ಮಂಗಳೂರಿನಲ್ಲಿ ಶಂಕಿತ ಡ್ರಗ್ ಪೆಡ್ಲರ್ ಪರೇಡ್ ; ದಂಧೆ ಮುಂದುವರಿಸಿದ್ರೆ ಗೂಂಡಾ ಏಕ್ಟ್ - ಕಮಿಷನರ್ ವಾರ್ನ್ 

07-09-20 03:00 pm       Mangalore Reporter   ಕರಾವಳಿ

ಮಂಗಳೂರಿನಲ್ಲಿ ಇಂದು ಡ್ರಗ್ ಸೇವನೆ, ವಹಿವಾಟು ನಡೆಸುವ ಹಿನ್ನೆಲೆ ಇದ್ದವರನ್ನು ಕರೆಸಿ ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ಖುದ್ದಾಗಿ ವಾರ್ನ್ ಮಾಡಿದ್ದಾರೆ.

ಮಂಗಳೂರು, ಸೆಪ್ಟೆಂಬರ್ 8: ಸ್ಯಾಂಡಲ್ ವುಡ್ ಡ್ರಗ್ ನಂಟು ರಾಜ್ಯದಾದ್ಯಂತ ವ್ಯಾಪಕ ಆಗಿರುವ ಸೂಚನೆ ಕಂಡುಬರುತ್ತಿದ್ದಂತೆಯೇ ಪೊಲೀಸರು ಎಲರ್ಟ್ ಆಗಿದ್ದಾರೆ. ಮಂಗಳೂರಿನಲ್ಲಿ ಇಂದು ಡ್ರಗ್ ಸೇವನೆ, ವಹಿವಾಟು ನಡೆಸುವ ಹಿನ್ನೆಲೆ ಇದ್ದವರನ್ನು ಕರೆಸಿ ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ಖುದ್ದಾಗಿ ವಾರ್ನ್ ಮಾಡಿದ್ದಾರೆ. ಇನ್ಮುಂದೆ ಡ್ರಗ್ ಪೆಡ್ಲರ್ ಆಗಿರೋದು ಕಂಡುಬಂದರೆ ಗೂಂಡಾ ಏಕ್ಟಿನಡಿ ಬಂಧಿಸಿ ಗಡೀಪಾರು ಮಾಡುವ ಎಚ್ಚರಿಕೆ ನೀಡಿದ್ದಾರೆ. ‌

ಪೊಲೀಸ್ ಗ್ರೌಂಡಿನಲ್ಲಿ ನಡೆದ ಪರೇಡ್ ನಲ್ಲಿ ನೂರಕ್ಕೂ ಹೆಚ್ಚು ಮಂದಿ ಸೇರಿದ್ದರು. ರೌಡಿಸಂ, ಡ್ರಗ್ ಸೇವನೆ ಮತ್ತು ಡ್ರಗ್ಸ್ ವಹಿವಾಟು ನಡೆಸುವ ಹಿನ್ನೆಲೆ ಇದ್ದು ಪೊಲೀಸ್ ಕೇಸು ಎದುರಿಸುತ್ತಿದ್ದವರನ್ನು ನೋಟೀಸ್ ನೀಡಿ ಕರೆಸಲಾಗಿತ್ತು. ಒಬ್ಬೊಬ್ಬರನ್ನೇ ಕರೆದು ಎಚ್ಚರಿಕೆ ನೀಡಿದ ಕಮಿಷನರ್, ಬಳಿಕ ಮಾಧ್ಯಮದ ಜೊತೆ ಮಾತನಾಡಿದ್ರು. 

ಬೆಂಗಳೂರು ಡ್ರಗ್ ಪ್ರಕರಣ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಡ್ರಗ್ಸ್ ವಹಿವಾಟು ಮೇಲೆ ನಿಗಾ ಇಟ್ಟಿದ್ದೇವೆ. ಅಂತಾರಾಜ್ಯ ಸಾಗಾಟ ಜಾಲ ಮತ್ತು ಪೂರೈಕೆ ಮಾಡುತ್ತಿರುವ ಬಗ್ಗೆ ಗಂಭೀರವಾಗಿ ಪರಿಗಣಿಸಿದ್ದೇವೆ. ಇನ್ಮುಂದೆ ಡ್ರಗ್ ಸೇವಿಸಿ ಅಥವಾ ವಹಿವಾಟು ಮಾಡೋದು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ತೀವಿ. ಪದೇ ಪದೇ ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದರೆ ಅಂಥವರ ವಿರುದ್ಧ ಗೂಂಡಾ ಏಕ್ಟ್ ಪ್ರಯೋಗ ಮಾಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ. 

ಗೋವಾ, ಆಂಧ್ರಪ್ರದೇಶ, ಮಹಾರಾಷ್ಟ್ರ, ಕೇರಳದಿಂದ ಡ್ರಗ್ ಸಪ್ಲೈ ಇರೋದು ಇಲಾಖೆಯ ಗಮನಕ್ಕೆ ಬಂದಿದೆ. ಡ್ರಗ್ ಸರಬರಾಜು ಸೀರಿಯಸ್ ಇಶ್ಯು ಆಗಿದ್ದು ನಿಗಾ ಇಡೋದಕ್ಕೆ ಕ್ರಮ ತಗೊಂಡಿದ್ದೇವೆ ಎಂದು ಹೇಳಿದರು. 

ಇನ್ನು ಬೆಂಗಳೂರು ಡ್ರಗ್ಸ್ ಪ್ರಕರಣ ಸಂಬಂಧಿಸಿ ಮಂಗಳೂರಿನಲ್ಲಿ ಯಾರನ್ನಾದ್ರೂ ವಶಕ್ಕೆ ತಗೊಂಡಿದ್ದೀರಾ ಎಂಬ ಪ್ರಶ್ನೆಗೆ, ಅಂಥ ಯಾವುದೇ ವಿಚಾರಣೆ ನಡೆದಿಲ್ಲ. ಬೆಂಗಳೂರು ಪ್ರಕರಣ ಸಂಬಂಧಿಸಿ ಅಲ್ಲಿನ ಪೊಲೀಸರೇ ತನಿಖೆ ನಡೆಸುತ್ತಾರೆ. ಆ ಬಗ್ಗೆ ನಾವೇನು ಹೇಳೋಕೆ ಬರಲ್ಲ ಎಂದಿದ್ದಾರೆ.

Join our WhatsApp group for latest news updates