ಕೋವಿಡ್ ನೆಪ ; ಮಂಗಳೂರು ಸೆಂಟ್ರಲ್ ಮಾರುಕಟ್ಟೆಗೆ ಮತ್ತೆ ಗ್ರಹಣ - ಜಿಲ್ಲಾಧಿಕಾರಿ ಆದೇಶಕ್ಕೆ ಅಡ್ಡಬಿದ್ದ ವ್ಯಾಪಾರಸ್ಥರು ! 

19-08-20 10:51 am       Mangalore Reporter   ಕರಾವಳಿ

ಕೋವಿಡ್ ಹರಡುವ ನೆಪದಲ್ಲಿ ಸೆಂಟ್ರಲ್ ಮಾರುಕಟ್ಟೆ ಅನಿರ್ದಿಷ್ಟವಾಗಿ ಬಂದ್ ಮಾಡುವಂತೆ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ. ವ್ಯಾಪಾರಸ್ಥರು ಮತ್ತು ಅಧಿಕಾರಿ ವರ್ಗದ ನಡುವಿನ ತಿಕ್ಕಾಟದಲ್ಲಿ ಮತ್ತೆ ಅಧಿಕಾರಸ್ಥರೇ ಜಯ ಕಂಡುಕೊಂಡಿದ್ದಾರೆ.

ಮಂಗಳೂರು, ಆಗಸ್ಟ್ 19: ಕೆಲವು ವಿಚಾರದಲ್ಲಿ ದೇವರು ಕೊಟ್ಟರೂ, ಪೂಜಾರಿ ಕೊಡಲ್ಲ ಎನ್ನುತ್ತಾರೆ. ಮಂಗಳೂರಿನ ಸೆಂಟ್ರಲ್ ಮಾರುಕಟ್ಟೆಯ ವಿಚಾರದಲ್ಲೂ ಅದೇ ಆಗಿದೆ. ಹೈಕೋರ್ಟ್ ಅನುಮತಿ ಪಡೆದು ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ಮತ್ತೆ ವ್ಯಾಪಾರ ಆರಂಭಿಸಲು ಮುಂದಾಗಿದ್ದರು. ಆದರೆ, ಈಗ ಜಿಲ್ಲಾಧಿಕಾರಿಯೇ ವ್ಯಾಪಾರಕ್ಕೆ ತಡೆ ಹಾಕಿದ್ದು ಕೋವಿಡ್ ಹರಡುವ ನೆಪದಲ್ಲಿ ಸೆಂಟ್ರಲ್ ಮಾರುಕಟ್ಟೆ ಅನಿರ್ದಿಷ್ಟವಾಗಿ ಬಂದ್ ಮಾಡುವಂತೆ ಆದೇಶ ಮಾಡಿದ್ದಾರೆ. 

