ಕುಸಿದ ಮರವೂರು ಸೇತುವೆಯ ದುರಸ್ತಿ ಪೂರ್ಣ ; ಜುಲೈ 30ರಿಂದ ಸಂಚಾರಕ್ಕೆ ಮುಕ್ತ ಸಾಧ್ಯತೆ

27-07-21 02:23 pm       Mangalore Correspondent   ಕರಾವಳಿ

ಕುಸಿದು ನಿಂತಿದ್ದ ಮರವೂರು ಸೇತುವೆಯನ್ನು ಮತ್ತೆ ಎತ್ತರಿಸುವ ಕೆಲಸ ಮಾಡಲಾಗಿದ್ದು, ದುರಸ್ತಿ ಕಾಮಗಾರಿ ಪೂರ್ಣಗೊಂಡಿದೆ. ತಾತ್ಕಾಲಿಕವಾಗಿ ವಾಹನ ಸಂಚಾರಕ್ಕೆ ಅನುವಾಗುವಂತೆ ಮಾಡಲಾಗಿದೆ.

ಮಂಗಳೂರು, ಜುಲೈ 27: ಕುಸಿದು ನಿಂತಿದ್ದ ಮರವೂರು ಸೇತುವೆಯನ್ನು ಮತ್ತೆ ಎತ್ತರಿಸುವ ಕೆಲಸ ಮಾಡಲಾಗಿದ್ದು, ದುರಸ್ತಿ ಕಾಮಗಾರಿ ಪೂರ್ಣಗೊಂಡಿದೆ. ಮಂಗಳೂರಿನಿಂದ ಬಜ್ಪೆ ಏರ್ಪೋರ್ಟ್ ಮತ್ತು ಕಟೀಲು ಕಡೆಗೆ ಸಂಪರ್ಕಿಸುವ ರಾಜ್ಯ ಹೆದ್ದಾರಿ ತಿಂಗಳ ಹಿಂದೆ ಕುಸಿದಿತ್ತು. ಇನ್ನೊಂದು ಹೊಸ ಸೇತುವೆ ನಿರ್ಮಾಣ ಸಂದರ್ಭದಲ್ಲಿ ನದಿಗೆ ಮಣ್ಣು ಹಾಕಿದ್ದರಿಂದ ಒಂದು ಭಾಗದಲ್ಲಿ ಮಾತ್ರ ನೀರು ರಭಸವಾಗಿ ಹರಿದ ಪರಿಣಾಮ ಅಲ್ಲಿನ ಹಳೆ ಸೇತುವೆಯ ಪಿಲ್ಲರ್ ಕುಸಿದು ನಿಂತಿತ್ತು. ಹೀಗಾಗಿ ಸೇತುವೆ ಎರಡು ಪಿಲ್ಲರ್ ಗಳ ನಡುವೆ ಒಂದೂವರೆ ಅಡಿಯಷ್ಟು ಸ್ಲಾಬ್ ಕುಸಿದಿತ್ತು.

ಇದೀಗ ಸೇತುವೆಯನ್ನು ಪರ್ಯಾಯ ಇಂಜಿನಿಯರಿಂಗ್ ಕೆಲಸದ ಮೂಲಕ ಎತ್ತರಿಸಲಾಗಿದ್ದು, ತಾತ್ಕಾಲಿಕವಾಗಿ ವಾಹನ ಸಂಚಾರಕ್ಕೆ ಅನುವಾಗುವಂತೆ ಮಾಡಲಾಗಿದೆ. ಪಿಡಬ್ಲ್ಯುಡಿ ಇಲಾಖೆಯ ಇಂಜಿನಿಯರುಗಳು ಮತ್ತು ಅಧಿಕಾರಿಗಳ ಸಲಹೆಯಂತೆ ಮುಗ್ರೋಡಿ ಕನ್ ಸ್ಟ್ರಕ್ಷನ್ ಕಂಪನಿಯವರೇ ಈ ಕೆಲಸವನ್ನು ಮಾಡಿದ್ದಾರೆ. ಕಾಮಗಾರಿ ಪೂರ್ಣಗೊಂಡಿದ್ದು, ಜುಲೈ 30ರಿಂದ ಲಘು ವಾಹನಗಳ ಸಂಚಾರಕ್ಕೆ ಮುಕ್ತ ಮಾಡುವ ಸಾಧ್ಯತೆಯಿದೆ.

ಜುಲೈ 29ರಂದು ಸೇತುವೆಯಲ್ಲಿ ಬಸ್ ಸೇರಿದಂತೆ ಲಘು ವಾಹನಗಳು ಸಾಗಬಹುದೇ ಎನ್ನುವ ಬಗ್ಗೆ ಪಿಡಬ್ಲ್ಯುಡಿ ಇಲಾಖೆಯ ಅಧಿಕಾರಿಗಳು ಪರೀಕ್ಷೆ ನಡೆಸಲಿದ್ದಾರೆ. ಆನಂತರವಷ್ಟೇ ವಾಹನಗಳು ಸಾಗುವುದಕ್ಕೆ ಅವಕಾಶ ನೀಡುವ ಬಗ್ಗೆ ನಿರ್ಧರಿಸಲಿದ್ದಾರೆ. ಕಳೆದ ಜೂನ್ 15ರಂದು ರಾತ್ರಿ ಭಾರೀ ಮಳೆಯ ನಡುವೆ ಸೇತುವೆಯ ಒಂದು ಭಾಗದಲ್ಲಿ ಬಿರುಕು ಬಿಟ್ಟಿದ್ದು ಕಂಡುಬಂದಿತ್ತು. ಆನಂತರ ಅಲ್ಲಿಂದ ವಾಹನ ಸಂಚಾರವನ್ನು ಕಡಿತ ಮಾಡಲಾಗಿತ್ತು. ಇದರಿಂದಾಗಿ ಬಜ್ಪೆ ವಿಮಾನ ನಿಲ್ದಾಣ, ಕಟೀಲು, ಅದ್ಯಪಾಡಿಗೆ ತೆರಳುವವರು ಸಂಚಾರಕ್ಕೆ ತೊಂದರೆಗೀಡಾಗಿದ್ದರು. ಮಂಗಳೂರಿನಿಂದ ತೆರಳುವ ಮಂದಿ ಜೋಕಟ್ಟೆ ಅಥವಾ ಕೈಕಂಬದ ಮೂಲಕ ಸುತ್ತುಬಳಸಿ ಬಜ್ಪೆಗೆ ತೆರಳಬೇಕಾಗಿತ್ತು. 


Repair and restoration work on a pillar of the Maravoor bridge built across River Phalguni on Mangaluru-Atrady state highway that had jerked a little has almost been finished. The bridge is likely to be thrown open for light motor vehicle movement from July 30 onwards.