ಟೂರ್ನಿಯಲ್ಲಿ ವಿಶೇಷ 'ಗೋಲ್ಡ್‌ ಬ್ಯಾಟ್' ಬಳಸಲಿರುವ ವಿರಾಟ್ ಕೊಹ್ಲಿ!

24-08-22 02:56 pm       Source: Vijayakarnataka   ಕ್ರೀಡೆ

ಬಹುನಿರೀಕ್ಷಿತ ಎಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿ ಆರಂಭಕ್ಕೆ ಇನ್ನು ಕೆಲವೇ ದಿನಗಳು ಮಾತ್ರವೇ ಬಾಕಿಯಿದೆ. ಟೂರ್ನಿಯಲ್ಲಿ ಶ್ರೀಲಂಕಾ ಮತ್ತು ಅಫಘಾನಿಸ್ತಾನ ನಡುವೆ ಆಗ...

ಬೆಂಗಳೂರು: ಕಳೆದ ಮೂರು ವರ್ಷಗಳಿಂದ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅವರ ಬ್ಯಾಟ್‌ ಸದ್ದು ಮಾಡಿಲ್ಲ. ವೃತ್ತಿಬದುಕಿನ ಹೀನಾಯ ಲಯದಲ್ಲಿರುವ ವಿರಾಟ್‌, ಇದೀಗ ಏಷ್ಯಾ ಕಪ್‌ 2022 ಟೂರ್ನಿಯಲ್ಲಿ ಭಾರತ ತಂಡಕ್ಕೆ ಕಮ್‌ಬ್ಯಾಕ್‌ ಮಾಡಲಿದ್ದಾರೆ. ಅದರಲ್ಲೂ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರು ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಆಡುತ್ತಿದ್ದು, ಈ ಪಂದ್ಯದಲ್ಲಿ ಭಾರತ ತಂಡ ಪರ ವಿರಾಟ್‌ ಕೊಹ್ಲಿ ಆಡಿದ್ದೇ ಆದರೆ ಅದು ಅವರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ವೃತ್ತಿಬದುಕಿನ 100ನೇ ಪಂದ್ಯವಾಗಲಿದೆ.

ವಿರಾಟ್‌, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 100 ಪಂದ್ಯಗಳನ್ನು ಆಡಿದರೆ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ 100 ಪಂದ್ಯಗಳನ್ನು ಆಡಿದ ವಿಶ್ವದ ಎರಡನೇ ಹಾಗೂ ಭಾರತದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ. ಈ ವಿಶೇಷ ಪಂದ್ಯ ಸಲುವಾಗಿ ಭಾರತ ತಂಡದ ಮಾಜಿ ನಾಯಕ ವಿಶೇಷ ಬ್ಯಾಟ್‌ ಬಳಕೆ ಮಾಡಲು ಮುಂದಾಗಿದ್ದಾರೆ. ರನ್‌ ಮಷೀನ್‌ ಬಳಕೆ ಮಾಡುತ್ತಿದ್ದ ಕೆಂಪು ಬಣ್ಣದ ಎಮ್‌ಆರ್‌ಎಫ್‌ ಸ್ಟಿಕ್ಸರ್‌ ಇದ್ದ ಬ್ಯಾಟ್‌ ಬದಲು, ಗೋಲ್ಡ್‌ ಎಡಿಷನ್‌ ಬ್ಯಾಟ್‌ ಬಳಕೆ ಮಾಡಲಿದ್ದಾರೆ ಎಂದು ವರದಿಗಳಾಗಿವೆ. ಹೊಸ ಬ್ಯಾಟ್‌ನ ಫೋಟೊಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಸದ್ದು ಮಾಡಿವೆ.

Virat Kohli will use MRF Gold Wizard bat for Asia Cup 2022, shares glimpse  of it; Watch

ಭಾರತದ ಅತ್ಯಂತ ಜನಪ್ರಿಯ ಟೈರ್‌ ತಯಾರಿಕೆ ಸಂಸ್ಥೆ ಎಂಆರ್‌ಎಫ್‌, ವಿರಾಟ್‌ ಕೊಹ್ಲಿ ಅವರ ಬ್ಯಾಟ್‌ ಪ್ರಾಯೋಜಕತ್ವವನ್ನು ಹೊಂದಿದೆ. ಇದೀಗ 22 ಸಾವಿರ ರೂ. ಬೆಲೆ ಬಾಳುವ ಗೋಲ್ಡ್‌ ಎಡಿಷನ್‌ ಎಂಆರ್‌ಎಫ್‌ ಬ್ಯಾಟ್‌ನೊಂದಿಗೆ ಮೊದಲ ಬಾರಿ ಆಡಲು ವಿರಾಟ್‌ ಮುಂದಾಗಿದ್ದಾರೆ. ತಮ್ಮ ನೂರನೇ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ವಿರಾಟ್‌, ವಿಶೇಷ ಬ್ಯಾಟ್‌ನಲ್ಲಿ ಎಷ್ಟು ರನ್‌ ಗಳಿಸಲಿದ್ದಾರೆ ಎಂಬುದು ಸಾಕಷ್ಟು ಕುತೂಹಲ ಕೆರಳಿಸಿದೆ. 2008ರಲ್ಲಿ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಕೊಹ್ಲಿ, ಇತ್ತೀಚೆಗೆ (ಆಗಸ್ಟ್‌ 18) ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿಬದುಕಿನಲ್ಲಿ 14 ವರ್ಷಗಳ ಸಂಭ್ರಮ ಆಚರಿಸಿಕೊಂಡರು.

