ಡೀಸಿ ಆದೇಶಕ್ಕೆ ಹೈಕೋರ್ಟ್ ತಡೆ ; ಮಹಾನಗರ ಪಾಲಿಕೆ - ಸೆಂಟ್ರಲ್ ಮಾರುಕಟ್ಟೆ ಜಟಾಪಟಿಯಲ್ಲಿ ವ್ಯಾಪಾರಸ್ಥರಿಗೆ ಜಯ ! 

22-09-20 12:21 am       Mangaluru Correspondant   ಕರಾವಳಿ

ಎರಡು ದಿನಗಳ ಹಿಂದೆ ಹೈಕೋರ್ಟ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ವಿಧಿಸಿದ್ದ ವ್ಯಾಪಾರ ನಿಷೇಧ ಆದೇಶಕ್ಕೆ ತಡೆಯಾಜ್ಞೆ ವಿಧಿಸಿದ್ದಲ್ಲದೆ ಎಪಿಎಂಸಿ ಕಾಯ್ದೆ ಉಲ್ಲಂಘಿಸಿ ಮಾರುಕಟ್ಟೆ ವ್ಯಾಪರಸ್ಥರನ್ನು ಬೈಕಂಪಾಡಿ ಪ್ರಾಂಗಣಕ್ಕೆ ಸ್ಥಳಾಂತರಿಸಲು ಮಾಡಿದ್ದ ಮಹಾನಗರ ಪಾಲಿಕೆಯ ಹುನ್ನಾರಕ್ಕೆ ಛೀಮಾರಿ ಹಾಕಿದೆ. 

ಮಂಗಳೂರು, ಸೆಪ್ಟಂಬರ್ 22: ಕೊರೊನಾ ಲಾಕ್ಡೌನ್, ಜಿಲ್ಲಾಧಿಕಾರಿಗಳ ನಿಷೇಧ, ಮಂಗಳೂರು ಮಹಾನಗರ ಪಾಲಿಕೆಯೊಂದಿಗಿನ ಜಟಾಪಟಿ ಇವೆಲ್ಲ ಕಗ್ಗಂಟಿನ ಬಳಿಕ ಮಂಗಳೂರಿನ ಸೆಂಟ್ರಲ್ ಮಾರುಕಟ್ಟೆ ವ್ಯಾಪಾರಸ್ಥರು ಕೊನೆಗೂ ಹೈಕೋರ್ಟಿನಲ್ಲಿ ತಮ್ಮ ಪರವಾಗಿ ಜಯ ಸಾಧಿಸಿಕೊಂಡು ಬಂದಿದ್ದಾರೆ. ಎರಡು ದಿನಗಳ ಹಿಂದೆ ಹೈಕೋರ್ಟ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ವಿಧಿಸಿದ್ದ ವ್ಯಾಪಾರ ನಿಷೇಧ ಆದೇಶಕ್ಕೆ ತಡೆಯಾಜ್ಞೆ ವಿಧಿಸಿದ್ದಲ್ಲದೆ ಎಪಿಎಂಸಿ ಕಾಯ್ದೆ ಉಲ್ಲಂಘಿಸಿ ಮಾರುಕಟ್ಟೆ ವ್ಯಾಪರಸ್ಥರನ್ನು ಬೈಕಂಪಾಡಿ ಪ್ರಾಂಗಣಕ್ಕೆ ಸ್ಥಳಾಂತರಿಸಲು ಮಾಡಿದ್ದ ಮಹಾನಗರ ಪಾಲಿಕೆಯ ಹುನ್ನಾರಕ್ಕೆ ಛೀಮಾರಿ ಹಾಕಿದೆ. 

ಕೊರೊನಾ ಲಾಕ್ಡೌನ್ ಆರಂಭದಲ್ಲಿ ಸೋಂಕು ಹರಡುವ ಭಯದಿಂದಾಗಿ ಮಾರುಕಟ್ಟೆ ವ್ಯಾಪಾರ ನಿಷೇಧಿಸಲಾಗಿತ್ತು. ಅಲ್ಲದೆ, ಹೊರಭಾಗದಿಂದ ಬರುವ ತರಕಾರಿ ವಿಲೇವಾರಿ ಪ್ರಕ್ರಿಯೆಯನ್ನು ಬೈಕಂಪಾಡಿಯ ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರ ಮಾಡಲಾಗಿತ್ತು. ಇದೇ ನೆಪವೊಡ್ಡಿ ಮಹಾನಗರ ಪಾಲಿಕೆ ಅಧಿಕಾರಿಗಳ ಮೂಲಕ ಕೇಂದ್ರ ಮಾರುಕಟ್ಟೆಯನ್ನು ಶಾಶ್ವತವಾಗಿ ಮುಚ್ಚಿ, ಹಳೇ ಕಟ್ಟಡವನ್ನು ಕೆಡವಿ ಸ್ಮಾರ್ಟ್ ಸಿಟಿ ಯೋಜನೆಯಡಿ ಹೊಸ ಮಾರುಕಟ್ಟೆ ಸಂಕೀರ್ಣ ಸ್ಥಾಪನೆಗೆ ಪ್ಲಾನ್ ಮಾಡಲಾಗಿತ್ತು. ಇದನ್ನು ಅರಿತ ಮಾರುಕಟ್ಟೆಯ 140 ಅಂಗಡಿಗಳ ವ್ಯಾಪಾರಸ್ಥರು ಕೋರ್ಟ್ ಮೆಟ್ಟಿಲೇರಿದ್ದರು. ಕೊರೊನಾ ಲಾಕ್ಡೌನ್ ಮುಗಿದರೂ, ವ್ಯಾಪಾರಕ್ಕೆ ಅವಕಾಶ ನೀಡದೆ ಆರು ಎಕ್ರೆ ವ್ಯಾಪ್ತಿಯಲ್ಲಿ ಮಾರುಕಟ್ಟೆಯನ್ನು ಪೂರ್ತಿಯಾಗಿ ನೆಲಸಮಗೊಳಿಸಲು ಪ್ಲಾನ್ ಮಾಡಿದ್ದನ್ನು ಪ್ರಶ್ನಿಸಿದ್ದರು.

