ಉಳ್ಳಾಲಕ್ಕೆ ಐಸಿಸ್ ನಂಟು ; ಕರಾವಳಿಯಲ್ಲಿ ಎನ್ಐಎ ಕಚೇರಿ, ಸೇನಾನೆಲೆ ತೆರೆಯಲು ವಿಹಿಂಪ ಆಗ್ರಹ

05-08-21 05:50 pm       Mangaluru Correspondent   ಕರಾವಳಿ

ಉಳ್ಳಾಲಕ್ಕೆ ಐಸಿಸ್ ನಂಟು ಇರುವುದು ಕರಾವಳಿಯ ಜನತೆ ಭಯಭೀತರಾಗಿದ್ದಾರೆ.ಕರಾವಳಿಯಲ್ಲಿ ಶಾಶ್ವತ ಎನ್ಐಎ ಕಚೇರಿ ಮತ್ತು ಸೇನಾ ನೆಲೆ ಸ್ಥಾಪಿಸಬೇಕೆಂದು ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ಒತ್ತಾಯಿಸಿದ್ದಾರೆ. 

ಉಳ್ಳಾಲ, ಆ.5: ಉಳ್ಳಾಲದ ಮಾಜಿ ಶಾಸಕ ಬಿ.ಎಂ. ಇದಿನಬ್ಬ ಅವರ ಮಗನ ಮನೆಗೆ ನಿನ್ನೆ ಎನ್ಐಎ ದಾಳಿ ನಡೆಸಿ ಐಸಿಸ್ ಉಗ್ರರ ನಂಟಿನ ಆರೋಪದಲ್ಲಿ ಇದಿನಬ್ಬ ಅವರ ಮೊಮ್ಮಗನನ್ನ ಬಂಧಿಸಿದ್ದು ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಶಾಶ್ವತ ಎನ್ಐಎ ಕಚೇರಿ ಮತ್ತು ಸೇನಾ ನೆಲೆ ಸ್ಥಾಪಿಸಬೇಕೆಂದು ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ಒತ್ತಾಯಿಸಿದ್ದಾರೆ. 

ತೊಕ್ಕೊಟ್ಟಿನಲ್ಲಿ ಅವರು ಪತ್ರಿಕಾಗೋಷ್ಠಿಯಲ್ಲಿ ಈ ಆಗ್ರಹ  ಮಾಡಿದ್ದಾರೆ. ಉಳ್ಳಾಲಕ್ಕೆ ಐಸಿಸ್ ನಂಟು ಇರುವುದು ನಿನ್ನೆಯ ವಿದ್ಯಮಾನದಲ್ಲಿ ಜಗಜ್ಜಾಹೀರಾಗಿದ್ದು, ಇದರಿಂದ ಕರಾವಳಿಯ ಜನತೆ ಭಯಭೀತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಮಂಗಳೂರಿನಲ್ಲಿ ಅತೀ ಶೀಘ್ರದಲ್ಲಿ ಎನ್ಐಎ ಶಾಶ್ವತ ಕಚೇರಿ ಮತ್ತು ಸೇನಾ ನೆಲೆ ತೆರೆಯುವಂತೆ ಶರಣ್ ಪಂಪ್ವೆಲ್ ಆಗ್ರಹಿಸಿದ್ದಾರೆ. 

