ಮಂಗಳೂರಿನ ಬಾರ್ ಗಳಲ್ಲಿ ಭಾರೀ ಕಾರುಬಾರ್ - ಮದ್ಯದ ಘಮಲಲ್ಲಿ ಇಸ್ಪೀಟ್ ಅಡ್ಡ ! ಲೆಕ್ಕಕ್ಕಿಲ್ಲದ ನಿರ್ಬಂಧ 

19-08-20 11:26 am       Mangalore Reporter   ಕರಾವಳಿ

ಬಾರ್ ಗಳಲ್ಲಿ ಲಿಕ್ಕರ್ ಪಾರ್ಸೆಲ್ ಮಾಡಲು ಅಬಕಾರಿ ಇಲಾಖೆ ಅವಕಾಶ ನೀಡಿದೆ. ಆದರೆ, ಮಂಗಳೂರಿನ ಕೆಲವೆಡೆ ಈ ವಿನಾಯ್ತಿ ನೆಪದಲ್ಲಿಯೇ ಕಾರುಬಾರು ನಡೆಯುತ್ತಿರುವ ಆರೋಪ ಕೇಳಿಬಂದಿದೆ. 

ಮಂಗಳೂರು, ಆಗಸ್ಟ್ 19: ಕೊರೊನಾ ಅನ್ ಲಾಕ್ ಬಳಿಕ ಮದ್ಯದಂಗಡಿಗಳು ತೆರೆದುಕೊಂಡಿವೆ. ಇದೇ ವೇಳೆ, ಬಾರ್ ಗಳಲ್ಲಿ ಲಿಕ್ಕರ್ ಪಾರ್ಸೆಲ್ ಮಾಡಲು ಅಬಕಾರಿ ಇಲಾಖೆ ಅವಕಾಶ ನೀಡಿದೆ. ಆದರೆ, ಮಂಗಳೂರಿನ ಕೆಲವೆಡೆ ಈ ವಿನಾಯ್ತಿ ನೆಪದಲ್ಲಿಯೇ ಕಾರುಬಾರು ನಡೆಯುತ್ತಿರುವ ಆರೋಪ ಕೇಳಿಬಂದಿದೆ. 

ಮಂಗಳೂರು ನಗರ ಪ್ರದೇಶದಲ್ಲಿ ಪೊಲೀಸರಿಗೆ ಮಾಮೂಲು ಕೊಟ್ಟು ಬಾರ್ ಗಳಲ್ಲಿಯೇ ವ್ಯಾಪಾರ ಜೋರಾಗಿ ನಡೆಯುತ್ತಿದೆ. ಸಂಜೆಯಾಗುತ್ತಿದ್ದಂತೆ ಎಂದಿನ ರೀತಿಯಲ್ಲಿಯೇ ಮದ್ಯಪ್ರಿಯರು ಬಾರ್ ಗಳಲ್ಲೇ ಕುಳಿತು ಕುಡಿಯಲು ಆರಂಭಿಸಿದ್ದಾರೆ. ಮಂಗಳೂರಿನ ಮಲ್ಲಿಕಟ್ಟೆ, ಕೆಎಸ್ಸಾರ್ಟಿಸಿ, ಕಾಪಿಕಾಡ್, ಹಂಪನಕಟ್ಟೆ ಬಳಿಯ ಬಾರ್ ಗಳಲ್ಲಿ ರಾತ್ರಿ ವರೆಗೂ ಜನರು ಕುಳಿತು ಕುಡಿಯುತ್ತಿದ್ದಾರೆ. ಬಾರ್ ಗಳಲ್ಲಿ ಲಿಕ್ಕರ್ ಪಾರ್ಸೆಲ್ ಮಾಡಲು 9 ಗಂಟೆ ವರೆಗೆ ಮಾತ್ರ ಅವಕಾಶ ಇದ್ದರೂ, ರಾತ್ರಿ ಹನ್ನೊ‌ಂದು ಆದರೂ ಬಾಗಿಲು ಹಾಕದೆ ವ್ಯಾಪಾರ ನಡೆಸುವುದನ್ನು ಗಮನಿಸಿದ ಸಾರ್ವಜನಿಕರು ಮಾಧ್ಯಮದ ಗಮನಕ್ಕೆ ತಂದಿದ್ದಾರೆ. ಕೆಲವು ಕಡೆ ಬಾರ್ ಗಳಲ್ಲಿ ಇಸ್ಪೀಟ್ ಆಟಕ್ಕೂ ವೇದಿಕೆ ಕಲ್ಪಿಸಲಾಗಿದೆ. ಬಾರ್ ಒಳಗಿನ ಟೇಬಲ್ ಗಳಲ್ಲಿ ಇಸ್ಪೀಟ್ ಎಲೆಗಳು ಸದ್ದು ಮಾಡುತ್ತಿವೆಯಂತೆ.‌ ಪಬ್, ಇಸ್ಪೀಟ್ ಕ್ಲಬ್ ಬಂದ್ ಇರುವ ಹಿನ್ನೆಲೆಯಲ್ಲಿ ಬಾರ್ ಒಳಗಡೆಯೇ ದಲ್ಲಾಳಿಗಳು ಸೇರಿ ಇಸ್ಪೀಟ್ ಅಡ್ಡೆಗಳಾಗಿ ಪರಿವರ್ತನೆ ಮಾಡುತ್ತಿದ್ದಾರೆ ಎನ್ನುವ ಮಾತು ಕೇಳಿಬಂದಿದೆ.

ಇದೆಲ್ಲವೂ ಸ್ಥಳೀಯ ಪೊಲೀಸರ ಗಮನಕ್ಕೆ ಬರದ ವಿಷಯವೇನಲ್ಲ. ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟರೂ ಕ್ರಮ ಕೈಗೊಳ್ಳದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.