ಕೋಳಿ ಮತ್ತು ಮಟನ್ ಮಾರುಕಟ್ಟೆ ಇರುವ 50 ವರ್ಷಗಳ ಹಳೆಯ ಕಟ್ಟಡದಲ್ಲಿ ವ್ಯಾಪಾರ ನಡೆಸಬಾರದು, ಕಟ್ಟಡದ ಆಯಸ್ಸು ಮುಗಿದಿದ್ದು ಹೊಸತಾಗಿ ಮಾಡಬೇಕು ಎಂದು ಹತ್ತು ವರ್ಷಗಳ ಹಿಂದೆ ಮಹಾನಗರ ಪಾಲಿಕೆ ನಿರ್ಧರಿಸಿತ್ತು. ಅದೇ ನಿರ್ಣಯ ಮುಂದಿಟ್ಟು ಹಳೆ ಕಟ್ಟಡ ಮತ್ತು ತರಕಾರಿ ವ್ಯಾಪಾರಸ್ಥರು ಇರುವ 35 ವರ್ಷ ಹಿಂದೆ ನಿರ್ಮಾಣಗೊಂಡ ಹೊಸ ಕಟ್ಟಡವನ್ನು 'ಅವಧಿ ಮುಗಿದ' ಕಾರಣಕ್ಕೆ ನೆಲಸಮಗೊಳಿಸಿ ಹೊಸತಾಗಿ ಆಧುನಿಕ ಮಾದರಿಯಲ್ಲಿ ಮಾರುಕಟ್ಟೆ ನಿರ್ಮಿಸಲು ಯೋಜನೆ ತಯಾರಿಸಿದ್ದರು. ಅದಕ್ಕೆ ಸಂಸದರು, ಶಾಸಕರೆಲ್ಲ ಒಪ್ಪಿಗೆ ಸೂಚಿಸಿದ್ದಲ್ಲದೆ ಸದ್ಯಕ್ಕೆ ಇಡೀ ಮಾರುಕಟ್ಟೆಯನ್ನು ಎಪಿಎಂಸಿಗೆ ವರ್ಗಾಯಿಸಲು ನಿರ್ಧಾರ ತೆಗೆದುಕೊಂಡಿದ್ದರು. ಆದರೆ, ಈ ವಿಚಾರ ಹೈಕೋರ್ಟ್ ಹೋಗಿದ್ದಲ್ಲದೆ ಮಹಾನಗರ ಪಾಲಿಕೆಯ ವಿರುದ್ಧ ವ್ಯಾಪಾರಸ್ಥರು ಬೇರೆಯದ್ದೇ ವಾದ ಮಂಡಿಸಿದ್ದಾರೆ. 