ಸಿರಿಯಾ ಐಸಿಸ್ ಉಗ್ರ ಸಂಘಟನೆಯ ಜೊತೆ ನಂಟಿನ ಆರೋಪದಲ್ಲಿ ನಿನ್ನೆ ದೇಶಾದ್ಯಂತ ಶಂಕಿತರ ಮನೆಗೆ ದಾಳಿ ನಡೆದಿದೆ. ಉಳ್ಳಾಲದ ಮಾಜಿ ಶಾಸಕ ಬಿ.ಎಂ. ಇದಿನಬ್ಬ ಅವರ ಮಗ ಅಬ್ದುರ್ರಹಿಮಾನ್ ಬಾಷ ಅವರ ಮಾಸ್ತಿಕಟ್ಟೆಯಲ್ಲಿರುವ ಮನೆಗೂ ನಿನ್ನೆ NIA ತಂಡ ದಾಳಿ ನಡೆಸಿ ದಿನವಿಡೀ ತನಿಖೆ ನಡೆಸಿತ್ತು. ಅಲ್ಲದೆ ಐಸಿಸ್ ಉಗ್ರ ಸಂಘಟನೆಗಾಗಿ ಹಣ ಸಂಗ್ರಹಿಸುತ್ತಿದ್ದ ಆರೋಪದಡಿ ಬಾಷ ಅವರ ಕಿರಿಯ ಮಗ ಅಮ್ಮರ್ ಅಬ್ದುಲ್ ರಹ್ಮಾನ್ ನನ್ನ ವಶಕ್ಕೆ ಪಡೆದು ತೆರಳಿದ್ದರು. ಬಂಧಿತ ಆರೋಪಿ ಅಮ್ಮರ್ ರಹ್ಮಾನ್ ಕುರಿತಾಗಿ ವಿಶೇಷವಾದ ತನಿಖೆ ನಡೆಸಬೇಕಿದೆ. ಆತನ ಜೊತೆ ಕೈಜೋಡಿಸಿದವರು, ಆತನ ನಂಟಿನ ಕುರಿತು ಪತ್ತೆ ಹಚ್ಚಬೇಕು. ಯಾಕೆಂದರೆ ಕಳೆದ ಕೆಲವು ವರ್ಷಗಳಿಂದ ದೇಶದ ಯಾವುದೇ ಮೂಲೆಯಲ್ಲಿ ಬಂಧನವಾದರೂ ಆ ಉಗ್ರರ ಜೊತೆಗೆ ಮಂಗಳೂರಿನ ನಂಟು ಕಂಡುಬಂದಿದೆ. ಭಟ್ಕಳ  ಸಹೋದರರು ಕೂಡ ಇಲ್ಲಿಯ ನಂಟು ಹೊಂದಿದ್ದರು. ರಿಯಾಜ್ ಭಟ್ಕಳ್ ತೊಕ್ಕೊಟ್ಟಿನಲ್ಲಿ ಸಿಕ್ಕಿಬಿದ್ದ ಸಂದರ್ಭ ಬಾಂಬ್ ತಯಾರಿಯಲ್ಲಿ ತೊಡಗಿಸಿಕೊಂಡ ವ್ಯಕ್ತಿಯೊಬ್ಬನನ್ನು ಮುಕ್ಕಚ್ಚೇರಿಯಿಂದ  ಬಂಧಿಸಲಾಗಿತ್ತು ಎಂದರು. 

ಜಿಲ್ಲೆಗೆ ಈ ವಿದ್ಯಮಾನವು ಕಪ್ಪು ಚುಕ್ಕೆಯಾಗಿದ್ದು ಈ ಪ್ರಕರಣವನ್ನು ರಾಜ್ಯ ಮತ್ತು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಬೇಕೆಂದು ಶರಣ್ ಆಗ್ರಹಿಸಿದರು. ಕಳೆದ ಹಲವು ವರುಷಗಳಿಂದ ಪಕ್ಕದ ರಾಜ್ಯ ಕೇರಳದ ಬಹುತೇಕ ಮುಸ್ಲಿಂ ಯುವಕರು ಸಿರಿಯಾ ಐಸಿಸ್ ಸಂಘಟನೆಗೆ ಸೇರಿದ್ದು ಭಯೋತ್ಪಾದನಾ ಚಟುವಟಿಕೆಗಳಲ್ಲಿ ತಮ್ಮನ್ನ ತೊಡಗಿಸಿದ್ದು ಕಂಡುಬಂದಿತ್ತು. ಕಾಸರಗೋಡು ಜಿಲ್ಲೆಯ ಅನೇಕ ಯುವಕರು ಉಗ್ರ ಚಟುವಟಿಕೆಗಾಗಿ ಪ್ರಾಣ ತೆತ್ತಿರುವುದು ಸಾಬೀತಾಗಿದೆ. ಇತ್ತೀಚೆಗೆ ಮಂಗಳೂರಲ್ಲೂ ಉಗ್ರ ಚಟುವಟಿಕೆಗಳನ್ನ ಬೆಂಬಲಿಸಿ ಗೋಡೆ ಬರಹ ಬರೆದಿದ್ದ ಮೂರು ಶಂಕಿತ ಉಗ್ರರ ಬಂಧನವಾಗಿತ್ತು. ಇದೀಗ ಉಳ್ಳಾಲವು ಮತ್ತೆ ಉಗ್ರರ ಹಾಟ್ ಸ್ಪಾಟ್ ಆಗಿದೆ. ಹೀಗಾಗಿ ಇಲ್ಲಿ ಎನ್ಐಎ ಶಾಶ್ವತ ಕಚೇರಿ ಅತ್ಯಗತ್ಯ ಎಂದಿದ್ದಾರೆ.