ಹಂಪನಕಟ್ಟೆಯ ಕೇಂದ್ರ ಮಾರುಕಟ್ಟೆ ಪ್ರದೇಶದಲ್ಲಿ ದಿನವೂ ಹೊರ ರಾಜ್ಯದ ಸೇರಿ ಸಾವಿರಾರು ವಾಹನಗಳು ಬಂದು ಹೋಗುತ್ತವೆ. ದಿನ ಒಂದರಲ್ಲಿ 1500 ರಿಂದ ಎರಡು ಸಾವಿರದಷ್ಟು ವ್ಯಾಪಾರಸ್ಥರು ಮತ್ತು ಕಾರ್ಮಿಕರು ಸೇರುತ್ತಾರೆ. ಕಾರ್ಮಿಕರಾಗಲೀ, ವ್ಯಾಪಾರಸ್ಥರು ಆಗಲೀ ಯಾವುದೇ ಕೋವಿಡ್ ನಿಯಮ ಪಾಲನೆಯನ್ನು ಮಾಡುತ್ತಿಲ್ಲ‌. ಮುಖಗವಸು, ಸಾಮಾಜಿಕ ಅಂತರ ಪಾಲನೆ ಮಾಡದಿರುವ ಕಾರಣ ಸೆಂಟ್ರಲ್ ಮಾರುಕಟ್ಟೆ ಪ್ರದೇಶದಲ್ಲಿ ಕೊರೊನಾ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಅಲ್ಲದೆ, ಈಗಾಗಲೇ ಮಂಗಳೂರು ತಾಲೂಕಿನಲ್ಲಿ ಅತಿ ಹೆಚ್ಚು 6359 ಸೋಂಕಿತರಿದ್ದಾರೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 549 ಮಂದಿಗೆ ಸೋಂಕು ಕಂಡುಬಂದಿದೆ. ಇದೇ ವೇಳೆ ಸೆಂಟ್ರಲ್ ಮಾರುಕಟ್ಟೆ ಪ್ರದೇಶದಲ್ಲಿ 49 ಮಂದಿಗೆ ಸೋಂಕು ಆಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾದಿಂದ ಮೃತಪಟ್ಟ 277 ಮಂದಿಯ ಪೈಕಿ 171 ಮಂಗಳೂರಿನವರೇ ಆಗಿದ್ದಾರೆ. ಇವೆಲ್ಲ ಹಿನ್ನೆಲೆಯಲ್ಲಿ ಸೆಂಟ್ರಲ್ ಮಾರುಕಟ್ಟೆ ತೆರೆಯುವುದು ಮತ್ತು ಅಲ್ಲಿ ಜನಜಂಗುಳಿ ಸೇರುವುದು ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಈ ಬಗ್ಗೆ ಆಗಸ್ಟ್ 18ರಂದು ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು ಸೆಂಟ್ರಲ್ ಮಾರುಕಟ್ಟೆಯನ್ನು ಮುಂದಿನ ಆದೇಶದ ವರೆಗೆ ಮುಚ್ಚಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಲಾಕ್ ಡೌನ್ ಬಳಿಕ ಮುಚ್ಚಿದ್ದ ಸೆಂಟ್ರಲ್ ಮಾರುಕಟ್ಟೆಯ ವ್ಯಾಪಾರಸ್ಥರಿಗೆ ಬೈಕಂಪಾಡಿಯ ಎಪಿಎಂಸಿಯಲ್ಲಿ ವಹಿವಾಟಿಗೆ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಮಾರುಕಟ್ಟೆಯ ವ್ಯಾಪಾರಸ್ಥರು ಹೈಕೋರ್ಟಿಗೆ ದೂರು ಸಲ್ಲಿಸಿ ಮತ್ತೆ ವ್ಯಾಪಾರಕ್ಕೆ ಅವಕಾಶ ನೀಡುವಂತೆ ಕೇಳಿಕೊಂಡಿದ್ದರು. ವಾರದ ಹಿಂದಷ್ಟೇ ಹೈಕೋರ್ಟ್, ಮಹಾನಗರ ಪಾಲಿಕೆಯ  ತಡೆಯಾಜ್ಞೆ ತೆರವುಗೊಳಿಸಿದ್ದು ವ್ಯಾಪಾರಸ್ಥರು ತಮಗೆ ಸಿಕ್ಕ ಜಯ ಎಂದೇ ಭಾವಿಸಿದ್ದರು. ಕೆಲವು ವ್ಯಾಪಾರಸ್ಥರು ಸೆಂಟ್ರಲ್ ಮಾರುಕಟ್ಟೆಯಲ್ಲಿ ಮತ್ತೆ ವ್ಯಾಪಾರವನ್ನೂ ಆರಂಭಿಸಿದ್ದರು. ಮಹಾನಗರ ಪಾಲಿಕೆಯ ಕಮಿಷನರ್ ಮಾತ್ರ, ಈ ತಡೆಯಾಜ್ಞೆ ತೆರವು ಏನಿದ್ದರೂ ತಾತ್ಕಾಲಿಕ ಎನ್ನುತ್ತಿದ್ದರು. ಇದೀಗ ಜಿಲ್ಲಾಧಿಕಾರಿಯೇ ಕೊರೊನಾ ಕಾರಣ ಮುಂದಿಟ್ಟು ಸೆಂಟ್ರಲ್ ಮಾರುಕಟ್ಟೆಯನ್ನು ಪೂರ್ತಿಯಾಗಿ ಮುಚ್ಚಿಸಿದ್ದಾರೆ. ವ್ಯಾಪಾರಸ್ಥರು ಮತ್ತು ಅಧಿಕಾರಿ ವರ್ಗದ ನಡುವಿನ ತಿಕ್ಕಾಟದಲ್ಲಿ ಮತ್ತೆ ಅಧಿಕಾರಸ್ಥರೇ ಜಯ ಕಂಡುಕೊಂಡಿದ್ದಾರೆ.