ಮಂಗಳೂರು ಏರ್ಪೋರ್ಟ್ ಗೆ ಬಾಂಬ್ ಬೆದರಿಕೆ 

19-08-20 08:14 pm       Mangalore Reporter   ಕರಾವಳಿ

ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಯಾರೋ ಕಿಡಿಗೇಡಿಗಳು ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆ ಮಾಡಿದ್ದಾರೆ. ಬೆದರಿಕೆ ಕರೆ ಹಿನ್ನೆಲೆಯಲ್ಲಿ ಬಜಪೆ ಪೊಲೀಸ್ ಠಾಣೆಗೆ ಏರ್ಪೋರ್ಟ್ ಅಧಿಕಾರಿಗಳು ದೂರು ನೀಡಿದ್ದಾರೆ.

ಮಂಗಳೂರು, ಆಗಸ್ಟ್ 19: ಮಂಗಳೂರಿನ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಯಾರೋ ಕಿಡಿಗೇಡಿಗಳು ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಏರ್ಪೋರ್ಟ್ ಮತ್ತು ಸುತ್ತಲ ಆವರಣದಲ್ಲಿ ತೀವ್ರ ತಪಾಸಣೆ ಕೈಗೊಳ್ಳಲಾಗಿದೆ. 

ಸಿಐಎಸ್ ಎಫ್ ಸಿಬ್ಬಂದಿ ಸೇರಿ ಸ್ಥಳೀಯ ಪೊಲೀಸರು ಸಂಪೂರ್ಣ ಏರ್ಪೋರ್ಟ್ ಆವರಣದಲ್ಲಿ ತಪಾಸಣೆ ನಡೆಸಿದ್ದಾರೆ. ಯಾವುದೇ ಶಂಕಿತ ವಸ್ತುಗಳು ಪತ್ತೆಯಾಗಿಲ್ಲ ಎಂದು ಬಜ್ಪೆ ಪೊಲೀಸರು ತಿಳಿಸಿದ್ದಾರೆ. ಮಧ್ಯಾಹ್ನದ ಸುಮಾರಿಗೆ ಬಾಂಬ್ ಬೆದರಿಕೆ ಕರೆ ಬಂದಿದ್ದು ಏರ್ಪೋರ್ಟ್ ಸಿಬಂದಿಯನ್ನು ಪೇಚಿಗೀಡು ಮಾಡಿದ್ದಾರೆ. 

ಬೆದರಿಕೆ ಕರೆ ಹಿನ್ನೆಲೆಯಲ್ಲಿ ಬಜಪೆ ಪೊಲೀಸ್ ಠಾಣೆಗೆ ಏರ್ಪೋರ್ಟ್ ಅಧಿಕಾರಿಗಳು ದೂರು ನೀಡಿದ್ದಾರೆ. ತಪಾಸಣೆ ಬಳಿಕ ಯಾವುದೇ ವಸ್ತು ಪತ್ತೆಯಾಗದ ಹಿನ್ನೆಲೆಯಲ್ಲಿ ಯಾರೋ ಕಿಡಿಗೇಡಿ ಹುಸಿ ಬೆದರಿಕೆ ಹಾಕಿದ್ದಾರೆಂದು ಪೊಲೀಸರು ಅಭಿಪ್ರಾಯ ಪಟ್ಟಿದ್ದಾರೆ. 

ಆರು ತಿಂಗಳ ಹಿಂದೆ ಆದಿತ್ಯ ರಾವ್ ಎಂಬಾತ ಇದೇ ರೀತಿ ಬಾಂಬ್ ಬೆದರಿಕೆ ಹಾಕಿದ್ದ. ಬಳಿಕ ತಪಾಸಣೆ ನಡೆಸಿದಾಗ ಏರ್ಪೋರ್ಟ್ ಆವರಣದಲ್ಲಿ ಸಜೀವ ಬಾಂಬ್ ಪತ್ತೆಯಾಗಿತ್ತು. ಪೊಲೀಸರು ಸಿಸಿಟಿವಿ ಆಧರಿಸಿ ತನಿಖೆ ಕೈಗೊಂಡಿದ್ದಾಗಲೇ ಆದಿತ್ಯ ರಾವ್ ಬೆಂಗಳೂರಿಗೆ ತೆರಳಿ ಶರಣಾಗಿದ್ದ. ಆನಂತ್ರ ಏರ್ಪೋರ್ಟ್ ಪರಿಸರದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.