ಉಳ್ಳಾಲದ ಶಾಸಕ ಯು.ಟಿ.ಖಾದರ್ ಸೇರಿದಂತೆ ಕಾಂಗ್ರೆಸ್ ನಾಯಕರ ದೇಶ ವಿರೋಧಿಗಳ ಬಗ್ಗೆ ಮೃದು ಧೋರಣೆಯಿಂದಾಗಿ ಜಿಲ್ಲೆಯಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಜಾಸ್ತಿಯಾಗುತ್ತಿದೆ. ಓಟ್ ಬ್ಯಾಂಕ್ ರಾಜಕೀಯವನ್ನು ದೇಶದ್ರೋಹಿಗಳು ತಮ್ಮ ಸ್ವಾರ್ಥಕ್ಕೋಸ್ಕರ ಬಳಸಿ ಜಿಲ್ಲೆಯಲ್ಲಿ ಅರಾಜಕತೆ ಸೃಷ್ಟಿ ಮಾಡಲು ಸಂಚು ರೂಪಿಸಿದ್ದಾರೆಂದು ಶರಣ್ ಪಂಪ್ವೆಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಉಗ್ರ ಚಟುವಟಿಕೆಯಲ್ಲಿ ಸಂಪಕರ್ದಲ್ಲಿರುವವರ ಬಗ್ಗೆ ಪೊಲೀಸರು ನಿಗಾ ವಹಿಸಬೇಕು. ನಮ್ಮ ಸಂಘಟನೆಯು ಗ್ರಾಮ, ಗ್ರಾಮಗಳಲ್ಲಿ ತಂಡ ರಚನೆ ಮಾಡಿ ಇಂತವರ ಬಗ್ಗೆ ಮಾಹಿತಿ ಕಲೆ ಹಾಕುವ ಕಾರ್ಯ ನಡೆಸುತ್ತದೆ ಎಂದರು.
ನಿನ್ನೆ NIA ದಾಳಿ ನಡೆಸಿದ ಉಳ್ಳಾಲದ ಬಾಷಾ ಅವರ ಮನೆಯ ಸೊಸೆ ಮತಾಂತರಗೊಂಡ ಹಿಂದು ಯುವತಿಯಾಗಿದ್ದು ಆಕೆಯನ್ನು ಉಗ್ರ ಚಟುವಟಿಕೆಗೆ ಬಳಸುತ್ತಿರುವುದರ ಬಗ್ಗೆ ತಿಳಿದು ಬಂದಿದೆ. ಅಲ್ಲದೆ, ಆ ಮತಾಂತರಗೊಂಡ ಹಿಂದು ಯುವತಿ ಶಾರ್ಜಾಕ್ಕೆ ತೆರಳಿ ಶರೀಯತನ್ನು ಅಧ್ಯಯನ ಮಾಡಿರುವುದರ ಬಗ್ಗೆ ಅರಿವಿಗೆ ಬಂದಿದೆ. ಈ ಕುಟುಂಬದ ಮೇಲೆ ಹೆಚ್ಚಿನ ನಿಗಾ ಇರಿಸುವಂತೆ ಮಂಗಳೂರಿನ ಪೊಲೀಸ್ ಆಯುಕ್ತರಲ್ಲಿ ಮನವಿ ಮಾಡುವುದಾಗಿ ಹೇಳಿದರು. 

ವಿಹಿಂಪ ಜಿಲ್ಲಾಧ್ಯಕ್ಷ ಗೋಪಾಲ ಕುತ್ತಾರು, ಜಿಲ್ಲಾ ಸಹ ಕಾರ್ಯದರ್ಶಿ ರವಿ ಅಸೈಗೋಳಿ, ಬಜರಂಗದಳ ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ, ಉಳ್ಳಾಲ ನಗರ ಪ್ರಖಂಡ ಸಂಚಾಲಕ ಅರ್ಜುನ್ ಮಾಡೂರು, ವಿ.ಹಿಂ.ಪ ಉಳ್ಳಾಲ ನಗರ ಪ್ರಖಂಡ ಅಧ್ಯಕ್ಷ ನಾರಾಯಣ ಕುಂಪಲ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.


VHP demands for NIA office in Mangalore after NIA raids house in ullal and arresed one person.