Virat Kohli will use this bat for the upcoming Asia Cup - Cricket Socials

ಶತಕ ಬಾರಿಸಿ 1000ಕ್ಕೂ ಹೆಚ್ಚು ದಿನಗಳು ಕಳೆದಿವೆ. ಈಗ ಪಾಕ್‌ ವಿರುದ್ಧದ ಏಷ್ಯಾ ಕಪ್‌ ಪಂದ್ಯದಲ್ಲಿ ತಮ್ಮ ಶ್ರೇಷ್ಠ ಲಯ ಕಂಡುಕೊಳ್ಳಲಿದ್ದಾರೆ ಎಂದೇ ನಿರೀಕ್ಷಿಸಲಾಗಿದೆ. ಆದರೆ, ಪಾಕ್‌ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಯಾವುದೇ ಕಾರಣಕ್ಕೂ ಲಯ ಕಂಡುಕೊಳ್ಳುವುದು ಬೇಡ ಅಂದು ಪಾಕ್‌ ತಂಡದ ಮಾಜಿ ನಾಯಕ ವಸೀಮ್‌ ಅಕ್ರಮ್‌ ಹೇಳಿದ್ದಾರೆ.

"ವಿರಾಟ್‌ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ಈಗಲೂ ಕೂಡ ಅದ್ಭುತ ಫಿಟ್ನೆಸ್‌ ಹೊಂದಿದ್ದಾರೆ. ಭಾರತ ತಂಡದಲ್ಲಿ ಇರುವ ಶ್ರೇಷ್ಠ ಫೀಲ್ಡರ್‌ಗಳಲ್ಲಿ ಅವರೂ ಒಬ್ಬರು. ಆಟಗಾರ ಕ್ಲಾಸ್‌ ಎಂದಿಗೂ ಶಾಶ್ವತ ಎಂದಷ್ಟೇ ಇಲ್ಲಿ ಹೇಳಬಲ್ಲೆ. ಆದರೆ, ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಮಾತ್ರ ಅವರು ತಮ್ಮ ಶ್ರೇಷ್ಠ ಲಯ ಕಂಡುಕೊಳ್ಳುವುದು ಬೇಡ. ಏಕೆಂದರೆ ಮುಂದಿನ ದಿನಗಳಲ್ಲಿ ಅವರು ಖಂಡಿತಾ ಲಯ ಕಂಡುಕೊಳ್ಳಲಿದ್ದಾರೆ," ಎಂದು ಅಕ್ರಮ್ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

ಏಷ್ಯಾ ಕಪ್‌ ಟೂರ್ನಿಗೆ ಭಾರತ ತಂಡದ ವಿವರ

  • ಓಪನರ್ಸ್‌: ರೋಹಿತ್‌ ಶರ್ಮಾ ಮತ್ತು ಕೆ.ಎಲ್‌ ರಾಹುಲ್‌
  • ಮಧ್ಯಮ ಕ್ರಮಾಂಕದ ಬ್ಯಾಟರ್ಸ್‌: ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌, ದೀಪಕ್‌ ಹೂಡ
  • ವಿಕೆಟ್‌ಕೀಪರ್ಸ್‌: ರಿಷಭ್ ಪಂತ್‌ ಮತ್ತು ದಿನೇಶ್‌ ಕಾರ್ತಿಕ್
  • ಆಲ್‌ರೌಂಡರ್ಸ್‌: ಹಾರ್ದಿಕ್‌ ಪಾಂಡ್ಯ ಮತ್ತು ರವೀಂದ್ರ ಜಡೇಜಾ
  • ವೇಗದ ಬೌಲರ್ಸ್‌: ಭುವನೇಶ್ವರ್‌ ಕುಮಾರ್‌, ಅರ್ಷದೀಪ್‌ ಸಿಂಗ್‌, ಅವೇಶ್‌ ಖಾನ್‌
  • ಸ್ಪಿನ್ನರ್ಸ್‌: ಯುಜ್ವೇಂದ್ರ ಚಹಲ್‌, ಆರ್‌ ಅಶ್ವಿನ್‌, ರವಿ ಬಿಷ್ಣೋಯ್‌
  • ಕಾಯ್ದಿರಿಸಿದ ಆಟಗಾರರು: ಅಕ್ಷರ್‌ ಪಟೇಲ್‌, ದೀಪಕ್‌ ಚಹರ್‌ ಮತ್ತು ಶ್ರೇಯಸ್‌ ಅಯ್ಯರ್‌.
  • ಮುಖ್ಯ ಕೋಚ್‌: ರಾಹುಲ್‌ ದ್ರಾವಿಡ್‌

Asia Cup 2022 Virat Kohli To Use Special Gold Mrf Bat Against Pakistan.