ಮಂಗಳೂರಿನ ಸೆಂಟ್ರಲ್ ಮಾರುಕಟ್ಟೆಯಲ್ಲಿ 140 ವ್ಯಾಪಾರದ ಅಂಗಡಿಗಳಿದ್ದು ಅದರಲ್ಲಿ ತರಕಾರಿ ವ್ಯಾಪಾರ ಹೊರತುಪಡಿಸಿ ನೂರಕ್ಕೂ ಹೆಚ್ಚು ಮಳಿಗೆಗಳಿವೆ‌. ಬಟ್ಟೆಯಿಂದ ತೊಡಗಿ, ಪ್ಲಾಸ್ಟಿಕ್ ಸಾಮಾನುಗಳು, ಕಬ್ಬಿಣ, ಸ್ಟೀಲ್ ಸಾಮಾನುಗಳು, ಜೀನಸು ವ್ಯಾಪಾರಸ್ಥರು, ಆಟಿಕೆಗಳು, ಹಳೆಯ ಗುಜರಿ ಸಾಮಾನುಗಳು ಹೀಗೆ ತರಕಾರಿ ಹೊರತಾದ ವ್ಯಾಪಾರಿಗಳದ್ದೇ ದೊಡ್ಡ ಸಂತೆಯಿದೆ. ಎಪಿಎಂಸಿ ಕಾಯ್ದೆಯಡಿ ತರಕಾರಿ, ಕೃಷಿ ವ್ಯಾಪಾರ ಹೊರತುಪಡಿಸಿ ಉಳಿದ ಯಾವುದನ್ನೂ ಅದರ ಪ್ರಾಂಗಣಕ್ಕೆ ಸ್ಥಳಾಂತರ ಮಾಡುವಂತಿಲ್ಲ. ಇದೇ ವಾದ ಮುಂದಿಟ್ಟ ವ್ಯಾಪಾರಸ್ಥರು ತಮಗೆ ಆರು ತಿಂಗಳ ಲಾಕ್ಡೌನ್ ಸಮಯದಲ್ಲಿ ದಿನಕ್ಕೆ ಮೂರು ಸಾವಿರ ರೂ.ನಂತೆ ಮಹಾನಗರ ಪಾಲಿಕೆ ಪರಿಹಾರ ನೀಡಬೇಕೆಂದು ಕೇಳಿದ್ದಾರೆ. ಅಲ್ಲದೆ, ವ್ಯಾಪಾರಕ್ಕೆ ಸಾಲ ಮಾಡಿದ್ದು , ಸಾಲಕ್ಕೆ ಸಾಮಗ್ರಿಗಳನ್ನು ಕೊಟ್ಟಿದ್ದೆಲ್ಲವೂ ಈಗ ಕೋಟ್ಯಂತರ ನಷ್ಟ ಆಗುವಂತಾಗಿದೆ. ಇದರಿಂದಾಗಿ ನಷ್ಟವನ್ನು ಮಹಾನಗರ ಪಾಲಿಕೆಯೇ ಭರಿಸಬೇಕೆಂದು ಮನವಿ ಮಾಡಿದ್ದಾರೆ. ಅಲ್ಲದೆ, ಈ ಆರು ತಿಂಗಳಲ್ಲಿ ಇಷ್ಟೂ  ಅಂಗಡಿ ಮಳಿಗೆಗಳಿಗೆ ಮಹಾನಗರ ಪಾಲಿಕೆ ಪರ್ಯಾಯ ವ್ಯವಸ್ಥೆ ಮಾಡಿಲ್ಲವೆಂದು ತಗಾದೆ ಎತ್ತಿದ್ದು ಕೋರ್ಟಿನಲ್ಲಿ ವ್ಯಾಪಾರಸ್ಥರಿಗೆ ಜಯ ಸಿಗುವಂತೆ ಮಾಡಿದೆ. 

ನೂರಕ್ಕೂ ಹೆಚ್ಚು ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಏನು ಮಾಡುತ್ತೀರಿ ಎಂದು ಕೋರ್ಟ್ ಮಹಾನಗರ ಪಾಲಿಕೆಯನ್ನು ಪ್ರಶ್ನೆ ಮಾಡಿದೆ. ಇದಕ್ಕೆ ಪಾಲಿಕೆಯಿಂದ ಉತ್ತರ ನೀಡಿಲ್ಲ. ಅಲ್ಲದೆ, ದಿನಕ್ಕೆ ಮೂರು ಸಾವಿರದ ಪರಿಹಾರ ನೀಡುವ ವಿಚಾರವನ್ನೂ ಮುಂದಿನ ಆದೇಶದಲ್ಲಿ ತೀರ್ಪು ನೀಡುವುದಾಗಿ ಕೋರ್ಟ್ ಹೇಳಿದೆ. ಸದ್ಯಕ್ಕೆ ಜಿಲ್ಲಾಧಿಕಾರಿಗಳ ಆದೇಶ ರದ್ದು ಆಗಿರುವುದರಿಂದ ಸೋಮವಾರ ವ್ಯಾಪಾರಸ್ಥರು ಸಾಮಾಜಿಕ ಕಾರ್ಯಕರ್ತ ಎಂ.ಜಿ ಹೆಗಡೆ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಕಮಿಷನರನ್ನು ಭೇಟಿ ಮಾಡಿದ್ದಾರೆ. ಜಟಾಪಟಿ ಮತ್ತು ವಾಸ್ತವ ಮನವರಿಕೆ ಮಾಡಿದ್ದಾರೆ. ಅಲ್ಲದೆ, ಮಂಗಳವಾರದಿಂದಲೇ ವ್ಯಾಪಾರಕ್ಕೆ ಅವಕಾಶ ನೀಡುವಂತೆ ಕೇಳಿಕೊಂಡಿದ್ದಾರೆ. ಇದೇ ವೇಳೆ, ಡೀಸಿ ಆದೇಶಕ್ಕೆ ಕೋರ್ಟ್ ತಡೆ ಕೊಟ್ಟಿರುವ ಹಿನ್ನೆಲೆಯಲ್ಲಿ ಸೆ.22ರಿಂದ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸಲು ನಿರ್ಧರಿಸಿದ್ದಾಗಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಹಸನ್ ಕೆಮ್ಮಿಂಜೆ ತಿಳಿಸಿದ್ದಾರೆ.

Join our WhatsApp group for latest news updates