ಪಂಪ್ವೆಲ್ ಬಲೆ, ಪಂಪ್ವೆಲ್ ಬಲೆ... ಪೂಕಳಂ ಪಾಡ್ಲೆ ಯೇ..!!

02-09-20 12:31 pm       Times of India - Report   ಕರಾವಳಿ

ಓಣಂ ಪ್ರಯುಕ್ತ ಯುವತಿಯರು ಪಂಪ್ ವೆಲ್ ನ ಗುಂಡಿ ಬಿದ್ದ ರಸ್ತೆಯಲ್ಲಿ ಪೂಕಳಂ ಹಾಕಿ ವ್ಯಂಗ್ಯವಾಗಿ ಓಣಂ ಆಚರಿಸುವುದರ ಮೂಲಕ ಜನರ ಹಾಗೂ ಜನ ಪ್ರತಿನಿಧಿಗಳ ಗಮನ ಸೆಳೆದಿದ್ದಾರೆ

ಮಂಗಳೂರು, ಸೆಪ್ಟಂಬರ್ 2 : ಮಂಗಳೂರಿನ ಪಂಪ್ವೆಲ್ ಫ್ಲೈ ಓವರ್ ಕಾಮಗಾರಿ ಕಂಪ್ಲೀಟ್ ಆಗೋದಕ್ಕೆ ಹತ್ತು ವರ್ಷಗಳನ್ನು ತೆಗೆದುಕೊಂಡಿದ್ದು , ಆನಂತ್ರ ಅರ್ಜೆಂಟಾಗಿ ಕಾಮಗಾರಿ ಮುಗಿಸಿ ಕೈತೊಳೆದುಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು. ಆ ಕುರಿತ ಸುದ್ದಿಗಳು ಜಾಲತಾಣದಲ್ಲಿ ಟೀಕೆ, ಟಿಪ್ಪಣಿಗಳಿಗೆ ಆಹಾರ ಆಗಿದ್ದೂ ಆಗಿತ್ತು. ಈಗ ಅಲ್ಲಿನ ಅಕ್ಕಪಕ್ಕದ ಸರ್ವಿಸ್ ರೋಡ್ ಗುಂಡಿ ಬಿದ್ದು ಗಬ್ಬೆದ್ದು ಹೋಗಿದೆ. ಇದನ್ನು ಅಣಕಿಸಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಗಮನಸೆಳೆಯಲು ಒಂದಷ್ಟು ಸಮಾನ ಮನಸ್ಕ ಮಹಿಳೆಯರು ಸೇರಿ ರಸ್ತೆ ಮಧ್ಯೆ ಹೊಸ ರೀತಿಯಲ್ಲಿ ಓಣಂ ಆಚರಿಸಿದ್ದಾರೆ. 

ಕೊರೊನಾದಿಂದಾಗಿ ಓಣಂ ಆಚರಣೆ ಮನೆಯ ಒಳಗೆ ಮಾತ್ರ ಸೀಮಿತ ಆಗಿರುವಾಗ ಈ ಮಹಿಳೆಯರು ಮಾತ್ರ ರೋಡಿಗೆ ಬಂದು ಪೂಕಳಂ ಹಾಕಿದ್ದಾರೆ. ಮಂಗಳೂರಿನ ಎಜುಕೇಶನಲ್ ಕನ್ಸಲ್ಟೆಂಟ್ ರಾಧಿಕಾ ಧೀಮಂತ್ ಸುವರ್ಣ, ನೆಲೋಫರ್, ಯುವಿಕಾ ಮತ್ತು ಸುಪ್ರೀತಾ ಹೀಗೊಂದು ಹೊಸ ಪ್ಲಾನ್ ಹಾಕಿದವರು. ರಸ್ತೆಯಲ್ಲಿ ಗುಂಡಿ ಬಿದ್ದ ಜಾಗದಲ್ಲಿ ಹೂಗಳನ್ನು ಹಾಕಿ, ಶೃಂಗರಿಸಿದ್ದಾರೆ. ಕೇರಳದ ಓಣಂ ಶೈಲಿಯ ಉಡುಗೆ ತೊಟ್ಟ ನಾರಿಯರು ಹೀಗೆ ರಸ್ತೆಯ ಮಧ್ಯೆ ನಿಂತು ಪೂಕಳಂ ಹಾಕಿದ್ದು, ಜಾಲತಾಣದಲ್ಲಿ ಮತ್ತೆ ಪಂಪ್ವೆಲ್ ಸದ್ದು ಮಾಡುವಂತಾಗಿದೆ.

ಚಿತ್ರ ಕೃಪೆ: ರವಿ ಪೊಸವಣಿಕೆ (ಟೈಮ್ಸ್ ಓಫ್ ಇಂಡಿಯಾ)